Home ಜಿಲ್ಲೆ ಕಲಬುರಗಿ ಪಾಲಿಕೆ-ಕೆ.ಯು.ಐ.ಡಿ.ಎಫ್.ಸಿ ಪ್ರಗತಿ ಪರಿಶೀಲನಾ ಸಭೆಫೆಬ್ರವರಿ ಅಂತ್ಯಕ್ಕೆ ಹರಸೂರ್ ಇನಟೇಕ್ ವೆಲ್ ಕಾರ್ಯ ಮುಗಿಸಲು ಎಲ್ &...

ಪಾಲಿಕೆ-ಕೆ.ಯು.ಐ.ಡಿ.ಎಫ್.ಸಿ ಪ್ರಗತಿ ಪರಿಶೀಲನಾ ಸಭೆಫೆಬ್ರವರಿ ಅಂತ್ಯಕ್ಕೆ ಹರಸೂರ್ ಇನಟೇಕ್ ವೆಲ್ ಕಾರ್ಯ ಮುಗಿಸಲು ಎಲ್ & ಟಿಗೆ ಗಡುವು ನೀಡಿದ ಡಿ.ಸಿ.

ಕಲಬುರಗಿ,ನ.18- ಭೀಕರ ಬರಗಾಲದಿಂದ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಮುಂದಿನ ಬೇಸಿಗೆಯಲ್ಲಿ ಇದರ ಸಮಸ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದ್ದು, ಫೆಬ್ರವರಿ ಅಂತ್ಯಕ್ಕೆ ಬೆಣ್ಣೆತೋರಾ ಜಲಾಶಯದಿಂದ ಕಲಬುರಗಿ ನಗರಕ್ಕೆ ನೀರು ಪಡೆಯಲು ಹರಸೂರ ಇನ್ ಟೇಕ್ ವೆಲ್ ಕಾರ್ಯ ಪೂರ್ಣಗೊಳಿಸುವಂತೆ ಎಲ್ & ಟಿ ಅಧಿಕಾರಿಗಳಿಗೆ ಡಿ.ಸಿ. ಇಕ್ರಂ ಶರೀಫ್ ಗಡುವು ನೀಡಿದ್ದಾರೆ.
ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲಬುರಗಿ ಮಹಾನಗರ ಪಾಲಿಕೆ, ಕೆ.ಯು.ಐ.ಎಫ್.ಡಿ.ಸಿ ಹಾಗೂ ಎಲ್ & ಟಿ ಕಂಪನಿ ಅಧಿಕಾರಿಗಳೊಂದಿಗೆ ನಗರದಲ್ಲಿನ ಕುಡಿಯುವ ನೀರಿನ ಸಮಸ್ಯೆ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಹರಸೂರ್ ಇನ ಟೇಕ್ ವೆಲ್ ಮತ್ತು ಸಲಾಂ ಟೇಕಡಿ ಬಳಿಯ 58 ಎಂ.ಎಲ್.ಡಿ ನೀರು ಸಂಸ್ಕರಣೆ ಘಟಕ ಕಾಮಗಾರಿಗಳು ಏಕಕಾಲಕ್ಕೆ ಪೂರ್ಣಗೊಂಡಲ್ಲಿ ಮಾತ್ರ ಮುಂದಿನ ಬೇಸಿಗೆಯಲ್ಲಿ ನಗರದ ಜನತೆಗೆ ಸಮರ್ಪಕ ರೀತಿಯಲ್ಲಿ ನೀರು ಕೊಡಲು ಸಾಧ್ಯವಾಗಲಿದೆ ಎಂದರು.
ಪ್ರಸ್ತುತ ನವೆಂಬರ್ ಮಾಹೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಿರುವುದರಿಂದ ಮುಂದಿನ ಬೇಸಿಗೆಯ ಕುಡಿಯುವ ನೀರು ಸರಬರಾಜು ನಿರ್ವಹಣೆ ತುಂಬಾ ವೈಜ್ಞಾನಿಕ ರೀತಿಯಲ್ಲಿ ಮಾಡಬೇಕಿದೆ. ಇನ್ನು ಈ ಯೋಜನೆ ಸಕಾರವಾಗಬೇಕಾದರೆ ಮಹಾಗಾಂವ ನಿಂದ 33ಕೆ.ವಿ. ವಿದ್ಯುತ್ ಲೈನ್ ಕಾಮಗಾರಿ ಸಹ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕಿದೆ. ಒಟ್ಟಾರೆಯಾಗಿ ಕುಡಿಯುವ ನೀರಿನ ಕಾಮಗಾರಿಗಳನ್ನು ಯುದ್ದೋಪಾದಿಯಲ್ಲಿ ಮಾಡುವಂತೆ ಅಧಿಕಾರಿಗಳಿಗೆ ಡಿ.ಸಿ ಖಡಕ್ ಸೂಚನೆ ನೀಡಿದರು.

727 ಕಿ.ಮೀ ಪೈಪ್ ಲೈನ್ ಪೂರ್ಣ
ಕಲಬುರಗಿ ನಗರದಲ್ಲಿನ 24×7 ಕುಡಿಯುವ ನೀರು ಯೋಜನೆಯಡಿ ಇದುವರೆಗೆ 899 ಕಿ.ಮೀ ಪೈಕಿ 727 ಕಿ.ಮೀ ಪೈಪ್ ಲೈನ್ ಅಳವಡಿಕೆ ಕಾಮಗಾರಿ ಪೂರ್ಣಗೊಳಿಸಿದೆ. 62 ಸಾವಿರ ಪೈಕಿ 38 ಸಾವಿರ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಿದೆ. 12 ಟ್ಯಾಂಕ್ (ಇ.ಎಲ್.ಎಸ್.ಆರ್) ಪೈಕಿ 8 ನಿರ್ಮಿಸಿ ಕಾರ್ಯಚರಣೆ ಅರಂಭಿಸಿದ್ದು, ಇನ್ನುಳಿದ ನಾಲ್ಕು ಟ್ಯಾಂಕ್ ಕಾಮಗಾರಿ ಅಂತಿಮ ಹಂತದಲ್ಲಿದೆ ಎಂದು ಎಲ್ & ಟಿ ಪೆÇ್ರಜೆಕ್ಟ್ ಮ್ಯಾನೇಜರ್ ಪ್ರಭಾಕರನ್ ಯೋಜನೆಯ ಕಾರ್ಯ ಪ್ರಗತಿ ಸಭೆಗೆ ವಿವರಿಸಿದರು.
ಸಭೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ಪಿ.ಶ್ರವಣಕುಮಾರ, ಕೆ.ಯು.ಐ.ಎಫ್.ಡಿ.ಸಿ ಅಧೀಕ್ಷಕ ಅಭಿಯಂತ ಆರ್.ಪಿ.ಜಾಧವ, ಎಲ್ & ಟಿ ಕಂಪನಿಯ ಹಿರಿಯ ಅಧಿಕಾರಿಗಳಾದ ವೆಂಕಟೇಶ, ನಾಗರಾಜ ಹಾಗೂ ಪಾಲಿಕೆ-ಕೆ.ಯು.ಐ.ಎಪ್.ಡಿ.ಸಿ ಅಧಿಕಾರಿ ಸಿಬ್ಬಂದಿಗಳಿದ್ದರು.