
ನವದೆಹಲಿ,ಜೂ.೧೨: ಮಧ್ಯಪ್ರದೇಶದಿಂದ ರಾಜ್ಯಸಭಾ ಚುನಾವಣೆಗೆ ಸಲ್ಲಿಕೆಯಾಗಿದ್ದ ತಮ್ಮ ನಾಮಪತ್ರ ತಿರಸ್ಕರಿಸಿದ ಚುನಾವಣಾಧಿಕಾರಿಯ ಕ್ರಮವನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ.
ಆದರೆ, ಪ್ರಾತಿನಿಧ್ಯ ಕಾಯ್ದೆಯಡಿ ‘ಚುನಾವಣಾ ಅರ್ಜಿ’ ಸಲ್ಲಿಸಲು ನ್ಯಾಯಾಲಯವು ಅವರಿಗೆ ಮುಕ್ತ ಅವಕಾಶ ನೀಡಿದೆ.
ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಎ.ಎಸ್. ಚಂದೂರ್ಕರ್ ಅವರನ್ನೊಳಗೊಂಡ ಪೀಠವು, ಸಂವಿಧಾನದ ೩೨೯ನೇ ವಿಧಿಯಡಿ ಇರುವ ಕಾನೂನು ನಿರ್ಬಂಧವನ್ನು ಉಲ್ಲೇಖಿಸಿ, ಈ ಹಂತದಲ್ಲಿ ರಿಟ್ ವ್ಯಾಪ್ತಿಯಡಿ ಹಸ್ತಕ್ಷೇಪ ಮಾಡಲು ನಿರಾಕರಿಸಿತು.
ಏನಿದು ಪ್ರಕರಣ?
ತೆಲಂಗಾಣ ನ್ಯಾಯಾಲಯವೊಂದರಲ್ಲಿ ದಾಖಲಾಗಿರುವ ಖಾಸಗಿ ದೂರಿಗೆ ಸಂಬಂಧಿಸಿದಂತೆ ಸಮನ್ಸ್ ಸ್ವೀಕರಿಸಿದ್ದರೂ, ಅದನ್ನು ತಮ್ಮ ನಾಮಪತ್ರದ ‘ಫಾರಂ ೨೬’ ಅಫಿಡವಿಟ್‌ನಲ್ಲಿ ಘೋಷಿಸಿಲ್ಲ ಎಂಬ ಕಾರಣ ನೀಡಿ ಜೂನ್ ೯ ರಂದು ಚುನಾವಣಾಧಿಕಾರಿ ಅರವಿಂದ್ ಶರ್ಮಾ ಅವರು ಮೀನಾಕ್ಷಿ ಅವರ ನಾಮಪತ್ರವನ್ನು ತಿರಸ್ಕರಿಸಿದ್ದರು. ಪ್ರತಿಸ್ಪರ್ಧಿಗಳು ಇಲ್ಲದ ಕಾರಣ ಉಳಿದ ಅಭ್ಯರ್ಥಿಗಳನ್ನು ಅವಿರೋಧವಾಗಿ ವಿಜೇತರು ಎಂದು ಘೋಷಿಸಲಾಗಿತ್ತು.
ಅರ್ಜಿದಾರರ ಪರ ವಾದ: ಮೀನಾಕ್ಷಿ ನಟರಾಜನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, “ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ ೩೩ಂ ಪ್ರಕಾರ, ನ್ಯಾಯಾಲಯದಲ್ಲಿ ಆರೋಪ ಹೊರಿಸಲಾದ ಕ್ರಿಮಿನಲ್ ಪ್ರಕರಣಗಳನ್ನು ಮಾತ್ರ ಬಹಿರಂಗಪಡಿಸಬೇಕಾಗುತ್ತದೆ. ಕೇವಲ ಖಾಸಗಿ ದೂರಿನ ಮೇರೆಗೆ ಬಂದಿರುವ ನೋಟಿಸ್ ಅನ್ನು ಪ್ರಕರಣ ಎಂದು ಪರಿಗಣಿಸಲು ಸಾಧ್ಯವಿಲ್ಲ. ಚುನಾವಣಾಧಿಕಾರಿಯ ನಿರ್ಧಾರವು ತಾರತಮ್ಯದಿಂದ ಕೂಡಿದೆ,” ಎಂದು ವಾದಿಸಿದರು. ಅಲ್ಲದೆ, “ಇದು ಕೇವಲ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕನ್ನು ಕಸಿದುಕೊಂಡಂತೆ,” ಎಂದರು.
ಎದುರಾಳಿ ಅಭ್ಯರ್ಥಿಯ ಪರ ವಾದಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, “ಚುನಾವಣೆಯಲ್ಲಿ ಸ್ಪರ್ಧಿಸುವುದು ಸಾಂವಿಧಾನಿಕ ಹಕ್ಕಲ್ಲ, ಅದೊಂದು ಶಾಸನಬದ್ಧ ಹಕ್ಕಷ್ಟೇ. ಸಂವಿಧಾನದ ೩೨೯ನೇ ವಿಧಿಯ ಪ್ರಕಾರ, ಒಮ್ಮೆ ಚುನಾವಣಾ ಪ್ರಕ್ರಿಯೆ ಆರಂಭವಾದರೆ ಅದರಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ಮಾಡುವಂತಿಲ್ಲ. ಯಾವುದೇ ಆಕ್ಷೇಪಣೆಗಳಿದ್ದರೂ ಅದನ್ನು ಚುನಾವಣಾ ನ್ಯಾಯಮಂಡಳಿಯ ಮೂಲಕವೇ ಬಗೆಹರಿಸಿಕೊಳ್ಳಬೇಕು,” ಎಂದು ಪ್ರತಿಪಾದಿಸಿದರು.
