
ಬೆಂಗಳೂರು, ಅ. ೧೩- ಎಸ್ಸಿ/ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ಗೆ ಅಪೀಲ್ ಹೋಗಬೇಕೋ ಬೇಡವೋ ಎಂಬುದನ್ನು ಕ್ಯಾಬಿನೆಟ್ನಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಜನಸಂಖ್ಯೆಗೆ ಅನುಗುಣವಾಗಿ ಎಸ್ಸಿ/ಎಸ್ಟಿ ಸಮುದಾಯಗಳಿಗೆ ಮೀಸಲಾತಿ ನೀಡಲು ಸರ್ಕಾರ ತೀರ್ಮಾನಿಸಿತ್ತು. ಆದರೆ ಅದನ್ನು ಪರಿಗಣಿಸದೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಸಾವಿರಾರು ವರ್ಷಗಳಿಂದ ಅವಕಾಶ ವಂಚಿತರಾದವರಿಗೆ ಅನುಕೂಲವಾಗಲು ಡಾ. ಅಂಬೇಡ್ಕರ್ ಮೀಸಲಾತಿ ತಂದಿದ್ದರು.
ಈ ಎಲ್ಲ ಅಂಶಗಳನ್ನು ಗಮನಿಸಿ ನ್ಯಾಯಾಲಯ ಆದೇಶ ನೀಡಬೇಕಿತ್ತು. ವಿಶೇಷ ಸಂದರ್ಭದಲ್ಲಿ ಇದನ್ನು ಪರಿಗಣಿಸಬಹುದಿತ್ತು” ಎಂದರು
“ಹಿಂದೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಶೇ.೫೬ ಮೀಸಲಾತಿ ಜಾರಿ ಮಾಡಲಾಗಿತ್ತು. ಅದರಲ್ಲಿ ಎಸ್ಸಿ ಶೇ.೧೭, ಎಸ್ಟಿ ಶೇ.೭ ಇತ್ತು. ನಮ್ಮ ಸರ್ಕಾರ ಬಂದಾಗ ಅದನ್ನು ಅನುಸರಿಸಲಾಯಿತು. ಈಗ ನಾವು ಶೇ.೬ರಷ್ಟು ಮಾತ್ರ ಹೆಚ್ಚಳ ಮಾಡಿದ್ದೆವು. ವಿಶೇಷ ಸಂದರ್ಭದಲ್ಲಿ ಮೀಸಲಾತಿ ಹೆಚ್ಚಿಸುವ ಅವಕಾಶವಿದೆ. ಒಳಮೀಸಲಾತಿಯನ್ನೂ ಇದೇ ಆಧಾರದಲ್ಲಿ ನೀಡಲಾಗಿತ್ತು. ಅದನ್ನು ನೋಡಬೇಕಾಗುತ್ತದೆ” ಎಂದು ವಿವರಿಸಿದರು.
“ವಿಪಕ್ಷಗಳ ಟೀಕೆಗೆ ಉತ್ತರವಾಗಿ, ನಾವು ನ್ಯಾಯಾಲಯಕ್ಕೆ ಪ್ರಭಾವ ಬೀರಲು ಸಾಧ್ಯವೇ? ನ್ಯಾಯಾಧೀಶರನ್ನು ಕೈಹಿಡಿದು ಹೀಗೆ ಮಾಡಿ ಎಂದು ಹೇಳಲು ಸಾಧ್ಯವಿಲ್ಲ. ಮುಂದಿನ ಕ್ರಮ ಕುರಿತು ಕ್ಯಾಬಿನೆಟ್ನಲ್ಲಿ ತೀರ್ಮಾನಿಸಲಾಗುವುದು. ಅಲ್ಲಿ ಸುಪ್ರೀಂ ಕೋರ್ಟ್ಗೆ ಹೋಗುವ ವಿಚಾರವೂ ಚರ್ಚೆಯಾಗಲಿದೆ” ಎಂದು ಪರಮೇಶ್ವರ್ ತಿಳಿಸಿದರು.
ದೆಹಲಿಯಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರನ್ನು ಭದ್ರತಾ ಸಿಬ್ಬಂದಿ ತಳ್ಳಾಡಿದ್ದಾರೆ ಎಂಬ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಡಾ. ಜಿ. ಪರಮೇಶ್ವರ ಅವರು ಪ್ರತಿಕ್ರಿಯಿಸಿ
ಪ್ರತಿಭಟನೆಗಳು ಹಾಗೂ ಬೃಹತ್ ಜನಸಮೂಹ ಸೇರುವ ಸಂದರ್ಭಗಳಲ್ಲಿ ಭದ್ರತಾ ವ್ಯವಸ್ಥೆ ನಿರ್ವಹಿಸುವುದು ಸವಾಲಿನ ಕೆಲಸವಾಗಿರುತ್ತದೆ. ಹಿಂದೆ ತಾವೂ ಹಲವು ಪ್ರತಿಭಟನೆಗಳಲ್ಲಿ ಭಾಗವಹಿಸಿದಾಗ ಇಂತಹ ಅನುಭವಗಳನ್ನು ಎದುರಿಸಿರುವುದಾಗಿ ಹೇಳಿದರು.
