Home ಮುಖಪುಟ ಸುದ್ದಿ ಕಾಂಗ್ರೆಸ್‌ನಿಂದ ಮೈತ್ರಿ ಒಡೆಯಲು ಯತ್ನ

ಕಾಂಗ್ರೆಸ್‌ನಿಂದ ಮೈತ್ರಿ ಒಡೆಯಲು ಯತ್ನ

ಮಂಡ್ಯ/ತಗ್ಗಹಳ್ಳಿ:ಜೂ. ೯- ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಕಾಂಗ್ರೆಸ್ಸಿಗರಿಗೆ ಈಗ ಇದ್ದಕ್ಕಿದ್ದಂತೆ ಎಲ್ಲಿಲ್ಲದ ಅನುಕಂಪ ಬಂದಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಲ್ಲಿ ಬಿರುಕು ಮೂಡಿಸಲು ಕಾಂಗ್ರೆಸ್ ನಾಯಕರು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಇದು ಸಾಧ್ಯವಿಲ್ಲ,” ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.


ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ರಾಜ್ಯಸಭೆ ಟಿಕೆಟ್ ತಪ್ಪಿರುವ ಬಗ್ಗೆ ಕಾಂಗ್ರೆಸ್ ನಾಯಕರ ಮಾತುಗಳಿಗೆ ಕೇಂದ್ರಸಚಿವ ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದುರಾಜ್ಯಸಭೆ ಟಿಕೆಟ್‌ಗೆ ದೇವೇಗೌಡರು ಯಾವುದೇ ಅರ್ಜಿಯನ್ನೇ ಹಾಕಿಲ್ಲ “ದೇವೇಗೌಡರದ್ದು ಹೋರಾಟದ ಬದುಕು. ಅವರು ಅಧಿಕಾರಕ್ಕಾಗಿ ಎಂದೂ ಇನ್ನೊಬ್ಬರ ಮನೆ ಬಾಗಿಲಿಗೆ ಹೋದವರಲ್ಲ. ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಪ್ರಧಾನಿ ಸ್ಥಾನವನ್ನೇ ತ್ಯಜಿಸಿ ಬಂದವರು,” ಎಂದು ನೆನಪಿಸಿದರು. ಕಳೆದ ಬಾರಿ ಕಾಂಗ್ರೆಸ್ ಬೆಂಬಲದಿಂದ ಅವರು ಆಯ್ಕೆಯಾಗಿದ್ದರು ಎಂಬ ವಾದವನ್ನು ತಳ್ಳಿಹಾಕಿದ ಹೆಚ್‌ಡಿಕೆ, “ಅಂದು ದೇವೇಗೌಡರ ವಿರುದ್ಧ ಇನ್ನೊಬ್ಬ ಅಭ್ಯರ್ಥಿ ನಿಲ್ಲಲು ಅವಕಾಶವೇ ಇರಲಿಲ್ಲ. ಅವರು ಯಾರದ್ದೋ ದಯೆಯಿಂದ ರಾಜ್ಯಸಭೆಗೆ ಹೋಗಿಲ್ಲ. ರಾಜ್ಯದಲ್ಲಿ ಒಕ್ಕಲಿಗ ಸಿಎಂ ಇರುವಾಗ ಇವರು ರಾಜ್ಯಸಭೆ ಇಟ್ಟುಕೊಂಡು ಏನು ಮಾಡುತ್ತಾರೆ? ಇನ್ನೆರಡು ತಿಂಗಳು ಕಾದು ನೋಡಿ, ಅವರೇನು ಮಾಡುತ್ತಾರೆ ಎಂದು ತಿಳಿಯುತ್ತದೆ,” ಎಂದು ಸವಾಲು ಹಾಕಿದರು. ಸಚಿವ ಚಲುವರಾಯಸ್ವಾಮಿ ಅವರ ’ದೇವೇಗೌಡರ ಮನೆಯಲ್ಲಿ ಸೂತಕ’ ಎಂಬ ಹೇಳಿಕೆಗೆ ತಾವು ಪ್ರತಿಕ್ರಿಯಿಸುವುದಿಲ್ಲ ಎಂದರು.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕುಮಾರಸ್ವಾಮಿ ಅವರ ಸಲಹೆ ಕೇಳುವುದಾಗಿ ಹೇಳಿರುವ ಕುರಿತು ಕೇಳಲಾದ ಪ್ರಶ್ನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, “ಅವರೇ ಹಿಂದೆ ’ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿ ಏನು ಹರಿದಿದ್ದಾರೆ’ ಎಂದು ಕೇಳಿದ್ದರು. ಈಗ ಎಲ್ಲದಕ್ಕೂ ಸಾಕ್ಷಿ ಗುಡ್ಡೇ ಕೇಳುತ್ತಾರೆ. ನಾನೇನು ಹರಿದಿಲ್ಲ, ನನ್ನ ಹತ್ತಿರ ಅವರೇಕೆ ಸಲಹೆ ಕೇಳುತ್ತಾರೆ? ಇಂತಹ ವರ್ತನೆಗೆ ’ಅತಿ ವಿನಯಂ ದೂರ್ತ ಲಕ್ಷಣಂ’ ಎನ್ನುತ್ತಾರೆ,” ಎಂದು ಲೇವಡಿ ಮಾಡಿದರು. ತಮಗೆ ಮುಖ್ಯಮಂತ್ರಿಯಾಗುವುದಕ್ಕಿಂತ ಸದ್ಯದ ಪರಿಸ್ಥಿತಿಯಲ್ಲಿ ಜನರನ್ನು ಉಳಿಸುವುದು ಮುಖ್ಯವಾಗಿದ್ದು, ಮೈತ್ರಿ ಪಕ್ಷಗಳಿಗೆ ಆ ಶಕ್ತಿ ತರುವ ಪ್ರಯತ್ನ ಮಾಡುವುದಾಗಿ ಹೇಳಿದರು.


