ಬೀದರ್: ಸಂಶೋಧಕ ಬಿ.ಎಲ್. ರೈಸ್ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ ಎಂದು ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥ ಡಾ. ವೆಂಕಟರಾವ್ ಎಂ. ಪಲಾಟೆ ಹೇಳಿದರು.
ರೆವರೆಂಡ್ ಡಾ. ಜೆ.ಟಿ. ಸೀಮಂಡ್ಸ್ ಕನ್ನಡ ಸಾಹಿತ್ಯ ಸಂಘದಿAದ ನಗರದ ಮಂಗಲಪೇಟ್‌ನ ರೆವರೆಂಡ್ ರಾಸ್ ಮೆಮೋರಿಯಲ್ ಹಳೆಯ ಚರ್ಚನಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ರಂಥ ಸಂಪಾದನೆ ಮತ್ತು ಬಿ.ಎಲ್. ರೈಸ್ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ರೈಸ್ ಅವರು ರಾಜ್ಯದಲ್ಲಿ ಮೊದಲ ಬಾರಿಗೆ ಒಂಬತ್ತು ಸಾವಿರ ಶಾಸನಗಳನ್ನು ಸಂಗ್ರಹಿಸಿ, ಅವುಗಳ ಶಾಸ್ತ್ರೀಯ ಅಧ್ಯಯನ ಮಾಡಿದ್ದರು. ಶಾಸನಗಳನ್ನು ಕಾಲಾನುಕ್ರಮವಾಗಿ ಜೋಡಿಸಿ, ಆ ವರೆಗೆ ಕಾಲ ಗರ್ಭದಲ್ಲಿ ಮುಚ್ಚಿ ಹೋಗಿದ್ದ ಕರ್ನಾಟಕದ ಘನ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ ಶ್ರೇಯ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ದೇಶದಲ್ಲಿ ಮೊದಲ ಬಾರಿಗೆ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ರಾಂತಿ ಮಾಡಿದ್ದು ಕ್ರೈಸ್ತ ಮಿಷನರಿಗಳು ಎಂದು ಹೇಳಿದರು.
ಸತಿ ಸಹಗಮನ ಪದ್ಧತಿ, ಸ್ತ್ರೀ ಸ್ವಾತಂತ್ರ‍್ಯ, ವಿಧವಾ ವಿವಾಹ, ಶಿಕ್ಷಣದ ಸಾರ್ವತ್ರೀಕರಣ ಹಾಗೂ ಹೆಣ್ಣು ಶಿಶು ಹತ್ಯೆಯಂತಹ ಸಾಮಾಜಿಕ ಅನಿಷ್ಠ ಪದ್ಧತಿಗಳನ್ನು ತೊಲಗಿಸಿದರು ಎಂದು ತಿಳಿಸಿದರು.
ಕ್ರೈಸ್ತ ಮಿಷನರಿಗಳು ದಲಿತ, ಹಿಂದುಳಿದ, ಕೆಳ ವರ್ಗದ ಹಾಗೂ ಸಮಾಜದ ಅತ್ಯಂತ ಕೆಳಸ್ತರದ ವ್ಯಕ್ತಿಯ ಜೀವನಕ್ಕೂ ಬೆಲೆ ಒದಗಿಸಿಕೊಟ್ಟರು. ಆರೋಗ್ಯ ಹಾಗೂ ಶಿಕ್ಷಣವನ್ನು ಸೇವೆಯಾಗಿ ಪರಿಚಯಿಸಿದರು ಎಂದು ಹೇಳಿದರು.
ಬಿ.ಎಲ್. ರೈಸ್ ಕುರಿತು ವಿಶೇಷ ಉಪನ್ಯಾಸ ನೀಡಿದ ಕರ್ನಾಟಕ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಮಹಾನಂದಾ ಮಡಕಿ ಅವರು, ಬಿ.ಎಲ್. ರೈಸ್ ಒಬ್ಬ ಮಹಾನ್ ಸಂಶೋಧಕ ಎಂದು ಬಣ್ಣಿಸಿದರು.
ಕರ್ನಾಟಕದಲ್ಲಿ ಪುರಾತತ್ವ ಇಲಾಖೆಯ ಮುಖ್ಯಸ್ಥರಾಗಿ ದಕ್ಷತೆಯಿಂದ ತಮ್ಮ ಕರ್ತವ್ಯ ನಿರ್ವಹಿಸುತ್ತಲೇ ಸಾವಿರಾರು ಕನ್ನಡ ಶಾಸನಗಳನ್ನು ಸಂಗ್ರಹಿಸಿದರು. ೧೮೭೯ ರಲ್ಲಿ ಪ್ರಥಮ ಬಾರಿಗೆ ಬೃಹತ್ ಸಂಪುಟ ಸಿದ್ಧಪಡಿಸಿ ಕರುನಾಡಿಗೆ ಸಮರ್ಪಿಸಿದರು ಎಂದು ತಿಳಿಸಿದರು.
ಶಾಸನಗಳೆಂಬ ಮಾಹಿತಿಯೇ ಇಲ್ಲದ ಕಾಲದಲ್ಲಿ ಅವುಗಳ ಸಂಗ್ರಹ, ವರ್ಗೀಕರಣ, ಅಧ್ಯಯನ, ಪದ ಪರಿಚಯ, ವಿಶ್ಲೇಷಣೆಯೊಂದಿಗೆ ಸಂದರ್ಭ ಸಹಿತ ವಿವರಣೆ ನೀಡಿದರು. ಕರ್ನಾಟಕದ ಭವ್ಯ ಇತಿಹಾಸ ಪರಿಚಯವಾದದ್ದು ಶಾಸನಗಳಿಂದಲೇ ಎಂದು ಹೇಳಿದರು.