ಪ್ರತಿಭಟನೆ ನಡೆಯುವ ಸಂದರ್ಭದಲ್ಲಿ ಜನಸಂದಣಿಯನ್ನು ನಿಯಂತ್ರಿಸುವುದು ಸುಲಭವಲ್ಲ. ರಾಹುಲ್ ಗಾಂಧಿ ಅವರಿಗೆ ಭದ್ರತೆ ಒದಗಿಸುವುದು ಅಲ್ಲಿನ ಭದ್ರತಾ ಸಿಬ್ಬಂದಿಯ ಪ್ರಮುಖ ಜವಾಬ್ದಾರಿಯಾಗಿರುತ್ತದೆ. ಅವರ ಬಳಿ ಯಾರೂ ಸುಲಭವಾಗಿ ತೆರಳದಂತೆ ನೋಡಿಕೊಳ್ಳುವುದು ಭದ್ರತಾ ನಿಯಮಗಳ ಭಾಗವಾಗಿದೆ. ದುರದೃಷ್ಟವಶಾತ್ ಆ ಸಂದರ್ಭದಲ್ಲಿ ಮುಖ್ಯಮಂತ್ರಿಗಳೂ ಅಲ್ಲಿಗೆ ತೆರಳಿದ್ದು, ಜನಸಂದಣಿಯ ನಡುವೆ ಅವರನ್ನು ಸ್ವಲ್ಪ ತಳ್ಳಲಾಗಿದೆ ಎಂದು ವಿವರಿಸಿದರು.
ಮುಖ್ಯಮಂತ್ರಿಗಳಿಗೆ ಶಿಷ್ಟಾಚಾರವಿದ್ದರೂ ಭದ್ರತೆಯ ದೃಷ್ಟಿಯಿಂದ ಇಂತಹ ಸಂದರ್ಭಗಳಲ್ಲಿ ಸಿಬ್ಬಂದಿ ಮುಖ್ಯಮಂತ್ರಿಗಳಾಗಲಿ, ಇತರ ಗಣ್ಯರಾಗಲಿ ಎಂಬುದನ್ನು ನೋಡದೆ, ತಮಗೆ ವಹಿಸಿರುವ ವ್ಯಕ್ತಿಯ ಭದ್ರತೆಗೆ ಆದ್ಯತೆ ನೀಡುತ್ತಾರೆ ಎಂದು ತಿಳಿಸಿದರು.
ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಪ್ರತಿಕ್ರಿಯಿಸಿದ ಡಾ. ಜಿ. ಪರಮೇಶ್ವರ ಅವರು, ಸಂವಿಧಾನಾತ್ಮಕ ಸಂಸ್ಥೆಗಳು ತಮ್ಮ ಜವಾಬ್ದಾರಿಗಳನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಬೇಕು ಎಂಬುದು ಪ್ರತಿಭಟನೆಯ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ದೇಶದ ವಿವಿಧ ಭಾಗಗಳಿಂದ ಜನರು ದೆಹಲಿಗೆ ತೆರಳಿ ಪ್ರತಿಭಟನೆ ನಡೆಸುತ್ತಿರುವುದು ಯಾವುದೇ ಕಾರಣವಿಲ್ಲದೆ ಅಲ್ಲ. ಸಂವಿಧಾನಾತ್ಮಕವಾಗಿ ನಡೆಯಬೇಕಾದ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ ಎಂಬ ಆತಂಕದಿಂದ ಪ್ರತಿಭಟನೆ ಮಾಡಲಾಗುತ್ತಿದೆ. ಚುನಾವಣಾ ಆಯೋಗವು ಸ್ವತಂತ್ರ ಹಾಗೂ ನಿಷ್ಪಕ್ಷಪಾತ ಸಂಸ್ಥೆಯಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ವ್ಯಕ್ತಿ ಅಥವಾ ಪಕ್ಷದ ಪ್ರಭಾವಕ್ಕೆ ಒಳಗಾಗಿ ತೀರ್ಮಾನ ಕೈಗೊಳ್ಳಬಾರದು ಎಂದು ಹೇಳಿದರು.























