Home ಮುಖಪುಟ ಸುದ್ದಿ ಸಗಟು ಇಂಧನ ಖರೀದಿ ನಿಷೇಧ

ಸಗಟು ಇಂಧನ ಖರೀದಿ ನಿಷೇಧ

ನವದೆಹಲಿ.ಜೂ.೧೨:ಕೈಗಾರಿಕಾ ಹಾಗೂ ವಾಣಿಜ್ಯ ಬಳಕೆಯ ಗ್ರಾಹಕರು ಇನ್ಮುಂದೆ ಚಿಲ್ಲರೆ ಮಾರಾಟ ಮಳಿಗೆಗಳಿಂದ (ಪೆಟ್ರೋಲ್ ಬಂಕ್‌ಗಳು) ಸಗಟು ಇಂಧನ ಖರೀದಿಸುವುದನ್ನು ಸರ್ಕಾರ ಕಡ್ಡಾಯವಾಗಿ ನಿಷೇಧಿಸಿದೆ.ಇತ್ತೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದಲ್ಲಿ ಕಂಡುಬಂದಿರುವ ಅಸಹಜ ಏರಿಕೆಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಕಚ್ಚಾ ತೈಲ ಬೆಲೆಗಳು ಗಗನಕ್ಕೇರುತ್ತಿವೆ. ಇದರ ಬೆನ್ನಲ್ಲೇ ಕೈಗಾರಿಕಾ ಮತ್ತು ವಾಣಿಜ್ಯ ಬಳಕೆಯ ಗ್ರಾಹಕರು ಬಂಕ್‌ಗಳ ಮೊರೆ ಹೋಗುತ್ತಿರುವುದನ್ನು ತಡೆಯಲು ತಡರಾತ್ರಿ ಸರ್ಕಾರ ಈ ಹೊಸ ಆದೇಶ ಹೊರಡಿಸಿದೆ. ಇಂತಹ ಗ್ರಾಹಕರು ಇನ್ಮುಂದೆ ತಮಗಾಗಿಯೇ ನಿಗದಿಪಡಿಸಲಾಗಿರುವ ಬಲ್ಕ್ (ಸಗಟು) ಸಪ್ಲೈ ಚಾನೆಲ್‌ಗಳ ಮೂಲಕವೇ ಇಂಧನವನ್ನು ಖರೀದಿಸಬೇಕಾಗುತ್ತದೆ.

ಸರ್ಕಾರದ ಹೊಸ ನಿಯಮದ ಪ್ರಕಾರ, ಯಾವುದೇ ಒಬ್ಬ ಗ್ರಾಹಕನಿಗೆ ಅಥವಾ ಒಂದು ವಾಹನಕ್ಕೆ ದಿನವೊಂದಕ್ಕೆ ಗರಿಷ್ಠ ೨೦೦ ಲೀಟರ್‌ಗಿಂತ ಹೆಚ್ಚು ಡೀಸೆಲ್ ವಿತರಿಸದಂತೆ ಪೆಟ್ರೋಲ್ ಬಂಕ್‌ಗಳಿಗೆ ಕಡಕ್ ಸೂಚನೆ ನೀಡಲಾಗಿದೆ. ಅಲ್ಲದೆ, ಬಂಕ್‌ಗಳಿಂದ ಖರೀದಿಸಿದ ಇಂಧನವನ್ನು ಮರುಮಾರಾಟ ಮಾಡುವಂತಿಲ್ಲ. ಈ ನಿಯಮವು ಮುಂದಿನ ೯೦ ದಿನಗಳವರೆಗೆ ಜಾರಿಯಲ್ಲಿರಲಿದ್ದು, ಅಗತ್ಯಬಿದ್ದರೆ ಅವಧಿಗೂ ಮುನ್ನವೇ ಹಿಂಪಡೆಯುವ ಅವಕಾಶವಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಸಗಟು ಖರೀದಿದಾರರಿಗೆ ಮಾರಾಟ ಮಾಡುವ ಕೈಗಾರಿಕಾ ಡೀಸೆಲ್ ದರವು, ಸಾಮಾನ್ಯ ಪೆಟ್ರೋಲ್ ಬಂಕ್‌ಗಳಲ್ಲಿ ಸಿಗುವ ದರಕ್ಕಿಂತ ಲೀಟರ್‌ಗೆ ಬರೋಬ್ಬರಿ ?೪೦ ರಷ್ಟು ದುಬಾರಿಯಾಗಿದೆ. ಈ ಭಾರಿ ಬೆಲೆ ವ್ಯತ್ಯಾಸದಿಂದಾಗಿ, ಮೇ ೨೭ ರ ಹೊತ್ತಿಗೆ ಸಗಟು ಮಾರಾಟದಲ್ಲಿ ಶೇ. ೨೯ ರಷ್ಟು ಕುಸಿತ ಕಂಡುಬಂದಿತ್ತು. ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಸ್ಥೆಗಳು ಸಗಟು ಮಾರುಕಟ್ಟೆಯನ್ನು ಬಿಟ್ಟು ಸಾಮಾನ್ಯ ಗ್ರಾಹಕರು ಬಳಸುವ ಪೆಟ್ರೋಲ್ ಬಂಕ್‌ಗಳಿಂದ ಇಂಧನ ಖರೀದಿಸಲು ಆರಂಭಿಸಿದ್ದೇ ಈ ಕಟ್ಟುನಿಟ್ಟಿನ ಕ್ರಮಕ್ಕೆ ಕಾರಣವಾಗಿದೆ.

