
ವಿಜಯಪುರ, ಆ. 31:
ಮಠ-ಮಾನ್ಯಗಳ ಪ್ರವಚನಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಉತ್ತಮ ನಡೆ-ನುಡಿ ಬೆಳೆದು, ಬಸವಾದಿ ಶರಣರ ದಾಸೋಹ ತತ್ವ ಎಲ್ಲೆಡೆ ನೆಲೆಗೊಳ್ಳುತ್ತಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಬಬಲೇಶ್ವರ ಪಟ್ಟಣದ ಗುರುಪಾದೇಶ್ವರ ಬೃಹನ್ಮಠದಲ್ಲಿ ಶನಿವಾರ ರಾತ್ರಿ ನಡೆದ ಶ್ರೀ ಗುರುಪಾದೇಶ್ವರ ಶಿವಯೋಗಿಗಳ 184ನೇ ಮಹಾಗಣಾರಾಧನೆ, ಡಾ. ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳ ವಜ್ರಮಹೋತ್ಸವ ಹಾಗೂ ಉತ್ತರಾಧಿಕಾರಿ ಪೂಜ್ಯ ಮಲ್ಲಿಕಾರ್ಜುನ ದೇವರ ಪಟ್ಟಾಧಿಕಾರ ಅಂಗವಾಗಿ ಆಯೋಜಿಸಿದ್ದ ‘ತಿರಂಗಾ ಬುತ್ತಿ ಯಾತ್ರೆ’ಯನ್ನು ಮಠದ ಮಹಾದ್ವಾರದಲ್ಲಿ ಸ್ವಾಗತಿಸಿ, ಬಳಿಕ ನಡೆದ ಪ್ರವಚನ ಸಮಾರಂಭದಲ್ಲಿ ಅವರು ಮಾತನಾಡಿದರು.
12ನೇ ಶತಮಾನದ ಶರಣರ ಯುಗವೇ ಬಬಲೇಶ್ವರ ಮಠದ ಕಾರ್ಯಕ್ರಮದಲ್ಲಿ ಮರುಕಳಿಸಿದಂತೆ ಭಾಸವಾಗುತ್ತಿದೆ. ತಾಯಂದಿರು ಭಕ್ತಿ ಹಾಗೂ ಶ್ರದ್ಧೆಯಿಂದ ಬುತ್ತಿ ಉತ್ಸವದಲ್ಲಿ ಪಾಲ್ಗೊಂಡಿರುವುದು ಶ್ಲಾಘನೀಯ. ಈ ಸೇವೆಯಲ್ಲಿ ತಮ್ಮದೂ ಒಂದು ಅಗುಳಿನ ಪಾತ್ರವಿದ್ದು, ಬಬಲೇಶ್ವರ ಸೇರಿದಂತೆ ಈ ಭಾಗಕ್ಕೆ ನೀರು ಹರಿಸಿದ ತೃಪ್ತಿ ಇದೆ ಎಂದು ಸಚಿವರು ಹೇಳಿದರು.
“ಸಮೃದ್ಧ ಬೆಳೆ ಬೆಳೆದು ರೈತರು ಸುಖವಾಗಿದ್ದಾರೆ. ಅಂತಹ ಮನೆಗಳಿಂದ ಬಂದ ರೊಟ್ಟಿಗೆ ನೀರು ದೊರೆತ ನೆಮ್ಮದಿ ನನಗಿದೆ. ಸಿದ್ದೇಶ್ವರ ಶ್ರೀಗಳ ಆಶಯದಂತೆ ವಿಜಯಪುರಕ್ಕೆ ಅಂಟಿಕೊಂಡಿದ್ದ ‘ಬರದ ನಾಡು’ ಎಂಬ ಹಣೆಪಟ್ಟಿ ತೆಗೆಯಲು ಶ್ರಮಿಸಿದ್ದೇನೆ,” ಎಂದರು.
ವಿಜಯಪುರ ಜಿಲ್ಲೆ ಹಿಂದೆ ಭೀಕರ ಬರಗಾಲಕ್ಕೆ ತುತ್ತಾಗಿತ್ತು. ಜಿಲ್ಲೆಯ ಅರ್ಧದಷ್ಟು ಭೂಮಿಗೂ ನೀರಾವರಿ ಸೌಲಭ್ಯ ಇರಲಿಲ್ಲ. ಬಬಲೇಶ್ವರ ಹಾಗೂ ತಿಕೋಟಾ ಭಾಗಗಳಿಗೆ ಶಕ್ತಿ ಮೀರಿ ನೀರು ಒದಗಿಸಲಾಗಿದೆ. ಇದಕ್ಕಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನೆನೆಯಬೇಕು. ಇಂದು ಬರಗಾಲದ ಪರಿಸ್ಥಿತಿ ಇದ್ದರೂ ಈ ಭಾಗದಲ್ಲಿ ಅದರ ಪರಿಣಾಮ ಕಡಿಮೆಯಾಗಿದೆ. ಕೆರೆ, ಹಳ್ಳಗಳಿಗೂ ನೀರು ದೊರೆತಿದೆ ಎಂದು ಅವರು ವಿವರಿಸಿದರು.
ನೀರಾವರಿ ಯೋಜನೆಗಳನ್ನು ಪ್ರಾಧಿಕಾರದ ಗೆಜೆಟ್ ಅಧಿಸೂಚನೆಗೂ ಮುನ್ನವೇ ಸಾಕಾರಗೊಳಿಸಿದ್ದು ಈಗ ಇತಿಹಾಸವಾಗಿದೆ. ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ನಂತರ ಮಣಕವಾಡಿ ಶ್ರೀಗಳ ಪ್ರವಚನಗಳು ಜನಮಾನಸ ತಲುಪುತ್ತಿವೆ. ಬಸವಾದಿ ಶರಣರ ವಿಚಾರಗಳನ್ನು ಶ್ರೀಗಳು ಎಲ್ಲೆಡೆ ತಲುಪಿಸುತ್ತಿದ್ದಾರೆ. ಮಣಕವಾಡಿಯಲ್ಲಿ ಅವರು ಆರಂಭಿಸಿರುವ ಆಧುನಿಕ ಶಾಲೆ ಅವರ ಶಕ್ತಿ ಹಾಗೂ ಸಾಹಸಕ್ಕೆ ಸಾಕ್ಷಿಯಾಗಿದೆ ಎಂದರು.
ವಚನಪಿತಾಮಹ ಡಾ. ಫ.ಗು. ಹಳಕಟ್ಟಿ, ಬಂಥನಾಳ ಶಿವಯೋಗಿ ಹಾಗೂ ಶಾಂತವೀರ ಶ್ರೀಗಳು ಈ ಭಾಗದ ರತ್ನಗಳು. ಪ್ರಸ್ತುತ ಡಾ. ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳದ್ದು ಮಗುವಿನ ಮನಸ್ಸು. ಮಠ-ಮಾನ್ಯಗಳಿಗೆ ತಮ್ಮ ಸೇವೆ ಹಾಗೂ ಸಹಕಾರ ನಿರಂತರವಾಗಿರಲಿದೆ ಎಂದು ಎಂ.ಬಿ. ಪಾಟೀಲ ಭರವಸೆ ನೀಡಿದರು.
ಮಾನವೀಯತೆ, ಸಮಾನತೆಯ ಸಂದೇಶ
ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮಿಗಳು ಮಾತನಾಡಿ, ಕಲ್ಯಾಣದ ಶರಣರ ಭಾವ ಇಲ್ಲಿನ ಹೆಣ್ಣುಮಕ್ಕಳಲ್ಲಿ ಕಾಣುತ್ತಿದೆ. ಬಬಲೇಶ್ವರದ ಜನರು ಭಕ್ತಿ ಮತ್ತು ಭಾವದಲ್ಲಿ ಎಲ್ಲರನ್ನೂ ಮೀರಿಸಿದ್ದಾರೆ ಎಂದರು.
ಪ್ರವಚನ ನೀಡಿದ ಮಣಕವಾಡದ ಮೃತ್ಯುಂಜಯ ಶ್ರೀಗಳು ಮಾತನಾಡಿ, ಗುರು ಪರಂಪರೆಯ ಮಠದಲ್ಲಿ ಶರಣರ ವಿಚಾರ ದರ್ಶನ ನಡೆಯುತ್ತಿರುವುದು ಅನನ್ಯ. ಬಬಲೇಶ್ವರದ ಜನರು ಯಾವುದೇ ಕಾರ್ಯ ಕೈಗೊಂಡರೂ ಅದನ್ನು ದೊಡ್ಡ ಮಟ್ಟದಲ್ಲಿ ಮಾಡುತ್ತಾರೆ. ಅವರ ಮನಸ್ಸು ವಿಶಾಲವಾಗಿದೆ ಎಂದು ಹೇಳಿದರು.
