Home ಮುಖಪುಟ ಸುದ್ದಿ ಕಾನೂನು ಚೌಕಟ್ಟಿನಲ್ಲಿ ಮೇಕೆದಾಟು ಅನುಷ್ಠಾನ

ಕಾನೂನು ಚೌಕಟ್ಟಿನಲ್ಲಿ ಮೇಕೆದಾಟು ಅನುಷ್ಠಾನ

ಬೆಂಗಳೂರು, ನ. ೧೯- ಮೇಕೆದಾಟು ಯೋಜನೆ ಅನುಷ್ಠಾನ ವಿಚಾರದಲ್ಲಿ ಇಡೀ ರಾಜ್ಯವೇ ಪಕ್ಷಭೇದ ಮರೆತು ಒಂದಾಗಿದೆ. ಕಾನೂನಿನ ಚೌಕಟ್ಟಿನಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.


ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸಹ ಹಸಿರು ನಿಶಾನೆ ತೋರಿದೆ. ಕಾನೂನು ಚೌಕಟ್ಟಿನಲ್ಲಿ ನಾವು ಗೆದ್ದಿದ್ದೇವೆ. ಇಷ್ಟಾದರೂ ತಮಿಳುನಾಡು ಈ ವಿಚಾರದಲ್ಲಿ ಕ್ಯಾತೆ ತೆಗೆಯುವುದು ಸರಿಯಲ್ಲ ಎಂದರು.


ಕಾವೇರಿ ನದಿ ನೀರಿಗೆ ಸಂಬಂಧಿಸಿದಂತೆ ತಮಿಳುನಾಡು ಸಹ ಹಲವು ಯೋಜನೆಗಳನ್ನು ಜಾರಿ ಮಾಡಿದೆ. ನಾವು ಅವುಗಳಿಗೆ ಕ್ಯಾತೆ ತೆಗೆದಿಲ್ಲ. ಮೇಕೆದಾಟು ಸಂಬಂಧ ಸುಪ್ರೀಂ ಕೋರ್ಟ್ ಟಿಎಂಕೆ ಸರ್ಕಾರ ಅಧಿಕಾರದಲ್ಲಿದ್ದಾಗ ರಾಜ್ಯದ ಪರವಾಗಿ ತೀರ್ಪು ನೀಡಿದೆ. ತಮಿಳುನಾಡು ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ವಜಾ ಮಾಡಿದೆ. ಹಾಗಾಗಿ ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸಲು ನಾವು ಬದ್ಧ ಎಂದರು.


ಮೇಕೆದಾಟು ಯೋಜನೆ ವಿಚಾರಕದಲ್ದಿ ಪಕ್ಷಭೇದ ಮರೆತು ಎಲ್ಲರೂ ಒಂದಾಗಿದ್ದೇವೆ. ಒಂದಿಬ್ಬರು ಅಸೂಯೆಯಿಂದ ಮಾತನಾಡಿರಬಹುದು ಅಷ್ಟೆ. ಮಾಜಿ ಪ್ರಧಾನಿ ದೇವೇಗೌಡರು ಸಹ ಪ್ರಧಾನಿ ಮೋದಿಯವರಿಗೆ ಮೇಕೆದಾಟು ಯೋಜನೆ ಸಂಬಂಧ ಪತ್ರ ಬರೆದಿದ್ದಾರೆ. ಕುಮಾರಸ್ವಾಮಿಯವರಿಗೆ ಅಸೂಯೆ ಇರಬಹುದು ಅಷ್ಟೇ. ಏನೇ ಇರಲಿ ಯೋಜನೆ ಅನುಷ್ಠಾನ ವಿಚಾರದಲ್ಲಿ ಇಡೀ ರಾಜ್ಯವೇ ಒಂದಾಗಿದೆ ಎಂದರು.


ಈ ಯೋಜನೆ ಜಾರಿಯಿಂದ ತಮಿಳುನಾಡು, ಕರ್ನಾಟಕ ಇಬ್ಬರಿಗೂ ನ್ಯಾಯ ಸಿಗಲಿದೆ. ಮೇಕೆದಾಟು ಸಮಾನಾಂತರ ಅಣೆಕಟ್ಟು ನಿರ್ಮಾಣದಿಂದ ತಮಿಳುನಾಡಿಗೂ ನೀರು ಸಿಗುತ್ತದೆ. ಮೈಸೂರು, ಹಾಸನ, ಮಂಡ್ಯ, ತುಮಕೂರು ಜಿಲ್ಲೆಗಳಿಗೂ ಅನುಕೂಲವಾಗುತ್ತದೆ. ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಗೂ ಪರಿಹಾರ ಸಿಗುತ್ತದೆ ಎಂದರು.


ಮೇಕೆದಾಟು ಸಮಾನಾಂತರ ಅಣೆಕಟ್ಟಿನ ನೀರನ್ನು ಕರ್ನಾಟಕ ಕುಡಿಯುವ ನೀರಿಗಷ್ಟೇ ಬಳಸುತ್ತದೆ. ವ್ಯವಸಾಯಕ್ಕೆ ಬಳಸುವುದಿಲ್ಲ. ಹಾಗಾಗಿ ಈ ಯೋಜನೆ ಜಾರಿಯಿಂದ ಎರಡೂ ರಾಜ್ಯಗಳಿಗೂ ಅನುಕೂಲವಾಗುತ್ತದೆ. ಹಾಗಾಗಿ ಈ ಬಗ್ಗ ತಮಿಳುನಾಡು ಅನಗತ್ಯವಾಗಿ ತಕರಾರು ತೆಗೆಯುವುದು ಸರಿಯಲ್ಲ ಎಂದು ಅವರು ಹೇಳಿದರು.