ಕೈಗಾರಿಕೋದ್ಯಮಿಗಳು ಬಂಕ್‌ಗಳಿಂದ ದೊಡ್ಡ ಪ್ರಮಾಣದಲ್ಲಿ ಇಂಧನ ಖರೀದಿಸುವುದರಿಂದ, ಸಾಮಾನ್ಯ ಜನರಿಗೆ ಇಂಧನ ಕೊರತೆಯಾಗುವ ಒಳಸಂಚು ಎದುರಾಗಿದೆ. ಇದು ಸ್ಥಳೀಯವಾಗಿ ಇಂಧನ ಅಭಾವ ಸೃಷ್ಟಿಸಿ, ಅಗತ್ಯ ಸೇವೆಗಳ ಮೇಲೆಯೂ ಪರಿಣಾಮ ಬೀರಬಹುದು ಎಂದು ಸರ್ಕಾರ ಆತಂಕ ವ್ಯಕ್ತಪಡಿಸಿದೆ.

ಕಚ್ಚಾ ತೈಲ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಕಳೆದ ೧೦ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಒಟ್ಟು ೪ ಬಾರಿ ಹೆಚ್ಚಿಸಲಾಗಿದ್ದು, ಒಟ್ಟಾರೆ ೭.೫ ರಷ್ಟು ಬೆಲೆ ಏರಿಕೆಯಾಗಿದೆ. ಇಷ್ಟಾದರೂ ಸಹ, ದೇಶದ ಸರ್ಕಾರಿ ತೈಲ ಮಾರಾಟ ಕಂಪನಿಗಳು ಇನ್ನೂ ಡೀಸೆಲ್ ಮೇಲೆ ಪ್ರತಿ ಲೀಟರ್‌ಗೆ ೩೦ ಮತ್ತು ಪೆಟ್ರೋಲ್ ಮೇಲೆ ಪ್ರತಿ ಲೀಟರ್‌ಗೆ ?೬ ರಷ್ಟು ನಷ್ಟ ಅನುಭವಿಸುತ್ತಿವೆ.

ಮತ್ತೊಂದೆಡೆ, ಏಪ್ರಿಲ್ ಮತ್ತು ಮೇ ತಿಂಗಳ ನಡುವೆ ದೇಶದಲ್ಲಿ ಡೀಸೆಲ್ ಬಳಕೆ ಶೇ. ೪.೭ ರಷ್ಟು ಮತ್ತು ಪೆಟ್ರೋಲ್ ಬಳಕೆ ಶೇ. ೬ ರಷ್ಟು ಹೆಚ್ಚಾಗಿದೆ ಎಂದು ಸರ್ಕಾರದ ತಾತ್ಕಾಲಿಕ ಅಂಕಿ-ಅಂಶಗಳು ತಿಳಿಸಿವೆ.