Home ಮುಖಪುಟ ಸುದ್ದಿ ಎಂಬಿಎಸ್ ಕೋರ್ಸ್ ಶುಲ್ಕ ಏರಿಸದಿರಲು ನಿರ್ಧಾರ

ಎಂಬಿಎಸ್ ಕೋರ್ಸ್ ಶುಲ್ಕ ಏರಿಸದಿರಲು ನಿರ್ಧಾರ

ಬೆಂಗಳೂರು, ಜೂ. ೧೨- ರಾಜ್ಯದ ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಶುಲ್ಕವನ್ನು ಏರಿಕೆ ಮಾಡದಿರುವ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿದೆ.


ವೈದ್ಯಕೀಯ ಮತ್ತು ದಂತ ವೈದ್ಯಕೀಯ ಶಿಕ್ಷಣಶುಲ್ಕವನ್ನು ಏರಿಕೆ ಮಾಡಬೇಕು ಎಂಬ ಬೇಡಿಕೆಯನ್ನು ಖಾಸಗಿ ವೈದ್ಯಕೀಯ ಕಾಲೇಜುಗಳು ಇಟ್ಟಿದ್ದವಾದರೂ ಅದನ್ನು ತಳ್ಳಿ ಹಾಕಿರುವ ರಾಜ್ಯ ಸರ್ಕಾರ, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಶುಲ್ಕ ಏರಿಕೆ ಮಾಡದಿರುವ ತೀರ್ಮಾನ ಕೈಗೊಂಡಿದ್ದು, ಕಳೆದ ವರ್ಷ ಶುಲ್ಕವೆ ಈ ವರ್ಷವೂ ಇರಲಿದೆ.


ನೈದ್ಯಕೀಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ನೇತೃತ್ವದಲ್ಲಿ ವಿಧಾನಸೌಧದಲ್ಲಿಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಶುಲ್ಕ ಏರಿಕೆ ಮಾಡದಿರುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.


ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ, ಮರು ಪರೀಕ್ಷೆ ಇವುಗಳಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಬಸವಳಿದಿದ್ದು, ಒಂದು ರೀತಿ ಆಘಾತದ ಸ್ಥಿತಿಯಲ್ಲಿದ್ದಾರೆ. ಹೀಗಿರುವಾಗ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಶುಲ್ಕವನ್ನು ಏರಿಸುವುದು ಸಮಂಜಸವಲ್ಲ ಎಂಬ ತೀರ್ಮಾನಕ್ಕೆ ವೈದ್ಯಕೀಯ ಶಿಕ್ಷಣ ಸಚಿವರು ಬಂದಿದ್ದು, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಶುಲ್ಕವನ್ನು ಏರಿಕೆ ಮಾಡದಿರುವುದನ್ನು ಈ ಸಭೆಯಲ್ಲಿ ಕೈಗೊಳ್ಳಲಾಗಿದೆ.


ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಇಂದಿನ ಸಭೆಯಲ್ಲಿ ರಾಜ್ಯಸಭಾ ಸದಸ್ಯ ರಾಧಾಕೃಷ್ಣ, ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜಿನ ಮುಖ್ಯ ಕಾರ್ಯದರ್ಶಿ ಎಂ.ಆರ್.ಜಯರಾಂ, ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೊಹಮದ್ ಮೊಹಿಸಿನ್ ಸೇರಿದಂತೆ ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಸಂಘದ ಪದಾಧಿಕಾರಿಗಳು, ಕಾಮೆಡ್-ಕೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು.