
ಗದಗ, ಸೆ೨೨: ರಕ್ತವನ್ನು ಯಾವುದೇ ಕಾರ್ಖಾನೆಯಲ್ಲಿ ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ ಇದನ್ನು ಕೇವಲ ಮಾನವರಿಂದ ಮಾತ್ರ ಪಡೆಯಲು ಸಾಧ್ಯ. ಯಾವುದೇ ಜಾತಿ ಮತ ಭೇದವಿಲ್ಲದೆ ಒಬ್ಬರ ರಕ್ತ ಇನ್ನೊಬ್ಬರ ಜೀವ ಉಳಿಸುವುದರಿಂದ ಇದು ಸಮಾಜದಲ್ಲಿ ಮಾನವೀಯತೆ ಮತ್ತು ಒಗ್ಗಟ್ಟನ್ನು ಬೆಳೆಸುತ್ತದೆ. ೧೮ ರಿಂದ ೬೫ ವರ್ಷದೊಳಗಿನ ಆರೋಗ್ಯವಂತ ವ್ಯಕ್ತಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಸುರಕ್ಷಿತವಾಗಿ ರಕ್ತದಾನ ಮಾಡಬಹುದಾಗಿದೆ .ರಕ್ತದಾನ ಮಾಡಿದ ನಂತರ ದೇಹವು ವೇಗವಾಗಿ ಹೊಸ ರಕ್ತದ ಕಣಗಳನ್ನು ಉತ್ಪಾದಿಸುತ್ತದೆ ಇದು ದೇಹವನ್ನು ಹೆಚ್ಚು ಸುಸ್ತು ರಹಿತವಾಗಿ ಮತ್ತು ಚುರುಕಾಗಿರಲು ಸಹಾಯಮಾಡುತ್ತದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳಾದ ಡಾ. ರಾಜೇಂದ್ರ ಎಸ್ ಗಡಾದ ಅವರು ಹೇಳಿದರು.
ಇಲ್ಲಿಯ ಕಳಸಾಪುರ ರಸ್ತೆಯಲ್ಲಿಯ ಸಾರಿಗೆ ನಗರದ ಈಶ್ವರ ದೇವಸ್ಥಾನದಲ್ಲಿ ಸಾರಿಗೆ ನಗರ ಯುಥ್ ಅಸೋಸಿಯೇಷನ್, ಗದಗ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಪ್ರಾಥಮಿಕ ಆರೋಗ್ಯ ಕೇಂದ್ರ ನಾಗಾವಿ ,ಕೆ ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬಾಸಲ್ ಮಿಷನ್ ಆಸ್ಪತ್ರೆ ಹಾಗೂ ಸುರಕ್ಷಾ ಸ್ಕಿನ್ ಕೇರ್ ಕ್ಲಿನಿಕ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರ ಹಾಗೂ ಎನ್ ಸಿ ಡಿ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು, ಮುಂದುವರೆದು ಮಾತನಾಡುತ್ತಾ ರಕ್ತದಾನವು ಮಾನವಕುಲಕ್ಕೆ ನೀಡಬಹುದಾದ ಅತ್ಯಂತ ಶ್ರೇಷ್ಠ ಕೊಡುಗೆಯಾಗಿದೆ ತೀವ್ರ ಅಪಘಾತಗಳು ಶಸ್ತçಚಿಕಿತ್ಸೆಗಳು ಮತ್ತು ಪ್ರಸವದ ಸಮಯದಲ್ಲಿ ರಕ್ತದ ಅಗತ್ಯವಿರುವ ರೋಗಿಗಳಿಗೆ ರಕ್ತದಾನವು ಹೊಸ ಜೀವನವನ್ನು ನೀಡುತ್ತದೆ .ಕ್ಯಾನ್ಸರ್, ಥೇಲಸೆಮೀಯಾ ಮತ್ತು ಹಿಮೋಫಿಲಿಯಾದಂತಹ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ನಿಯಮಿತವಾಗಿ ರಕ್ತದ ಅವಶ್ಯಕತೆಗಳನ್ನು ನೀಡುತ್ತದೆ ಎಂದರು.
ಕೆ ಎಚ್ ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ರಕ್ತ ಕೇಂದ್ರದ ವೈದ್ಯಾಧಿಕಾರಿಗಳಾದ. ಡಾ. ಎನ್ ಅಕ್ಷತಾ, ಬಾಸೆಲ್ ಮಿಷನ್ ಆಸ್ಪತ್ರೆಯ ಡಾ. ಅರುಣಿ, ಚರ್ಮರೋಗ ತಜ್ಞರಾದ ಡಾ. ಸರೋಜಾ ಪಾಟೀಲ, ಯುವ ವೈದ್ಯರಾದ ಡಾ. ರಾಘು,ಡಾ. ಚಂದ್ರಹಾಸ್ ಅವರು ರಕ್ತದಾನ ಹಾಗೂ ಎನ್.ಸಿ.ಡಿ ಶಿಬಿರದಲ್ಲಿ ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಿದರು.
ನಾಗಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷತಾ ಅಧಿಕಾರಿ ಶ್ರೀ ಶಾಮುವೆಲ್ಲ ಕರಡಿಗುಡ್ಡ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಬಸವರಾಜ ಲಾಲಗಟ್ಟಿ ಅವರು ದೇಹದಲ್ಲಿರುವ ಎಚ್ ಐ ವಿ ಸ್ಥಿತಿಯನ್ನು ತಿಳಿದುಕೊಳ್ಳುವ ಕ್ಯೂಆರ್ ಕೋಡ್ ಸ್ವಯಂ ಪರೀಕ್ಷೆಯನ್ನು ಪ್ರಾತ್ಯಕ್ಷಿಕೆಯಾಗಿ ತಿಳಿಸಿಕೊಟ್ಟರು.
ಸಾರಿಗೆ ನಗರ ಯುಥ್ ಅಸೋಶಿಯೇಶನ್ ದ ಪದಾಧಿಕಾರಿಗಳಾದ ಶ್ರೀನಿವಾಸ್ ಸಚಿನ್, ರವಿ ಸಾಲಿಮಠ, ವಿನಯ್ ಕಾಡದೇವರ ಮಠ, ಗುರುನಾಥ್ ಬಸವ ರೆಡ್ಡಿ, ಪ್ರತಕ್ ಅಮರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರಾದ ಶ್ರೀ ಲಿಂಬಿಕಾಯಿ, ಎಂ. ಕೆ ಮಂಜುನಾಥ್, ಎಸ್ ಬಿ ಪಾಟೀಲ್ ಶ್ರೀಮತಿ ಅನ್ನಪೂರ್ಣೇಶ್ವರಿ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ರೇಣುಕಾ ಪಾಟೀಲ್ ಆಶಾ ಕಾರ್ಯಕರ್ತೆಯರಾದ ಶ್ರೀಮತಿ ರತ್ನಾ ಲಮಾಣಿ ಶ್ರೀಮತಿ ದೇವಕ್ಕ ಎಂ ಚೌಹಾನ್, ಕುಮಾರಿ ರೇಷ್ಮಾ ರಿತ್ತಿ ,ಎಸ್ ಸಾರಿಯ, ಕುಮಾರಿ ಪಾರ್ವತಿ, ಮದರ್ ತೆರೇಸಾ ಸ್ಕೂಲ್ ಆಫ್ ನರ್ಸಿಂಗ್ ದ ವಿದ್ಯಾರ್ಥಿನಿಯರು ಶಿಬಿರದಲ್ಲಿ ಸೇವೆಯನ್ನು ಒದಗಿಸಿದರು. ಸಾರಿಗೆ ನಗರದ ಸಾರ್ವಜನಿಕರು ಎರಡು ಶಿಬಿರಗಳಲ್ಲಿ ಪಾಲ್ಗೊಂಡಿದ್ದರು.























