
ಬೆಂಗಳೂರು, ಜೂ. ೧೩- ಬಿಡದಿಯಲ್ಲಿ ಟೌನ್‌ಶಿಪ್ ನಿರ್ಮಾಣಕ್ಕೆ ಭೂಸ್ವಾಧೀನದ ಅಂತಿಮ ಅಧಿಸೂಚನೆ ಹೊರಡಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿರುವ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು, ಮುಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಇಡೀ ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಪಡಿಸಲಾಗುವುದು ಎಂದು ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಭೂಸ್ವಾಧೀನ ವಿರೋಧಿಸಿ ಅನ್ನದಾತರು ಸುಮಾರು ೪೭೦ ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಅದನ್ನು ಲೆಕ್ಕಿಸದೆ ಟೌನ್‌ಶಿಪ್‌ಗಾಗಿ ಫಲವತ್ತಾದ ಕೃಷಿ ಭೂಮಿಯನ್ನು ಕಬಳಿಸಲು ಅಂತಿಮ ಅಧಿಸೂಚನೆ ಹೊರಡಿಸಿರುವುದು ಕಾಂಗ್ರೆಸ್ ಸರ್ಕಾರದ ನಿಜವಾದ ಮುಖವನ್ನು ಬಯಲು ಮಾಡಿದೆ. ಮುಖ್ಯಮಂತ್ರಿಗಳೆ ರಾಜ್ಯದ ರೈತರನ್ನು ನೀವು ದುರ್ಬಲರೆಂದು ಭಾವಿಸಿದ್ದರೆ ಅದು ದೊಡ್ಡ ತಪ್ಪು. ಇನ್ನೊಂದೂವರೆ ವರ್ಷದಲ್ಲಿ ನಿಮ್ಮ ಜನವಿರೋಧಿ ಸರ್ಕಾರ ಇತಿಹಾಸದ ಪುಟ ಸೇರಲಿದೆ ಎಂದಿದ್ದಾರೆ.
೨೦೨೮ ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಬಿಡದಿಯ ಟೌನ್‌ಶಿಪ್ ಭೂಸ್ವಾಧೀನ ಪ್ರಕ್ರಿಯೆಯನ್ನು ಅಧಿಕೃತವಾಗಿ ರದ್ದುಪಡಿಸಿ ರೈತರಿಗೆ ಕೊಟ್ಟಿರುವ ಮಾತನ್ನು ನಾವು ಉಳಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ರೈತರ ಜಮೀನಿನ ಮೇಲೆ ಬುಲ್ಡೋಜರ್ ಉರುಳಿಸಿ ರಿಯಲ್ ಎಸ್ಟೇಟ್ ಸಾಮ್ರಾಜ್ಯ ಕಟ್ಟಲು ಹೊರಟಿರುವ ಕಮೀಷನ್ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರೆ ಅನ್ನದಾತರ ಆಕ್ರೋಶದ ಜ್ವಾಲೆಯಲ್ಲಿ ಕಾಂಗ್ರೆಸ್ ಸರ್ಕಾರ ಭಸ್ಮವಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಅನ್ನದಾತರ ಹೊಟ್ಟೆಗೆ ಹೊಡೆದು ಕಟ್ಟುವ ಯಾವುದೇ ಟೌನ್‌ಶಿಪ್ ಅಭಿವೃದ್ಧಿಯಲ್ಲ. ಅದು ರೈತರ ಭವಿಷ್ಯದ ಸಮಾಧಿ. ಸರ್ಕಾರ ಕೂಡಲೇ ಈ ಭೂಸ್ವಾಧೀನ ಪ್ರಕ್ರಿಯೆಯನ್ನು ಹಿಂಪಡೆಯಬೇಕು. ಇಲ್ಲವಾದರೆ ರೈತರ ಆಕ್ರೋಶದ ಜ್ವಾಲೆಯನ್ನು ಸರ್ಕಾರ ಭಸ್ಮವಾಗುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಕಸದ ಟೆಂಡರ್‌ನಲ್ಲೂ ಸಾವಿರಾರು ಕೋಟಿ ಕಮೀಷನ್ ಹೊಡೆದಿರುವ ಈ ಲಜ್ಜೆಗೆಟ್ಟ ಸರ್ಕಾರ ಈಗ ಅನ್ನದಾತರ ಜಮೀನಿನಲ್ಲೂ ರಿಯಲ್ ಎಸ್ಟೇಟ್ ಬಂಗಾರ ಹುಡುಕಲು ಹೊರಟಿದೆ. ರೈತರ ವಿರೋಧದ ನಡುವೆಯೂ ಆತುರಾತುರವಾಗಿ ಭೂಮಿ ಕಬಳಿಸಲು ಹೊರಟಿರುವುದರ ಹಿಂದಿನ ಅಸಹ್ಯ ರಹಸ್ಯವೇನು ಎಂದು ಪ್ರಶ್ನಿಸಿರುವ ಆರ್. ಅಶೋಕ್, ನಿಮ್ಮ ಬಿಲ್ಡರ್ ಮಾಫಿಯಾದ ಜೇಬು ತುಂಬಿಸುವ ರಿಯಲ್ ಎಸ್ಟೇಟ್ ಅಜೆಂಡಾವೇ ಇದಕ್ಕೆ ಕಾರಣ ಎಂದು ಟೀಕಿಸಿದ್ದಾರೆ.




























