
ಸಂಜೆ ವಾಣಿ ವಾರ್ತೆ |
ಜಮಖಂಡಿ: ಮಾನಸಿಕ ಒತ್ತಡ ಹಾಗೂ ನಕಾರಾತ್ಮಕ ಆಲೋಚನೆಗಳನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಕೊರಗುವ ಬದಲು, ಆರಂಭಿಕ ಹಂತದಲ್ಲಿಯೇ ವೈದ್ಯರ ಸಲಹೆ ಪಡೆದು ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶ ಬಸವರಾಜ್ ಹೇಳಿದರು.
ನಗರದ ಉಪ ಕಾರಾಗೃಹದಲ್ಲಿ ಮಂಗಳವಾರ (ಅ.೨೭) ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬಾಗಲಕೋಟೆ; ತಾಲೂಕು ಕಾನೂನು ಸೇವಾ ಸಮಿತಿ, ಜಮಖಂಡಿ; ನ್ಯಾಯವಾದಿಗಳ ಸಂಘ, ಆರೋಗ್ಯ ಇಲಾಖೆ ಹಾಗೂ ಉಪ ಕಾರಾಗೃಹದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾನಸಿಕ ಆರೋಗ್ಯದ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಪರಿಹಾರಗಳಿವೆ. ವ್ಯಕ್ತಿಯು ತನ್ನ ಮನಸ್ಸಿನಲ್ಲಿರುವ ನೋವು, ಆತಂಕ ಹಾಗೂ ಒತ್ತಡವನ್ನು ಯಾರೊಂದಿಗೂ ಹಂಚಿಕೊಳ್ಳಲಾಗದೆ ಅನುಭವಿಸುತ್ತಿರಬಹುದು. ಆದರೆ ವೈದ್ಯರ ಸಲಹೆ ಪಡೆಯುವುದರಿಂದ ಸಮಸ್ಯೆಯನ್ನು ಆರಂಭದಲ್ಲಿಯೇ ಗುರುತಿಸಿ ಪರಿಹರಿಸಿಕೊಳ್ಳಲು ಸಾಧ್ಯವಾಗುತ್ತದೆ. ಮಾನಸಿಕ ಸಮಸ್ಯೆಗಳನ್ನು ಮುಚ್ಚಿಡದೆ ಯಾವುದೇ ಮುಜುಗರವಿಲ್ಲದೆ ವೈದ್ಯಕೀಯ ನೆರವು ಪಡೆಯಬೇಕು ಎಂದು ಸಲಹೆ ನೀಡಿದರು.
ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ ಕುಟುಂಬದ ಸದಸ್ಯರೊಂದಿಗಿನ ಒಡನಾಟ ಕಡಿಮೆಯಾಗಬಹುದು. ಮಕ್ಕಳೊಂದಿಗೆ ಸರಿಯಾಗಿ ಮಾತನಾಡಲು ಸಾಧ್ಯವಾಗದ ಪರಿಸ್ಥಿತಿಯೂ ನಿರ್ಮಾಣವಾಗಬಹುದು. ಹೀಗಾಗಿ ಮಾನಸಿಕವಾಗಿ ಸದೃಢರಾಗಲು ಪ್ರತಿದಿನ ವಾಕಿಂಗ್, ಯೋಗಾಭ್ಯಾಸ, ಪುಸ್ತಕ ಓದುವಿಕೆ, ಆಟೋಟ ಹಾಗೂ ಬರವಣಿಗೆಯಂತಹ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದರು.
ಶಿಕ್ಷೆಯ ಉದ್ದೇಶ ವ್ಯಕ್ತಿಯ ಸುಧಾರಣೆ
ಕಾರಾಗೃಹದಲ್ಲಿರುವವರು ಹಿಂದಿನ ಘಟನೆಗಳನ್ನೇ ನೆನಪಿಸಿಕೊಂಡು ಕೊರಗದೆ, ಮುಂದಿನ ಜೀವನವನ್ನು ಉತ್ತಮಗೊಳಿಸುವತ್ತ ಗಮನಹರಿಸಬೇಕು. ಭಾರತೀಯ ಕಾನೂನು ವ್ಯವಸ್ಥೆಯಲ್ಲಿ ಶಿಕ್ಷೆಯ ಜೊತೆಗೆ ವ್ಯಕ್ತಿಯ ಸುಧಾರಣೆಗೂ ಮಹತ್ವವಿದೆ. ಅಪರಾಧ ಮಾಡಿದ ವ್ಯಕ್ತಿಯನ್ನು ಶಿಕ್ಷಿಸುವುದಷ್ಟೇ ಅಲ್ಲದೆ, ಆತನಲ್ಲಿ ಬದಲಾವಣೆ ತಂದು ಸಮಾಜದ ಮುಖ್ಯವಾಹಿನಿಗೆ ಮರಳಿ ಕರೆತರುವುದೂ ಸುಧಾರಣಾತ್ಮಕ ನ್ಯಾಯದ ಉದ್ದೇಶವಾಗಿದೆ ಎಂದು ನ್ಯಾಯಾಧೀಶ ಬಸವರಾಜ್ ತಿಳಿಸಿದರು.
