Home ಜಿಲ್ಲೆ ಬೀದಿ ಬದಿ ವ್ಯಾಪಾರಿಗಳ ನೆರವಿಗೆ ಮುಶ್ರೀಫ್:ಬಿಸಿಲಿನ ಬವಣೆ ನೀಗಿಸಲು ಶೀಘ್ರದಲ್ಲೇ ಛತ್ರಿ ವಿತರಣೆ

ಬೀದಿ ಬದಿ ವ್ಯಾಪಾರಿಗಳ ನೆರವಿಗೆ ಮುಶ್ರೀಫ್:ಬಿಸಿಲಿನ ಬವಣೆ ನೀಗಿಸಲು ಶೀಘ್ರದಲ್ಲೇ ಛತ್ರಿ ವಿತರಣೆ

ಸಂಜೆವಾಣಿ ವಾರ್ತೆ,
ವಿಜಯಪುರ, ಅ. ೨೮: ನಗರದ ಬೀದಿ ಬದಿ ವ್ಯಾಪಾರಸ್ಥರು ಎದುರಿಸುತ್ತಿರುವ ಸಂಕಷ್ಟಗಳಿಗೆ ಸ್ಪಂದಿಸುವುದರೊAದಿಗೆ ಅವರ ಹಿತಾಸಕ್ತಿ ರಕ್ಷಣೆಗೆ ಸದಾ ಬದ್ಧನಾಗಿರುತ್ತೇನೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಭರವಸೆ ನೀಡಿದರು.
ನಗರದಲ್ಲಿ ಕಡು ಬಿಸಿಲಿನ ನಡುವೆಯೂ ಜೀವನೋಪಾಯಕ್ಕಾಗಿ ವ್ಯಾಪಾರ ನಡೆಸುತ್ತಿರುವ ಬೀದಿ ಬದಿ ವ್ಯಾಪಾರಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅವರ ಬಿಸಿಲಿನ ಬವಣೆ ಕಡಿಮೆ ಮಾಡುವ ಉದ್ದೇಶದಿಂದ ಶೀಘ್ರದಲ್ಲೇ ಛತ್ರಿಗಳನ್ನು ವಿತರಿಸಲಾಗುವುದು ಎಂದು ಅವರು ತಿಳಿಸಿದರು.
ನಗರದಲ್ಲಿ ಕರ್ನಾಟಕ ಪ್ರದೇಶ ಬೀದಿ ಬದಿ ವ್ಯಾಪಾರಿಗಳ ಒಕ್ಕೂಟ ಹಾಗೂ ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಪಟ್ಟಣ ವ್ಯಾಪಾರ ಸಮಿತಿ ಸದಸ್ಯರ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಭಾನುವಾರ ನಡೆದ ವಿಜಯಪುರ ಜಿಲ್ಲಾ ಶಾಖೆಯ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬೀದಿ ಬದಿ ವ್ಯಾಪಾರಿಗಳು ತಮ್ಮ ಕುಟುಂಬಗಳ ಜೀವನ ನಿರ್ವಹಣೆಗಾಗಿ ಪ್ರತಿದಿನ ಬಿಸಿಲು, ಮಳೆ ಎನ್ನದೆ ವ್ಯಾಪಾರ ಮಾಡುತ್ತಿದ್ದಾರೆ. ಅವರ ಸಮಸ್ಯೆಗಳನ್ನು ನಿರ್ಲಕ್ಷಿಸದೆ ಮಾನವೀಯ ನೆಲೆಯಲ್ಲಿ ಸ್ಪಂದಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ವ್ಯಾಪಾರಿಗಳಿಗೆ ಅಗತ್ಯ ನೆರವು ಕಲ್ಪಿಸಲು ತಮ್ಮಿಂದಾದ ಸಹಕಾರ ನೀಡಲಾಗುವುದು ಎಂದು ಮುಶ್ರೀಫ್ ಹೇಳಿದರು.

ಬೀದಿ ಬದಿ ವ್ಯಾಪಾರಿಗಳ ಬೇಡಿಕೆಗೆ ಸ್ಪಂದನೆ

ಬೀದಿ ಬದಿ ವ್ಯಾಪಾರಸ್ಥರ ಬಿಸಿಲಿನ ಬವಣೆ ನೀಗಿಸುವ ನಿಟ್ಟಿನಲ್ಲಿ ಛತ್ರಿಗಳನ್ನು ಒದಗಿಸಬೇಕೆಂಬ ಬೇಡಿಕೆಯನ್ನು ಅಬ್ದುಲ್ ಹಮೀದ್ ಮುಶ್ರೀಫ್ ಅವರ ಗಮನಕ್ಕೆ ತರಲಾಗಿತ್ತು. ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಶೀಘ್ರದಲ್ಲೇ ಛತ್ರಿಗಳನ್ನು ವಿತರಿಸುವ ಭರವಸೆ ನೀಡಿರುವುದು ವ್ಯಾಪಾರಿಗಳಲ್ಲಿ ಸಂತಸ ಮೂಡಿಸಿದೆ ಎಂದು ಮುಖಂಡ ದಸ್ತಗೀರ ಸಾಲೋಟಗಿ ಹೇಳಿದರು.
ಬೀದಿ ಬದಿ ವ್ಯಾಪಾರಸ್ಥರ ಹಕ್ಕುಗಳು ಹಾಗೂ ಹಿತಾಸಕ್ತಿಗಳ ರಕ್ಷಣೆಗೆ ಸಂಘಟನೆ ನಿರಂತರವಾಗಿ ಹೋರಾಟ ನಡೆಸಲಿದೆ. ವ್ಯಾಪಾರಿಗಳಿಗೆ ಅಗತ್ಯ ಮೂಲಸೌಕರ್ಯ ಹಾಗೂ ಸೂಕ್ತ ಸೌಲಭ್ಯಗಳನ್ನು ಕಲ್ಪಿಸುವಂತೆ ಸಂಬAಧಿಸಿದ ಇಲಾಖೆಗಳ ಗಮನ ಸೆಳೆಯಲಾಗುವುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಕರ್ನಾಟಕ ಪ್ರದೇಶ ಬೀದಿ ಬದಿ ವ್ಯಾಪಾರಿಗಳ ಒಕ್ಕೂಟ ಹಾಗೂ ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಪಟ್ಟಣ ವ್ಯಾಪಾರ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.