ಕನ್ನಡ ನಾಡಿನ ಶ್ರೇಷ್ಠ ಕವಿಗಳಾದ ಪಂಪ, ನಾಗವರ್ಮರಂತಹ ಅನೇಕ ದಿಗ್ಗಜ ಕವಿಗಳನ್ನು ನಾಡಿಗೆ ಪರಿಚಯಿಸಿದರು. ಕ್ರೈಸ್ತ ಮಿಷನರಿಗಳ ಪರಿಶ್ರಮದಿಂದಲೇ ಕನ್ನಡದ ಅನೇಕ ಅತ್ಯಮೂಲ್ಯ ಕೃತಿಗಳು ಲಭಿಸಿವೆ ಎಂದು ತಿಳಿಸಿದರು.
ಪ್ರಾಕೃತ, ಸಂಸ್ಕೃತ, ಪಾಲಿ, ದೇವನಾಗರಿ ಮತ್ತು ಹಳೆಗನ್ನಡ ಲಿಪಿಗಳ ಹಸ್ತಪ್ರತಿಗಳನ್ನು ಸಂಗ್ರಹಿಸಿ, ಪರಿಷ್ಕರಿಸಿ, ವಿಂಗಡಿಸಿ, ಪ್ರಕ್ಷಿಪ್ತ ಪಠ್ಯ ಬೇರ್ಪಡಿಸಿ ಮೂಲ ಪಠ್ಯಕ್ಕೆ ಹತ್ತಿರ ಹಾಗೂ ವಿಶ್ವಾಸಾರ್ಹ ಪಠ್ಯಗಳನ್ನು ಮುದ್ರಿಸಿ, ಕನ್ನಡ ಸಾರಸತ್ವ ಲೋಕಕ್ಕೆ ಸಮರ್ಪಿಸಿದರು. ಅದರಿಂದ ಕನ್ನಡ ಸಾಹಿತ್ಯ ಚರಿತ್ರೆ ಜಗತ್ತಿನ ಕೆಲವೇ ಕೆಲವು ಸಮೃದ್ಧ ಮತ್ತು ಪುರಾತನ ಭಾಷೆಗಳ ಸಾಲಿನಲ್ಲಿ ನಿಲ್ಲುವಂತೆ ಮಾಡಿದ ಬಿ.ಎಲ್. ರೈಸ್ ಕನ್ನಡಿಗರ ಪಾಲಿಗೆ ಪ್ರಾತಃಸ್ಮರಣೀಯರು ಎಂದರು.
ರೈಸ್ ಬದುಕಿರುವವರೆಗೆ ಕನ್ನಡದಲ್ಲಿಯೇ ವ್ಯವಹರಿಸಿದರು. ಕನ್ನಡ ಅಂದರೆ ಅವರಿಗೆ ಪಂಚಪ್ರಾಣ. ಇಂಗ್ಲಿಷರೊAದಿಗೂ ಕನ್ನಡದಲ್ಲಿಯೇ ವ್ಯವಹರಿಸುವ ಮಟ್ಟಿಗೆ ಕನ್ನಡಮಯವಾಗಿದ್ದರು ಎಂದು ಹೇಳಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಮೆಥೋಡಿಸ್ಟ್ ಕೇಂದ್ರ ಸಭೆಯ ಜಿಲ್ಲಾ ಮೇಲ್ವಿಚಾರಕ ರೆವರೆಂಡ್ ಡಿಸೋಜ ಥಾಮಸ್ ಅವರು, ಕ್ರೈಸ್ತ ಮಿಷನರಿಗಳು ಕ್ರೈಸ್ತ ಧರ್ಮಕ್ಕೆ ನೀಡಿದ ಕೊಡುಗೆಗಿಂತಲೂ ಹೆಚ್ಚು ಕರುನಾಡಿಗೆ, ಕನ್ನಡ ಭಾಷೆಗೆ ಮತ್ತು ಸಾಹಿತ್ಯಕ್ಕೆ ನೀಡಿದ್ದಾರೆ ಎಂದು ನೆನೆದರು.
ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸುಶಿಕ್ಷಿತನಾಗುವ, ಸುಸಂಸ್ಕೃತ, ಗೌರವಯುತ ಬದುಕು ಕಟ್ಟಿಕೊಳ್ಳುವ ಶಕ್ತಿ, ಸಾಮಥ್ರ‍್ಯ ತುಂಬಿದವರೇ ಕ್ರೈಸ್ತ ಮಿಷನರಿಗಳು ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಬಿ.ಕೆ. ಸುಂದರರಾಜ ಅಧ್ಯಕ್ಷತೆ ವಹಿಸಿದ್ದರು. ರೆವರೆಂಡ್ ಬಿ. ಜಯ, ರೆವರೆಂಡ್ ಸೈಮನ್ ಮಾರ್ಕ್, ರೆವರೆಂಡ್ ಬಾಬು ಪಾಸ್ಟರ್ ಇದ್ದರು.
ಶರಣಪ್ಪ ಸಿಂಗಾರೆ ಸ್ವಾಗತಿಸಿದರು. ಟಿ.ಎಂ. ಮಚ್ಚೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಸುನೀಲಕುಮಾರ ಮಾಳಗೆ ನಿರೂಪಿಸಿದರು. ಶಿರೋಮಣಿ ತಾರೆ ವಂದಿಸಿದರು.























