Home ಜಿಲ್ಲೆ ಮಕ್ಕಳಿಗೆ ಸಂಸ್ಕಾರ ನೀಡುವುದು ತಂದೆ-ತಾಯಿಯರ ಆದ್ಯ ಕರ್ತವ್ಯ: ಮಾಣಿಕ ನೇಳಗಿ

ಮಕ್ಕಳಿಗೆ ಸಂಸ್ಕಾರ ನೀಡುವುದು ತಂದೆ-ತಾಯಿಯರ ಆದ್ಯ ಕರ್ತವ್ಯ: ಮಾಣಿಕ ನೇಳಗಿ

ಬೀದರ್: ಶರಣರು ನೀಡಿದ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕಿನ ಮೌಲ್ಯ ಹೆಚ್ಚುವುದರ ಜೊತೆಗೆ ನೆಮ್ಮದಿಯ ಜೀವನ ನಮ್ಮದಾಗುತ್ತದೆ ಎಂದು ಹಿರಿಯ ಸಾಹಿತಿ ಮಾಣಿಕ ನೇಳಗಿ ಹೇಳಿದರು.ಚಿಟಗುಪ್ಪ ತಾಲ್ಲೂಕಿನ ನಿರ್ಣಾ ಗ್ರಾಮದಲ್ಲಿ ನಡೆದ ನಿಜಶರಣ ಅಂಬಿಗರ ಚೌಡಯ್ಯನವರ ವಿಚಾರ ಜ್ಯೋತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದು ತಂದೆ-ತಾಯಿಯರ ಆದ್ಯ ಕರ್ತವ್ಯವಾಗಿದೆ. ಸಂಸ್ಕಾರಯುತ ಮಕ್ಕಳೇ ನಾಡಿನ ಅಮೂಲ್ಯ ಸಂಪತ್ತು. ಅಂತಹ ಮಕ್ಕಳಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಆದ್ದರಿಂದ ಪಾಲಕರು ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ, ನೈತಿಕ ಮೌಲ್ಯಗಳು ಹಾಗೂ ಶರಣರ ವಚನಗಳ ಮಹತ್ವವನ್ನು ತಿಳಿಸಿಕೊಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಹುಡಗಿ ನಿಜಶರಣ ಅಂಬಿಗರ ಚೌಡಯ್ಯ ಮಠದ ಪೀಠಾಧಿಪತಿ ಪೂಜ್ಯ ರಾಜಶೇಖರ ಗುರೂಜಿ ಮಾತನಾಡಿ, ೧೨ನೇ ಶತಮಾನದಲ್ಲಿ ನಡೆದ ವೈಚಾರಿಕ ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರು ಪ್ರಮುಖರಾಗಿದ್ದಾರೆ. ಅವರ ವಚನಗಳಲ್ಲಿರುವ ಸಾಮಾಜಿಕ ಕಳಕಳಿ, ವೈಚಾರಿಕತೆ ಮತ್ತು ಜೀವನ ಮೌಲ್ಯಗಳನ್ನು ಮನೆಮನೆಗೆ ತಲುಪಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದರು.
ಈ ಉದ್ದೇಶದಿಂದ ಮಠವು ಜಿಲ್ಲೆಯ ಪ್ರತಿಯೊಂದು ಗ್ರಾಮಕ್ಕೂ ತೆರಳಿ ಜನರಲ್ಲಿ ವಚನಗಳ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಅವಿರತವಾಗಿ ಮಾಡುತ್ತಿದೆ. ಜನರ ಬೆಂಬಲ ಮತ್ತು ಆಸಕ್ತಿ ಮಠಕ್ಕೆ ಇನ್ನಷ್ಟು ಶಕ್ತಿ ತುಂಬಿವೆ. ಪ್ರತಿಯೊಬ್ಬರೂ ನಿತ್ಯ ವಚನಗಳನ್ನು ಪಠಿಸುವುದರ ಜೊತೆಗೆ ತಮ್ಮ ಮಕ್ಕಳಿಗೂ ವಚನ ಪಠಣದ ಅಭ್ಯಾಸ ಮಾಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾರಾಯಣರಾವ ಮರಕುಂದಾ ವಹಿಸಿದ್ದರು. ನಿವೃತ್ತ ಅಧಿಕಾರಿ ತಿಪ್ಪಣ್ಣ ರಾಮಪೂರೆ ನಿರೂಪಿಸಿದರು.
ವೇದಿಕೆಯಲ್ಲಿ ಮುತ್ತಂಗಿಯ ಶಂಕರರಾವ ದಾಸ, ಟೋಕರೆ ಕೋಳಿ ಸಮಾಜದ ಅಧ್ಯಕ್ಷ ಸೂರ್ಯಕಾಂತ ಕಾಗಿ, ಮುಖಂಡರಾದ ಅಶೋಕ ಕಾಗಿ, ರಮೇಶ ಬಾಕಿ, ಸೂರ್ಯಕಾಂತ ಚಾಂಗ್ಲೇಲಾ, ನಾಗರಾಜ ನಾಟಿಕಾರ, ವಿಠಲ ಕಲೋಹಲ, ಮಲ್ಲಮ್ಮ ಬನ್ನಳ್ಳಿ, ಶಕುಂತಲಾ ಮರಕುಂದಾ, ವಿಠಲ ಎಂಕಟಿ, ಪ್ರಭಾವತಿ ಕಾಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.