ವಿಧಾನ ಪರಿಷತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸಿರುವ ಕುರಿತು ಮಾತನಾಡಿದ ಅವರು, “ನಮಗೂ ಎರಡು ಮತಗಳ ಅಗತ್ಯವಿದೆ, ಕಾಂಗ್ರೆಸ್‌ನವರಿಗೂ ಎರಡು ಮತಗಳು ಬೇಕಾಗಿವೆ. ಇದರಲ್ಲಿ ಯಾವುದೇ ಹಿಡನ್ ಗೇಮ್ ಪ್ಲಾನ್ ಇಲ್ಲ. ನಾವು ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಯತ್ನಾಳ್ ಅವರ ಮತವನ್ನು ಕೇಳುತ್ತೇವೆ. ಕಾಂಗ್ರೆಸ್ ನವರ ಬಳಿ ಹಣದ ಬಲವಿದೆ, ಏನಾಗುತ್ತದೋ ಕಾದು ನೋಡೋಣ,” ಎಂದರು.

ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಅನುದಾನದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಪ್ರಥಮ ಆದ್ಯತೆ ನೀಡಲಾಗುವುದು ಮಂಡ್ಯ ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗಾಗಿ ಈಗಾಗಲೇ ೫೪ ಕೋಟಿ ರೂಪಾಯಿಗಳ ಸಿಎಸ್‌ಆರ್ ಅನುದಾನವನ್ನು ಮೀಸಲಿಡಲಾಗಿದೆ ಎಂದ ಅವರು ಇತ್ತೀಚೆಗೆ ನಡೆದ ವೈಜಾಗ್ (ವಿಶಾಖಪಟ್ಟಣಂ) ಸ್ಟೀಲ್ ಪ್ಲಾಂಟ್ “ದುರಂತದ ಮಾಹಿತಿ ಬಂದ ತಕ್ಷಣವೇ ನಾನು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಮಾಹಿತಿ ಸಂಗ್ರಹಿಸಿದ್ದೇನೆ. ಇದೊಂದು ದುರದೃಷ್ಟಕರ ಆಕಸ್ಮಿಕ ಘಟನೆ. ನಾವು ಎಷ್ಟೇ ಜಾಗರೂಕರಾಗಿ ಕೆಲಸ ಮಾಡಿದರೂ, ಒಮ್ಮೊಮ್ಮೆ ಇಂತಹ ಘಟನೆಗಳು ಸಂಭವಿಸಿಬಿಡುತ್ತವೆ,” ಎಂದರು.