ಮಣಕವಾಡಿಯಲ್ಲಿ ಶಾಲೆ ಆರಂಭಿಸಲು ಸಚಿವ ಎಂ.ಬಿ. ಪಾಟೀಲ ಅವರಿಂದ ಗುದ್ದಲಿ ಪೂಜೆ ಮಾಡಿಸಲಾಗಿತ್ತು. ಯಾವುದೇ ಸಂಪನ್ಮೂಲವಿಲ್ಲದ ಸಂದರ್ಭದಲ್ಲೂ ಆರಂಭಗೊಂಡ ಶಾಲೆ ಇಂದು ಬೃಹದಾಕಾರವಾಗಿ ಬೆಳೆದಿದೆ. ಮನುಷ್ಯನ ಸಾಧನೆಗೆ ಇಚ್ಛಾಶಕ್ತಿಯೇ ಮುಖ್ಯ ಎಂದು ಅವರು ಹೇಳಿದರು.
ತ್ರಿವರ್ಣ ಧ್ವಜದ ಬಣ್ಣದಲ್ಲಿ ಹೆಣ್ಣುಮಕ್ಕಳು ಬುತ್ತಿಯ ಬುಟ್ಟಿಗಳನ್ನು ಹೊತ್ತು ತಂದಿರುವುದು ಮಾನವೀಯತೆ ಹಾಗೂ ಸಮಾನತೆಯ ಸಂದೇಶ ಸಾರುತ್ತಿದೆ. 1008 ಜನರು ರಕ್ತದಾನ ಮಾಡುತ್ತಿರುವುದು ಶ್ಲಾಘನೀಯ. ಪ್ರವಚನಗಳು ಮತ್ತು ಪುರಾಣಗಳು ಸಾಮಾಜಿಕ ಬದಲಾವಣೆಗೆ ಕಾರಣವಾಗಬೇಕು. ಬಸವಣ್ಣನವರು ಮಾನವೀಯತೆಯ ಯುಗ ಪ್ರವರ್ತಕರಾಗಿದ್ದು, ಮಹಿಳೆಯರಿಗೆ ಸಮಾನ ಸ್ಥಾನ ಕಲ್ಪಿಸಿದುದಕ್ಕೆ ಸತ್ಯಕ್ಕ ಹಾಗೂ ಗೊಗ್ಗವ್ವೆಯಂತಹ ಶರಣೆಯರು ಸಾಕ್ಷಿಯಾಗಿದ್ದಾರೆ ಎಂದರು.
ವಿಜಯಪುರದ ಅಭಿನವ ಸಿದ್ಧಾರೂಢ ಶ್ರೀಗಳು ಮಾತನಾಡಿ, ಆಕಾಶದಿಂದ ಬಿದ್ದ ನೀರನ್ನು ರೈತರ ಹೊಲಗಳಿಗೆ ಹರಿಸಿದ ಸಾಧಕ ಸಚಿವ ಎಂ.ಬಿ. ಪಾಟೀಲ. ಬರಡು ಭೂಮಿಯಲ್ಲಿ ಬಂಗಾರದಂತಹ ಬೆಳೆ ಬೆಳೆಯುವಂತಾಗಿದೆ. ರೈತರು ಅವರನ್ನು ಸ್ಮರಿಸುತ್ತಾರೆ. ಬೆಳೆಯುತ್ತಿರುವ ಸನ್ಯಾಸಿಗಳ ಹಿಂದೆಯೂ ಅವರ ಸಹಕಾರವಿದೆ. ಶರಣ ಪರಂಪರೆಯನ್ನು ಮುಂದುವರಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಡಾ. ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಮನಗೂಳಿಯ ಅಭಿನವಸಂಗನಬಸವ ಶಿವಾಚಾರ್ಯರು, ಮಲ್ಲಿಕಾರ್ಜುನ ದೇವರು, ಮೈಸೂರಿನ ನಿರಂಜನ ದೇವರು ಹಾಗೂ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.































