Home ಜಿಲ್ಲೆ ತುಮಕೂರು ನಟ ವಿಷ್ಣುವರ್ಧನ್ ಆದರ್ಶ ಇತರರಿಗೆ ಮಾದರಿ

ನಟ ವಿಷ್ಣುವರ್ಧನ್ ಆದರ್ಶ ಇತರರಿಗೆ ಮಾದರಿ

ಕುಣಿಗಲ್, ಸೆ. ೨೨- ಖ್ಯಾತ ಚಿತ್ರನಟ ಡಾ. ವಿಷ್ಣುವರ್ಧನ್ ರವರು ಚಲನಚಿತ್ರಗಳ ಮೂಲಕ ಜನರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಪೊಲೀಸ್ ವೃತ್ತ ನಿರೀಕ್ಷಕ ಎಂ. ನಾಯಕ್ ಹೇಳಿದರು.
ಪಟ್ಟಣದ ಎಸ್.ಎಂ. ಶಾಲಾ ಅವರಣದಲ್ಲಿ ಶ್ರೀಕಂಠ ಸಂಗೀತ ಶಾಲೆ ಹಾಗೂ ಕರ್ನಾಟಕ ಜಾಗೃತ ವೇದಿಕೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಡಾ. ವಿಷ್ಣುವರ್ಧನ್ ರವರ ಜನ್ಮ ಜಯಂತಿ ಹಾಗೂ ನುಡಿ ನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಡಾ. ವಿಷ್ಣುವರ್ಧನ್ ರವರು ೭೦ರ ದಶಕದಲ್ಲಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿ ಡಾ. ರಾಜಕುಮಾರ್, ಡಾ. ವಿಷ್ಣುವರ್ಧನ್, ಅಂಬರೀಶ್ ಅವರು ದೇಶ ಹಾಗೂ ರಾಜ್ಯಕ್ಕೆ ಚಿತ್ರ ರಂಗದಲ್ಲಿ ತನ್ನದೇ ಆದಂತಹ ಕೊಡುಗೆಗಳನ್ನು ನೀಡಿ ಮನೆ ಮಾತಾಗಿದ್ದಾರೆ ಎಂದರು.


ವಿಷ್ಣುವರ್ಧನ್ ರವರು ಸೌಮ್ಯ ಹಾಗೂ ಸುಂದರ ವ್ಯಕ್ತಿಯಾಗಿ ಚಿತ್ರರಂಗದ ಮೂಲಕ ಸಾಂಸಾರಿಕ ಪ್ರೀತಿ, ಅಣ್ಣ-ತಮ್ಮಂದಿರ ಒಡನಾಡಿ ಯುವಕರ ಆಶಾಕಿರಣವಾಗಿ ಸಮಾಜಕ್ಕೆ ಆದರ್ಶ ನೀತಿಗಳುಳ್ಳ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಜನರ ಹೃದಯ ಸಾಮ್ರಾಟದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ನಮ್ಮ ಇಂದಿನ ಯುವ ಪೀಳಿಗೆ ಅವರ ಆದರ್ಶ ನೀತಿ ಗುಣಗಳ ಚಲನ ಚಿತ್ರಗಳನ್ನು ನೋಡುವ ಮೂಲಕ ಆದರ್ಶ ವ್ಯಕ್ತಿಗಳಾಗಬೇಕು. ಸಮಾಜ ಹಾಗೂ ಸರ್ಕಾರ ಅವರಿಗೆ ಉನ್ನತ ಗೌರವ, ಕೊಡುಗೆಗಳನ್ನು ನೀಡಿ ನಮನ ಸಲ್ಲಿಸಿರುತ್ತದೆ. ಕರ್ನಾಟಕ ನಾಡಿನ ಡಾ. ವಿಷ್ಣುವರ್ಧನ್ ಮಾಣಿಕ್ಯರಾಗಿ ಹೃದಯ ಸಿಂಹಾಸನದಲ್ಲಿ ಅಚ್ಚಳಿಯದೆ ಉಳಿಯುತ್ತಾರೆ ಎಂದರು.


ಪರಿಸರ ಪ್ರೇಮಿ ವೇಣು ಮಾತನಾಡಿ, ಗಿಡ ಮರಗಳನ್ನು ಉಳಿಸಿ, ಬೆಳೆಸುವುದರೊಂದಿಗೆ ಅವುಗಳನ್ನು ಜೋಪಾನ ಮಾಡುವುದರೊಂದಿಗೆ ಡಾ. ವಿಷ್ಣುವರ್ಧನ್ ರವರ ಪರಿಸರ ಚಲನಚಿತ್ರಗಳು ಇಂದೂ ಸಹ ಜನಸಾಮಾನ್ಯರ ಹೃದಯದಲ್ಲಿವೆ ಎಂದು ಹೇಳಿದರು.


ಇದೇ ಸಂದರ್ಭದಲ್ಲಿ ಐಟಿಐ ಕಾಲೇಜಿನ ಪ್ರಾಂಶುಪಾಲರಾದ ಜಗನ್ನಾಥ್, ಎಫ್ ಎಂ ಶಾಲೆಯ ಪ್ರಾಂಶುಪಾಲರಾದ ವೇಣುಗೋಪಾಲ್, ಕರ್ನಾಟಕ ಜಾಗೃತಿ ವೇದಿಕೆ ಅಧ್ಯಕ್ಷ ಶಂಕರ್, ಗಾಯಕ ಸೋಮಶೇಖರ್, ಯೋಗವನ ಬೆಟ್ಟದ ಮುಖ್ಯಸ್ಥರಾದ ಪವಿತ್ರ, ಶಶಿಧರ್, ಡಾ ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಶ್ರೀನಿವಾಸ್, ಕರ್ನಾಟಕ ಜಾಗೃತಿ ವೇದಿಕೆಯ ಗೌರವಾಧ್ಯಕ್ಷ ಸಿದ್ದಗಂಗಯ್ಯ, ಪರಿಸರ ಪ್ರೇಮಿ ವೇಣು ರವರನ್ನು ಸನ್ಮಾನಿಸಲಾಯಿತು.