Home ಮುಖಪುಟ ಸುದ್ದಿ ಎಂಎಲ್‌ಸಿ ಸೋಲಿಗೆ ನಾಯಕತ್ವ ಬದಲಾವಣೆ ಕಾರಣವಲ್ಲ

ಎಂಎಲ್‌ಸಿ ಸೋಲಿಗೆ ನಾಯಕತ್ವ ಬದಲಾವಣೆ ಕಾರಣವಲ್ಲ

ಬೆಂಗಳೂರು, ಅ. ೨೮: ವಿಧಾನ ಪರಿಷತ್ತಿನ ನಾಲ್ಕು ಕ್ಷೇತ್ರಗಳ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ನಾಯಕತ್ವ ಬದಲಾವಣೆ ಅಥವಾ ಸ್ಟಿಂಗ್ ಆಪರೇಷನ್ ವಿವಾದ ಕಾರಣವಲ್ಲ. ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರಗಳತ್ತ ಪಕ್ಷ ಈವರೆಗೆ ಹೆಚ್ಚಿನ ಗಮನ ನೀಡಿರಲಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಬಿಜೆಪಿ- ಜೆಡಿಎಸ್ ಮೈತ್ರಿಯಿಂದ ಎರಡೂ ಪಕ್ಷಗಳಿಗೆ ಹೆಚ್ಚಿನ ಬಲ ಬಂದಿದೆ. ಅವರಿಗೆ ಮೊದಲಿನಿಂದಲೂ ತಮ್ಮದೇ ಆದ ಮತಬ್ಯಾಂಕ್ ಇತ್ತು. ಎರಡೂ ಪಕ್ಷಗಳು ಒಂದಾಗಿದ್ದರಿಂದ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದು ಅವರು ವಿಶ್ಲೇಷಿಸಿದರು.

ಪಕ್ಷದ ಕಾರ್ಯಕರ್ತರ ಕಡೆಗಣನೆಯಿಂದ ಅಸಮಾಧಾನವಿರುವುದನ್ನು ನಿರಾಕರಿಸಲಾಗದು. ಆದರೆ, ಈ ಚುನಾವಣೆಯ ಸೋಲಿಗೆ ಅದೇ ಪ್ರಮುಖ ಕಾರಣವಲ್ಲ. ಸೋಲು ನಮ್ಮ ಪಾಲಿನದ್ದಾಗಿದ್ದರೆ ಅದನ್ನು ಒಪ್ಪಿಕೊಳ್ಳುತ್ತಿದ್ದೆವು ಎಂದು ಹೇಳಿದರು.

ಇತ್ತೀಚಿನ ಅಡ್ಡಮತದಾನದಿಂದ ಬಿಜೆಪಿ- ಜೆಡಿಎಸ್‌ಗೆ ಯಾವುದೇ ತೊಂದರೆಯಾಗಿಲ್ಲ. ಬಾಗಲಕೋಟೆ ಮತ್ತು ದಾವಣಗೆರೆ ಚುನಾವಣೆಗಳ ಫಲಿತಾಂಶಗಳು ಆಯಾ ಚುನಾವಣೆಗಳಿಗೆ ಸೀಮಿತವಾಗಿವೆ. ಅವುಗಳನ್ನು ಮುಂದಿನ ವಿಧಾನಸಭೆ ಚುನಾವಣೆಯ ಫಲಿತಾಂಶದೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿದ್ದಾಗಲೂ ಕಾಂಗ್ರೆಸ್ ಚುನಾವಣೆಗಳಲ್ಲಿ ಸೋತಿದೆ. ಈ ಹಿಂದೆ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗಲೂ ಸೋಲು ಎದುರಿಸಿದ್ದೇವೆ. ಹೀಗಾಗಿ, ಸೋಲಿಗೆ ಮುಖ್ಯಮಂತ್ರಿಗಳು ಅಥವಾ ನಾಯಕತ್ವವನ್ನೇ ಹೊಣೆ ಮಾಡಲಾಗದು ಎಂದು ಸ್ಪಷ್ಟಪಡಿಸಿದರು.

ಈ ಬಾರಿ ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರಗಳ ಚುನಾವಣೆಯನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿ ಶಾಸಕರು ಸೇರಿದಂತೆ ಹಲವು ನಾಯಕರು ಪ್ರಚಾರ ನಡೆಸಿದ್ದರು. ಆದರೂ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ ಎಂದರು.

ಸ್ಟಿಂಗ್ ಆಪರೇಷನ್ ವಿವಾದಕ್ಕೂ ಈ ಚುನಾವಣೆಯ ಸೋಲಿಗೂ ಯಾವುದೇ ಸಂಬಂಧವಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು. ಈ ಕ್ಷೇತ್ರಗಳಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಮತದಾರರ ಸಂಖ್ಯೆ ಹೆಚ್ಚಿರುವುದರಿಂದ ಎಲ್ಲ ಪಕ್ಷಗಳೂ ಆ ಸಮುದಾಯಗಳಿಗೆ ಟಿಕೆಟ್ ನೀಡಿದ್ದವು ಎಂದು ತಿಳಿಸಿದರು.

ಕಾಂಗ್ರೆಸ್‌ಗೆ ಕೆಲವು ಕ್ಷೇತ್ರಗಳಲ್ಲಿ ಶೇ.೪೦ರಿಂದ ಶೇ.೪೫ರವರೆಗೆ ಮತಗಳು ಬಂದಿವೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಸೋಲಿನ ಅಂತರ ಸುಮಾರು ೯೦೦ ಮತಗಳಷ್ಟಿತ್ತು ಎಂದು ಅವರು ವಿವರಿಸಿದರು.