
ಮೈಸೂರು, ಜು.೩೧- ಆಷಾಡ ಮಾಸದ ಪವಿತ್ರ ಮೂರನೇ ಶುಕ್ರವಾರದಂದು ಇಂದು ಮೈಸೂರಿನ ಚಾಮುಂಡಿ ಬೆಟ್ಟವು ಭಕ್ತಿಯ ಸಾಗರವಾಗಿ ಮಾರ್ಪಟ್ಟಿತು. “ತಾಯೇ ಚಾಮುಂಡೇಶ್ವರಿ” ಎಂದು ಭಕ್ತರು ಹರಸಿ ಬಂದ ಕ್ಷಣದಿಂದಲೇ ಬೆಟ್ಟವೆಲ್ಲಾ ಜೈಕಾರಗಳಿಂದ ಮೊಳಗಿತು.
ಮುಂಜಾನೆ ೩.೩೦ ರಿಂದಲೇ ದೇವಸ್ಥಾನದ ಬಾಗಿಲು ತೆರೆದಂತೆ ಸಾವಿರಾರು ಭಕ್ತಾದಿಗಳು ಸಾಲುಗಟ್ಟಿ ನಿಂತರು. ಕೈಯಲ್ಲಿ ಹೂವು, ಕುಂಕುಮ, ಅರಿಶಿನದ ತಟ್ಟೆ ಹಿಡಿದು ಬಂದ ಪ್ರತಿಯೊಬ್ಬರ ಮುಖದಲ್ಲೂ ದೇವಿ ದರ್ಶನದ ಕಾತರತೆ ಕಾಣಿಸುತ್ತಿತ್ತು.
ದೇವಿಯ ದಿವ್ಯ ಅಲಂಕಾರ:
ಇಂದು ಗರ್ಭಗುಡಿಯ ಜಗನ್ಮಾತೆ ಚಾಮುಂಡೇಶ್ವರಿ ನೇರಳೆ ಬಣ್ಣದ ರೇಷ್ಮೆ ಸೀರೆಯಲ್ಲಿ, ಚಿನ್ನದ ಆಭರಣಗಳಿಂದ ಅಲಂಕೃತಳಾಗಿ ಭಕ್ತರಿಗೆ ಕರುಣೆಯ ಕಣ್ಣಿನಿಂದ ದರ್ಶನ ನೀಡಿದಳು. ದೇವಸ್ಥಾನದಾದ್ಯಂತ ವಿವಿಧ ಬಗೆಯ ತಾಜಾ ಹೂವುಗಳಿಂದ ಪುಷ್ಪ ಅಲಂಕಾರ ಮಾಡಲಾಗಿತ್ತು. ಹೂವಿನ ಪರಿಮಳ ಮತ್ತು ಅಗರಬತ್ತಿಯ ಸುಗಂಧದಿಂದ ವಾತಾವರಣವೆಲ್ಲಾ ಪವಿತ್ರವಾಗಿತ್ತು. ಉತ್ಸವ ಮೂರ್ತಿಗೆ ಗಿಳಿ ಹಸಿರು ಬಣ್ಣದ ಸೀರೆಯಲ್ಲಿ ಲಕ್ಷ್ಮಿ ಅಲಂಕಾರ ಮಾಡಿ, ತಾಯಿಯನ್ನು ಮಹಾಲಕ್ಷ್ಮಿಯ ರೂಪದಲ್ಲಿ ಕಣ್ತುಂಬಿಕೊಳ್ಳುವಂತೆ ಮಾಡಲಾಗಿತ್ತು.
ಬೆಳಗಿನ ಜಾವದಿಂದಲೇ ಚಾಮುಂಡೇಶ್ವರಿಗೆ ವಿಶೇಷ ಪೂಜೆ, ರುದ್ರಾಭಿಷೇಕ, ಕುಂಕುಮಾರ್ಚನೆ ಮತ್ತು ಮಹಾಮಂಗಳಾರತಿ ನೆರವೇರಿಸಲಾಯಿತು. ಅರ್ಚಕರ ವೇದಘೋಷ ಮತ್ತು ಭಕ್ತರ ಭಜನೆಗಳು ಬೆಟ್ಟದ ತಪ್ಪಲಿನವರೆಗೂ ಕೇಳಿ ಬಂದವು.
ಭಕ್ತರ ಅನುಕೂಲಕ್ಕಾಗಿ ವಿಶೇಷ ವ್ಯವಸ್ಥೆ:
ಭಕ್ತರ ಹೆಚ್ಚಿನ ಸಂಖ್ಯೆಯನ್ನು ಗಮನಿಸಿ ಜಿಲ್ಲಾಡಳಿತವು ಸೂಕ್ತ ಕ್ರಮಗಳನ್ನು ಕೈಗೊಂಡಿತ್ತು. ಭಕ್ತರ ಸುರಕ್ಷತೆಯ ದೃಷ್ಟಿಯಿಂದ ವಿಐಪಿ ಶಿಫಾರಸ್ಸು ವಾಹನಗಳು ಹಾಗೂ ಸಾರ್ವಜನಿಕರ ಖಾಸಗಿ ವಾಹನಗಳಿಗೆ ಬೆಟ್ಟಕ್ಕೆ ಪ್ರವೇಶಕ್ಕೆ ಸಂಪೂರ್ಣ ನಿಷೇಧ ಹೇರಲಾಗಿತ್ತು.
ಈ ಹಿನ್ನೆಲೆಯಲ್ಲಿ ಲಲಿತ್ ಮಹಲ್ ಮೈದಾನದಿಂದ ಚಾಮುಂಡಿ ಬೆಟ್ಟದವರೆಗೆ ಸಾರ್ವಜನಿಕರಿಗಾಗಿ ಉಚಿತ ಬಸ್ ವ್ಯವಸ್ಥೆಯನ್ನು ಮಾಡಲಾಗಿತ್ತು. ವೃದ್ಧರು, ಮಹಿಳೆಯರು, ಮಕ್ಕಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್‌ಗಳನ್ನು ಓಡಿಸಲಾಯಿತು. ಕುಡಿಯುವ ನೀರು, ವೈದ್ಯಕೀಯ ತಂಡ ಮತ್ತು ಪೊಲೀಸ್ ಭದ್ರತೆಯನ್ನು ಸಹ ಬಿಗೊಳಿಸಲಾಗಿತ್ತು.
ಆಷಾಡದಲ್ಲಿ ತಾಯಿಯನ್ನು ನೋಡದೆ ಇರಲು ಸಾಧ್ಯನಾ? ವರ್ಷಕ್ಕೊಮ್ಮೆ ಬಂದರೂ ಈ ಅನುಭವೇ ಬೇರೆ ಎಂದು ದರ್ಶನ ಪಡೆದು ಹೊರಬಂದ ಭಕ್ತರೊಬ್ಬರು ಭಾವುಕರಾಗಿ ಹೇಳಿದರು.
ಆಷಾಡ ಶುಕ್ರವಾರದಂದು ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಪಡೆದ ಪ್ರತಿಯೊಬ್ಬ ಭಕ್ತರ ಮನವೂ ಭಕ್ತಿಭಾವದಿಂದ ತುಂಬಿ ಹೋಯಿತು.

































