
ಕಲಬುರಗಿ, ನ.18: ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ (ಎಸ್.ಬಿ.ಆರ್.) ದ್ವಿತೀಯ ಪಿಯುಸಿ ವಿದ್ಯಾರ್ಥಿ ಓಂ ಸಂಭಾ ಅವರು ಪ್ರತಿಷ್ಠಿತ ಕೃಷಿಕಲ್ಪ ಸೋಲ್ವಥಾನ್ ನಾವೀನ್ಯತಾ ಸ್ಪರ್ಧೆಯ ಅಂತಿಮ ಐದು ತಂಡಗಳಲ್ಲಿ ಸ್ಥಾನ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಟೀಮ್ ಮೆಡಿಮಿಕ್ ಪ್ರತಿನಿಧಿಯಾಗಿ ಭಾಗವಹಿಸಿದ ಓಂ ಅವರು, ರೋಗಿಗಳ ದೂರುಗಳನ್ನುನೋಂದಾಯಿಸುವುದು, ಅವುಗಳ ಸ್ಥಿತಿಗತಿಯನ್ನು ಪರಿಶೀಲಿಸುವುದು ಹಾಗೂ ನಿರ್ವಹಿಸುವ ಪ್ರಕ್ರಿಯೆಯನ್ನು ಸುಗಮಗೊಳಿಸುವ ಉದ್ದೇಶದಿಂದಮೆಡಿಟ್ರ್ಯಾಕ್ ಎಐ ಎಂಬ ಡಿಜಿಟಲ್ ಆರೋಗ್ಯ ಸೇವಾ ವೇದಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ.
ಸುಮಾರು 167 ತಂಡಗಳು ಹಾಗೂ 450ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ, ಬಹುತೇಕ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ಪದವೀಧರರ ನಡುವೆ ಮೂರು ಸುತ್ತುಗಳನ್ನು ಯಶಸ್ವಿಯಾಗಿ ಪೂರೈಸಿ ಅಂತಿಮ ಐದು ತಂಡಗಳಲ್ಲಿ ಸ್ಥಾನಪಡೆದಿದ್ದಾರೆ. ವಿಶೇಷವೆಂದರೆ, ಅಂತಿಮ ಹಂತ ತಲುಪಿದ ಏಕೈಕ ಪದವಿ ಪೂರ್ವ ಶಿಕ್ಷಣದ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಓಂ ಪಾತ್ರರಾಗಿದ್ದಾರೆ.
ತಂಡವು ಅಂತಿಮವಾಗಿ ವಿಜೇತ ಸ್ಥಾನ ಪಡೆಯದಿದ್ದರೂ, ಅಂತಿಮ ಐದು ತಂಡಗಳಲ್ಲಿ ಸ್ಥಾನ ಗಳಿಸಿರುವುದು ಮಹತ್ವದಸಾಧನೆಯಾಗಿದೆ. ಓಂ ಸಂಭಾ ಅವರ ಈ ಸಾಧನೆಯು ಅವರ ಸೃಜನಶೀಲತೆ, ತಾಂತ್ರಿಕ ಕೌಶಲ್ಯ, ನಾವೀನ್ಯತೆಯ ಚಿಂತನೆ ಹಾಗೂ ಹೊಸಕ್ಷೇತ್ರಗಳಲ್ಲಿ ಸಾಧನೆ ಮಾಡುವ ಛಲಕ್ಕೆ ಸಾಕ್ಷಿಯಾಗಿದೆ.
ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕಲಬುರಗಿ ಜಿಲ್ಲಾಧಿಕಾರಿ ಇಕ್ರಂ ಶರೀಫ್, ಕೃಷಿಕಲ್ಪದ ಸಿಇಒ ಸಿ.ಎಂ. ಪಾಟೀಲ್, ಉಲ್ಲಾಸ್ ಕಾಮತ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ವಿದ್ಯಾರ್ಥಿಯ ಸಾಧನೆಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವ ವಿಶ್ವವಿದ್ಯಾಲಯದಕುಲಾಧಿಪತಿ ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್. ಅಪ್ಪ ಅವರು ಸಂತಸ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ. 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಅವರು ಆಶೀರ್ವದಿಸಿದ್ದಾರೆ. ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಕಾಲೇಜಿನ ಪ್ರಾಚಾರ್ಯ ಎನ್.ಎಸ್. ದೇವರಕಲ್ ಮತ್ತು ಅಧ್ಯಾಪಕರು ಓಂ ಅವರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.



