ಘಟನೆಯ ತನಿಖೆ ನಡೆಸಿ ವರದಿ ಸಲ್ಲಿಸಲು ತಜ್ಞರ ತಂಡವನ್ನು ರಚಿಸಲಾಗಿದೆ ಎಂದ ಅವರು, ಸಂತ್ರಸ್ತ ಕಾರ್ಮಿಕರ ಪರವಾಗಿ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದರು ಖಾಯಂ ಸಿಬ್ಬಂದಿಗಳಿಗೆ ನೀಡಲಾಗುವ ಮಾದರಿಯಲ್ಲೇ ಹೊರಗುತ್ತಿಗೆ (ಕಾಂಟ್ರಾಕ್ಟ್) ನೌಕರರಿಗೂ ಸಮಾನ ಪರಿಹಾರ ನೀಡಲು ಇಲಾಖೆಗೆ ಸೂಚಿಸಲಾಗಿದೆ. ಗಾಯಾಳುಗಳ ಆಸ್ಪತ್ರೆಯ ಸಂಪೂರ್ಣ ವೆಚ್ಚವನ್ನು ಉಕ್ಕು ಇಲಾಖೆಯೇ ಭರಿಸಲಿದೆ. ನೊಂದ ಕುಟುಂಬಗಳಿಗೆ ಟೌನ್‌ಶಿಪ್‌ನಲ್ಲಿ ಉಚಿತ ಮನೆ ನೀಡಲು ತೀರ್ಮಾನಿಸಲಾಗಿದ್ದು, ಅವರ ಮಕ್ಕಳ ಮುಂದಿನ ಶಿಕ್ಷಣಕ್ಕೂ ಸಂಪೂರ್ಣ ನೆರವು ನೀಡಲಾಗುವುದು ಎಂದರು.

ದೇಶದಲ್ಲಿ ಇಂಧನ ಹಾಗೂ ಗ್ಯಾಸ್ ಬೆಲೆ ಏರಿಕೆಯಾಗುತ್ತಿರುವ ಕುರಿತು ಕಾಂಗ್ರೆಸ್ ಟೀಕೆಗಳಿಗೆ ಉತ್ತರಿಸಿದ ಕುಮಾರಸ್ವಾಮಿ, “ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಗಳ ಹಿನ್ನೆಲೆಯಲ್ಲಿ ಈ ಬೆಲೆ ಏರಿಕೆಯಾಗಿದೆ. ಇದು ಕೇವಲ ಭಾರತದಲ್ಲಿ ಮಾತ್ರ ಆಗುತ್ತಿಲ್ಲ, ವಿಶ್ವದ ಎಲ್ಲಾ ದೇಶಗಳೂ ಈ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಆದರೆ ಕಾಂಗ್ರೆಸ್‌ನವರು ಕರ್ನಾಟಕದಲ್ಲಿ ಎಲ್ಲದರ ಬೆಲೆಯನ್ನೂ ಏರಿಸಿದ್ದಾರೆ. ಒಂದು ವೇಳೆ ಈ ಸಂದರ್ಭದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು?” ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ನಾಯಕರ ಆರೋಪಗಳಿಗೆ ತಿರುಗೇಟು ನೀಡಿದರು.