ವಾದ-ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್ ಪೀಠವು, “ನಾವು ಪ್ರತಿಯೊಂದು ನಾಮಪತ್ರ ತಿರಸ್ಕಾರದ ಪ್ರಕರಣಗಳಲ್ಲೂ ಹಸ್ತಕ್ಷೇಪ ಮಾಡಲು ಆರಂಭಿಸಿದರೆ, ಸಂವಿಧಾನದ ೩೨೯ನೇ ವಿಧಿಗೆ ಬೆಲೆ ಇಲ್ಲದಂತಾಗುತ್ತದೆ. ಪ್ರಕರಣದ ಗುಣಾವಗುಣಗಳ ಬಗ್ಗೆ ನಾವು ಯಾವುದೇ ಅಭಿಪ್ರಾಯ ವ್ಯಕ್ತಪಡಿಸುತ್ತಿಲ್ಲ. ಅರ್ಜಿದಾರರು ನಿಯಮಾನುಸಾರ ಚುನಾವಣಾ ಅರ್ಜಿ ಸಲ್ಲಿಸಲು ಸ್ವತಂತ್ರರು,” ಎಂದು ಸ್ಪಷ್ಟಪಡಿಸಿ ಅರ್ಜಿಯನ್ನು ವಿಲೇವಾರಿ ಮಾಡಿತು.
ಹೈಕೋರ್ಟಿಗೆ ಮೊರೆ: ಖರ್ಗೆ
ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕೃತ ವಿಚಾರ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಹೈಕೋರ್ಟಿಗೆ ಮೊರೆ ಮೊರೆ ಹೋಗಲಿದೆ ಎಂದು ಎಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು
ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಚುನಾವಣಾ ಅಧಿಕಾರಿ ಹಾಗೂ ರಾಜ್ಯ ವಿಧಾನಸಭೆಯ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ ಅವರಿಂದ ಆಯ್ಕೆಯ ಪ್ರಮಾಣ ಪತ್ರ ಪಡೆದ ಬಳಿಕ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮೀನಾಕ್ಷಿ ನಟರಾಜನ್ ರವರದು ವಿಶೇಷ ಪ್ರಕರಣ, ಈ ಪ್ರಕರಣವನ್ನ ಎಳೆಯಲು, ಅವರು ಹೆಚ್ಚು ಸಮಯ ತೆಗೆದುಕೊಂಡಿದ್ದಾರೆ
ಸುಪ್ರೀಂಕೋರ್ಟ್ ಹೇಳಿದಂತೆ ನಾವು ಹೈಕೋರ್ಟ್‌ಗೆ ಹೋಗುತ್ತೇವೆ ಎಂದರು.
ಮಧ್ಯಪ್ರದೇಶದಲ್ಲಿ ನಡೆದದ್ದು ಕಾನೂನುಬಾಹಿರ ಮತ್ತು ಪ್ರಜಾಪ್ರಭುತ್ವ ವಿರೋಧಿ ಮೋದಿ ಇಲ್ಲದೆ ಇದು ಆಗುತ್ತಿರಲಿಲ್ಲ, ಬಿಜೆಪಿ ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿದೆ ಎಂದು ಆರೋಪಿಸಿದರು. ಬಿಜೆಪಿ ತನ್ನ ಎಲ್ಲ ಜನರನ್ನು ಎಲ್ಲೆಡೆ ಕೂರಿಸಿದೆ.
ಜಾರ್ಖಂಡ್‌ನಲ್ಲೂ ಇದೇ ರೀತಿ ಆಯ್ತು ಮತ ಖರೀದಿ, ವಿಭಜನೆ ಮತ್ತು ಏಜೆಂಟರನ್ನು ಇರಿಸಲಾಗುತ್ತದೆ
ಪ್ರಜಾಪ್ರಭುತ್ವದಲ್ಲಿ ಹಸ್ತಕ್ಷೇಪ ಇರಬಾರದು ಎಂದರು
ಆರ್‌ಎಸ್‌ಎಸ್ ಏಜೆಂಟ್‌ಗಳನ್ನು ಎಲ್ಲೆಡೆ ಇರಿಸಲಾಗಿದೆ. ನಿಯಮಗಳನ್ನು ಯಾರು ಪರಿಶೀಲಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ ಸೋನಿಯಾ ಗಾಂಧಿ ರಾಹುಲ್ ಗಾಂಧಿ ಹಾಗೂ ರಾಜ್ಯದ ಎಲ್ಲಾ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಅವರು ಇದೇ ಸಂದರ್ಭದಲ್ಲಿ ಧನ್ಯವಾದ ಹೇಳಿದರು.

























