Home ಜಿಲ್ಲೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಸಂಘಟನಾ ಸಾಮರ್ಥ್ಯವೇ ಮಾನದಂಡ: ಕೆಪಿಸಿಸಿ ವೀಕ್ಷಕ ಹಸನಸಾಬ್ ಧೊತಿಯಾಳ್

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಸಂಘಟನಾ ಸಾಮರ್ಥ್ಯವೇ ಮಾನದಂಡ: ಕೆಪಿಸಿಸಿ ವೀಕ್ಷಕ ಹಸನಸಾಬ್ ಧೊತಿಯಾಳ್

ಔರಾದ್ : ಪಕ್ಷದ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಪಕ್ಷದ ಕಾರ್ಯಕರ್ತರ ಸಂಘಟನಾ ಸಾಮರ್ಥ್ಯ, ಪಕ್ಷನಿಷ್ಠೆ ಹಾಗೂ ಜನಸಂಪರ್ಕವನ್ನು ಪರಿಗಣಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು ಎಂದು ಕೆಪಿಸಿಸಿ ವೀಕ್ಷಕ ಹಸನಸಾಬ್ ಧೊತಿಯಾಳ್ ತಿಳಿಸಿದರು.

ಪಟ್ಟಣದ ಸಾಯಿ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯ ಸೃಜನಶೀಲ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು
ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹಾಗೂ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಮುನ್ನಡೆಯುವ ಸಾಮರ್ಥ್ಯ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು. ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವುದು, ಕಾರ್ಯಕರ್ತರಲ್ಲಿ ಒಗ್ಗಟ್ಟು ಮೂಡಿಸುವುದು ಹಾಗೂ ಪಕ್ಷದ ತತ್ವ, ಸಿದ್ಧಾಂತಗಳನ್ನು ಜನರಿಗೆ ತಲುಪಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿಯಲ್ಲಿ ಪಕ್ಷದ ಹಿರಿಯ ಮುಖಂಡರು, ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರ ಅಭಿಪ್ರಾಯಗಳಿಗೂ ಮಹತ್ವ ನೀಡಲಾಗುವುದು. ಪಕ್ಷದ ಸಂಘಟನೆಯನ್ನು ಮತ್ತಷ್ಟು ಕ್ರಿಯಾಶೀಲಗೊಳಿಸಿ ಮುಂಬರುವ ರಾಜಕೀಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸೂಕ್ತ ವ್ಯಕ್ತಿಗೆ ಜವಾಬ್ದಾರಿ ವಹಿಸಲಾಗುವುದು ಎಂದು ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜ್ಯೋತಿ ಮುರಗೋಳ ಮಾತನಾಡಿ ಕ್ಷೇತ್ರದ ಎಲ್ಲ ಕಾರ್ಯಕರ್ತರು ಒಗ್ಗಟ್ಟಾಗಿ ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕು, ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯತಿ ಚುನಾವಣೆಯಲ್ಲಿ ನಿಷ್ಠಾವಂತರಾಗಿ ಕೆಲಸ ಮಾಡಿ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಎಲ್ಲರೂ ಒಂದಾಗಿ ಕೆಲಸ ಮಾಡಬೇಕು, ಈ ಮುಂಚೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ರಾಜಕುಮಾರ ಹಲ್ಬುರ್ಗೆ ಅವರು ಸುಮಾರು ಒಂಬತ್ತು ವರ್ಷಗಳ ಕಾಲ ಉತ್ತಮವಾಗಿ ಪಕ್ಷದ ಕೆಲಸ ಮಾಡಿದ್ದಾರೆ, ಅದೇ ರೀತಿ ಮುಂದೆ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಿ ಪಕ್ಷದ ಬಲವರ್ಧನೆಗೆ ಕೈಜೋಡಿಸಬೇಕು ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷ ಅಬ್ದುಲ್ ಮನ್ನಾನಸೇಠ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲ್ಬುರ್ಗೆ, ಭೀಮಸೇನರಾವ ಶಿಂಧೆ, ರಾಜಶ್ರೀ ಸ್ವಾಮಿ, ಸಂಜಯ ಜಾಗಿರದಾರ, ಚನ್ನಪ್ಪ ಉಪ್ಪೆ, ಅಮರ ಜಾಧವ, ಸುನೀಲಕುಮಾರ ದೇಶಮುಖ, ಧನಾಜಿ ಜಾಧವ, ರಾಮಣ್ಣ ವಡಿಯಾರ, ಶರಣಪ್ಪ ಪಾಟೀಲ, ಸುಧಾಕರ ಕೊಳ್ಳೂರ, ಅನಿಲ ಬೆಲೂರೆ, ರಾಜಕುಮಾರ ಕಂದಗೊಳ, ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.


ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ೫೦ ಆಕಾಂಕ್ಷಿಗಳು

ಪಟ್ಟಣದ ಸಾಯಿ ಕಲ್ಯಾಣ ಮಂಟಪದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಂಘಟನೆಯ ಸೃಜನಶೀಲ ಅಭಿಯಾನ ಕಾರ್ಯಕ್ರಮದಲ್ಲಿ ಕೆಪಿಸಿಸಿ ವಿಕ್ಷಕರಿಗೆ ತಾಲೂಕಿನಿಂದ ಸುಮಾರು ೫೦ ಜನ ಆಕಾಂಕ್ಷಿಗಳು ಔರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ.