
ಬೆಂಗಳೂರು, ಅ.೨೮- ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ನಾಲ್ಕಕ್ಕೆ ನಾಲ್ಕೂ ಸ್ಥಾನಗಳನ್ನು ಗೆಲ್ಲುವ ಮೂಲಕ ೨೦೨೮ರ ವಿಧಾನಸಭೆ ಚುನಾವಣೆಗೆ ಸ್ಪಷ್ಟ ಸಂದೇಶ ನೀಡಿದೆ.ಎರಡೂ ಪಕ್ಷಗಳು ಇದೇ ಒಗ್ಗಟ್ಟಿನಿಂದ ಮುಂದುವರಿದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ೧೬೦ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನಪರಿಷತ್ ಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವಿನ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ನಾಯಕರು, ಕಾರ್ಯಕರ್ತರು ಹಾಗೂ ಜಿಲ್ಲಾಧ್ಯಕ್ಷರು ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ. ಎಲ್ಲಿಯೂ ಅಪಸ್ವರಕ್ಕೆ ಅವಕಾಶ ನೀಡದೆ ಹಾಲು-ಜೇನಿನಂತೆ ಒಂದಾಗಿ ಕಾರ್ಯನಿರ್ವಹಿಸಿದ್ದಾರೆ. ಇದೇ ಒಗ್ಗಟ್ಟು ೨೦೨೮ರ ಚುನಾವಣೆಯಲ್ಲಿಯೂ ಮುಂದುವರಿಯಲಿದೆ ಎಂದರು.
ಬೆಂಗಳೂರು ಕ್ಷೇತ್ರದ ಅಭ್ಯರ್ಥಿ ರಂಗನಾಥ್ ಗೆಲುವಿಗೆ ಅಭಿನಂದನೆ ಸಲ್ಲಿಸಿದ ಅಶೋಕ್,ಕಳೆದ ಬಾರಿ ಸಮನ್ವಯದ ಕೊರತೆಯಿಂದಾಗಿ ಮೈತ್ರಿಕೂಟಕ್ಕೆ ಹಿನ್ನಡೆಯಾಗಿತ್ತು.ಈ ಬಾರಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ತಾವು ಒಟ್ಟಿಗೆ ಕುಳಿತು ಚರ್ಚಿಸಿ,ಸಮನ್ವಯದಿಂದ ಕೆಲಸ ಮಾಡಿದ್ದೇವೆ.ಇದರ ಫಲವಾಗಿ ಗೆಲುವು ಸಾಧ್ಯವಾಗಿದೆ ಎಂದು ಹೇಳಿದರು.
ಸತತ ಐದು ಬಾರಿ ಗೆಲುವು ಸಾಧಿಸಿದ್ದ ಪುಟ್ಟಣ್ಣರನ್ನು ಸೋಲಿಸಿರುವುದು ಮಹತ್ವದ ಬೆಳವಣಿಗೆ.ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಪ್ತರಾಗಿದ್ದರು. ಈ ಸೋಲು ಕಾಂಗ್ರೆಸ್‌ಗೆ ದೊಡ್ಡ ಹಿನ್ನಡೆಯಾಗಿದೆ ಎಂದು ಅಶೋಕ್ ಅಭಿಪ್ರಾಯಪಟ್ಟರು.
