
ನವದೆಹಲಿ,ಅ.27- ಅರುಣಾಚಲ ಪ್ರದೇಶದ ಗಡಿಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆಯುತ್ತಿರುವ ಬಿಕ್ಕಟ್ಟು ಭಾರತದ ಗಡಿ ಭದ್ರತಾ ಪಡೆಗಳಲ್ಲಿನ ಮಾನವ ಸಂಪನ್ಮೂಲದ ಕೊರತೆಯನ್ನು ಬಹಿರಂಗಪಡಿಸಿದ್ದು, ಭದ್ರತಾ ಸವಾಲುಗಳನ್ನು ಎದುರಿಸುವ ಪಡೆಗಳ ಸಾಮಥ್ರ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕೇಂದ್ರ ಗೃಹ ಸಚಿವಾಲಯದ ಲಭ್ಯವಿರುವ ಮಾಹಿತಿಯ ಪ್ರಕಾರ, ಇಂಡೋ-ಟಿಬೆಟಿಯನ್ ಬಾರ್ಡರ್ ಪೆÇಲೀಸ್ (ಐಟಿಬಿಪಿ), ಸಶಸ್ತ್ರ ಸೀಮಾ ಬಲ್ (ಎಸ್ಎಸ್ಬಿ), ಬಾರ್ಡರ್ ಸೆಕ್ಯುರಿಟಿ ಫೆÇೀರ್ಸ್ (ಬಿಎಸ್ಎಫ್) ಮತ್ತು ಅಸ್ಸಾಂ ರೈಫಲ್ಸ್ ಪಡೆಗಳಲ್ಲಿ ಫೆಬ್ರವರಿ ಅಂತ್ಯದ ವೇಳೆಗೆ ಒಟ್ಟು 37,397 ಹುದ್ದೆಗಳು ಖಾಲಿ ಉಳಿದಿವೆ.
ಅರುಣಾಚಲ ಪ್ರದೇಶದ ಹಲವಾರು ಸೂಕ್ಷ್ಮ ಪ್ರದೇಶಗಳಲ್ಲಿ ಚೀನಾದ ಸೈನಿಕರೊಂದಿಗಿನ ಬಿಕ್ಕಟ್ಟು ಮುಂದುವರೆದಿದೆ ಎಂದು ಐಟಿಬಿಪಿ ಮಹಾನಿರ್ದೇಶಕ ಶತ್ರುಘ್ನ ಕಪೂರ್ ಇತ್ತೀಚೆಗೆ ಹೇಳಿಕೆ ನೀಡಿದ ಬೆನ್ನಲ್ಲೇ ಈ ಸಿಬ್ಬಂದಿ ಕೊರತೆಯ ವಿಷಯವು ತೀವ್ರ ಗಮನ ಸೆಳೆದಿದೆ. ಚೀನಾದೊಂದಿಗಿನ 3,488 ಕಿಲೋಮೀಟರ್ ಉದ್ದದ ವಾಸ್ತವಿಕ ನಿಯಂತ್ರಣ ರೇಖೆಯನ್ನು (ಎಲ್ಎಸಿ), ವಿಶೇಷವಾಗಿ ಅರುಣಾಚಲ ಪ್ರದೇಶದ ಅತ್ಯಂತ ಕಠಿಣ ಪರ್ವತ ಭೂಪ್ರದೇಶಗಳನ್ನು ಕಾಯುವ ಜವಾಬ್ದಾರಿ ಐಟಿಬಿಪಿಯ ಮೇಲಿದೆ. ಇಲ್ಲಿ ಮಂಜೂರಾದ 105,136 ಹುದ್ದೆಗಳ ಪೈಕಿ 12,333 ಹುದ್ದೆಗಳು ಖಾಲಿ ಇದ್ದು, ಪ್ರಸ್ತುತ ವಾಸ್ತವಿಕ ಬಲ 92,803 ಮಾತ್ರವಾಗಿದೆ. ಅಂದರೆ ಸರಿಸುಮಾರು ಶೇಕಡಾ 11.7 ರಷ್ಟು ಹುದ್ದೆಗಳು ಭರ್ತಿಯಾಗದೆ ಉಳಿದಿವೆ.
ಅದೇ ರೀತಿ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದೊಂದಿಗಿನ ಸೂಕ್ಷ್ಮ ಗಡಿಗಳನ್ನು ಕಾಯುತ್ತಿರುವ ಬಿಎಸ್ಎಫ್ನ ಮಂಜೂರಾದ ಬಲ 271,877 ಆಗಿದ್ದರೂ, ಪ್ರಸ್ತುತ 257,346 ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, 14,531 ಹುದ್ದೆಗಳು ಖಾಲಿ ಇವೆ. ನೇಪಾಳ ಮತ್ತು ಭೂತಾನ್ ಗಡಿಗಳ ಸುರಕ್ಷತೆಯ ಉಸ್ತುವಾರಿ ಹೊತ್ತಿರುವ ಎಸ್ಎಸ್ಬಿಯಲ್ಲಿ ಮಂಜೂರಾದ 100,549 ಹುದ್ದೆಗಳಲ್ಲಿ 6,784 ಹುದ್ದೆಗಳು ಭರ್ತಿಯಾಗಬೇಕಿದೆ. ಈಶಾನ್ಯ ಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳು ಮತ್ತು ಮ್ಯಾನ್ಮಾರ್ ಗಡಿಯ ಕಠಿಣ ಭೂಪ್ರದೇಶಗಳಲ್ಲಿ ಕಣ್ಣಾವಲು ವಹಿಸುವ ಅಸ್ಸಾಂ ರೈಫಲ್ಸ್ ಪಡೆಯಲ್ಲಿ 3,749 ಹುದ್ದೆಗಳು ಖಾಲಿ ಇವೆ. ಈ ನಾಲ್ಕೂ ಪ್ರಮುಖ ಪಡೆಗಳ ಒಟ್ಟು ಬಲವು ಅವುಗಳ ಸಂಯೋಜಿತ ಮಂಜೂರಾತಿ ಬಲಕ್ಕಿಂತ ಶೇಕಡಾ 10 ಕ್ಕಿಂತಲೂ ಹೆಚ್ಚು ಕಡಿಮೆಯಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ಕುರಿತು ಕಳವಳ ವ್ಯಕ್ತಪಡಿಸಿರುವ ಭದ್ರತಾ ತಜ್ಞ ಬ್ರಿಗೇಡಿಯರ್ ಬಿ.ಕೆ. ಖನ್ನಾ (ನಿವೃತ್ತ), ಅರುಣಾಚಲ ಪ್ರದೇಶದಲ್ಲಿ ಚೀನಾದೊಂದಿಗಿನ ನಿರಂತರ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ಮಾನವ ಸಂಪನ್ಮೂಲಗಳ ಕೊರತೆಯು ಅತ್ಯಂತ ಕಾರ್ಯತಂತ್ರದ ಮಹತ್ವವನ್ನು ಪಡೆದುಕೊಂಡಿದೆ ಎಂದು ತಿಳಿಸಿದ್ದಾರೆ.