ಬೆಂಗಳೂರು ಕ್ಷೇತ್ರದ ಗೆಲುವಿನಲ್ಲಿ ಬಿಜೆಪಿ ಸಂಘಟನಾ ನಾಯಕ ಬಿ.ಎಲ್.ಸಂತೋಷ್ ಪಾತ್ರ ಮಹತ್ವದ್ದಾಗಿದೆ. ಬೆಂಗಳೂರು ಕ್ಷೇತ್ರವನ್ನು ಗೆಲ್ಲುವುದರಿಂದ ಪಕ್ಷಕ್ಕೆ ಮತ್ತಷ್ಟು ಶಕ್ತಿ ದೊರೆಯಲಿದೆ ಎಂದು ಅವರು ಪ್ರೋತ್ಸಾಹಿಸಿದ್ದರು. ಪಕ್ಷದ ಎಲ್ಲ ಕಾರ್ಪೊರೇಟರ್‌ಗಳು ಶ್ರಮವಹಿಸಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಚುನಾವಣೆಗಳಲ್ಲಿ ಸೋತಾಗ ಕಾಂಗ್ರೆಸ್ ನಾಯಕರು ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಬೇಕೆಂದು ಒತ್ತಾಯಿಸುತ್ತಾರೆ. ಆದರೆ, ಈ ವಿಧಾನಪರಿಷತ್ ಚುನಾವಣೆ ಬ್ಯಾಲೆಟ್ ಪೇಪರ್ ಮೂಲಕ ನಡೆದಿದ್ದರೂ ಕಾಂಗ್ರೆಸ್‌ಗೆ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಯಾವ ವಿಧಾನದಲ್ಲಿ ಚುನಾವಣೆ ನಡೆದರೂ ಎನ್‌ಡಿಎ ಗೆಲ್ಲಲಿದೆ ಎಂಬುದನ್ನು ಫಲಿತಾಂಶ ಸಾಬೀತುಪಡಿಸಿದೆ ಎಂದು ಅಶೋಕ್ ಹೇಳಿದರು.
ಗೆಲುವು ಸಾಧಿಸಲು ಶ್ರಮಿಸಿದ ಎಲ್ಲ ಕಾರ್ಯಕರ್ತರು, ಜಿಲ್ಲಾಧ್ಯಕ್ಷರು ಹಾಗೂ ಮತದಾರರಿಗೆ ಅಭಿನಂದನೆ ಸಲ್ಲಿಸಿದ ಅವರು, ಕರ್ನಾಟಕದಲ್ಲಿ ಸುಭದ್ರ ಎನ್‌ಡಿಎ ಸರ್ಕಾರ ರಚಿಸುವ ನಿಟ್ಟಿನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ನಾಲ್ಕೂ ಕ್ಷೇತ್ರಗಳಲ್ಲಿ ಸೋಲು ಕಂಡಿರುವ ಕಾಂಗ್ರೆಸ್ ನಾಯಕರು ದೆಹಲಿಗೆ ತೆರಳುವ ಯಾತ್ರೆ ರದ್ದುಗೊಳಿಸಿದರೆ ಒಳ್ಳೆಯದು ಎಂದು ಅಶೋಕ್ ಟೀಕಿಸಿದರು.ಹಿಂದೆ ಚನ್ನಪಟ್ಟಣ ಮತ್ತು ಶಿಗ್ಗಾವಿ ಉಪಚುನಾವಣೆ ನಡೆದ ಸಂದರ್ಭದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಈಗ ಅವರನ್ನು ಮೂಲೆಗುಂಪು ಮಾಡಲಾಗಿದೆ. ಹೊಸ ಮುಖ್ಯಮಂತ್ರಿ ಇದ್ದಾರೆ. ಸುರಂಗ ಮಾರ್ಗ ನಿರ್ಮಿಸುವುದಾಗಿ ಹೇಳಿದ್ದವರನ್ನೇ ಈಗ ಸುರಂಗದೊಳಗೆ ಕಳುಹಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದೇ ವೇಳೆ, ಸಿದ್ದರಾಮಯ್ಯಗೆ ಸಂಬಂಧಿಸಿದ ಸ್ಟಿಂಗ್ ಸಿಡಿ ವಿಚಾರ ಪ್ರಸ್ತಾಪಿಸಿದ ಅಶೋಕ್, ಈ ಪ್ರಕರಣದಿಂದ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ.ಕಾಂಗ್ರೆಸ್‌ನವರೇ ಸ್ಟಿಂಗ್ ಮಾಡಿಸಿದ್ದಾರೆ ಹಾಗೂ ಪ್ರಕರಣದಲ್ಲಿ ಸಿಲುಕಿರುವ ನಾಯಕಿಯೂ ಕಾಂಗ್ರೆಸ್‌ನವರೇ ಎಂದು ಆರೋಪಿಸಿದರು.

