ಮಾನಸಿಕ ಆರೋಗ್ಯ ಸಮಸ್ಯೆ ಇರುವವರ ಹಕ್ಕುಗಳನ್ನು ಗೌರವಿಸಿ
ನ್ಯಾಯವಾದಿ ಜಗದೀಶ ಕೌಜಲಗಿ ಉಪನ್ಯಾಸ ನೀಡಿ, ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುವವರನ್ನು ಸಮಾಜದಿಂದ ಪ್ರತ್ಯೇಕವಾಗಿ ಕಾಣದೆ, ಅವರ ಹಕ್ಕುಗಳನ್ನು ಗೌರವಿಸಿ, ಸೂಕ್ತ ಚಿಕಿತ್ಸೆ ಮತ್ತು ಆರೈಕೆ ದೊರಕಿಸಲು ಪ್ರತಿಯೊಬ್ಬರೂ ಸಹಕರಿಸಬೇಕು ಎಂದರು.
ಪ್ರತಿಯೊಬ್ಬರ ಜೀವನದಲ್ಲಿಯೂ ಒಂದಲ್ಲ ಒಂದು ರೀತಿಯ ಒತ್ತಡ ಇರುತ್ತದೆ. ನ್ಯಾಯಾಂಗದ ಅಧಿಕಾರಿಗಳು ಹಾಗೂ ಕಾರಾಗೃಹ ಸಿಬ್ಬಂದಿಯೂ ತಮ್ಮ ಕರ್ತವ್ಯಗಳ ಒತ್ತಡವನ್ನು ಎದುರಿಸುತ್ತಾರೆ. ಆದರೆ ಮಾನಸಿಕ ಆರೋಗ್ಯ ಸಮಸ್ಯೆ ಇರುವವರನ್ನು ಕೀಳಾಗಿ ಕಾಣುವುದು, ಅವರೊಂದಿಗೆ ಮಾತನಾಡಲು ಹಿಂಜರಿಯುವುದು ಅಥವಾ ಅವರನ್ನು ಸಮಾಜದಿಂದ ದೂರವಿಡುವುದು ಸರಿಯಲ್ಲ. ಅವರ ಸಮಸ್ಯೆಯನ್ನು ಅರ್ಥಮಾಡಿಕೊಂಡು ಆತ್ಮೀಯವಾಗಿ ಮಾತನಾಡಿ, ನೆರವು ನೀಡಬೇಕು ಎಂದು ಹೇಳಿದರು.
ಭಾರತದ ಸಂವಿಧಾನವು ಪ್ರತಿಯೊಬ್ಬರಿಗೂ ಸಮಾನತೆ, ಘನತೆಯಿಂದ ಬದುಕುವ ಹಕ್ಕು ಹಾಗೂ ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ. ಮಾನಸಿಕ ಆರೋಗ್ಯ ಸಮಸ್ಯೆ ಇರುವವರಿಗೂ ಈ ಹಕ್ಕುಗಳು ಅನ್ವಯಿಸುತ್ತವೆ. ಅವರನ್ನು ಅವಮಾನಿಸುವುದು, ಪ್ರತ್ಯೇಕವಾಗಿಡುವುದು ಅಥವಾ ಅವರ ಸಮಸ್ಯೆಯನ್ನು ನಿರ್ಲಕ್ಷಿಸುವುದು ಮಾನವೀಯ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದರು.
ಮಾನಸಿಕ ಆರೋಗ್ಯ ಆರೈಕೆ ಕಾಯ್ದೆಯಡಿ ಹಕ್ಕುಗಳ ರಕ್ಷಣೆ
ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುವವರ ಹಕ್ಕುಗಳ ರಕ್ಷಣೆಗಾಗಿ ೨೦೧೭ರ ಮಾನಸಿಕ ಆರೋಗ್ಯ ಆರೈಕೆ ಕಾಯ್ದೆ ಜಾರಿಗೆ ಬಂದಿದೆ. ಕಾಯ್ದೆಯ ಐದನೇ ಅಧ್ಯಾಯದಲ್ಲಿ ಮಾನಸಿಕ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳ ಹಕ್ಕುಗಳ ಕುರಿತು ವಿವರಿಸಲಾಗಿದೆ ಎಂದು ಹೇಳಿದರು.
ಹಿಂದೆ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಮೂಢನಂಬಿಕೆಗಳೊAದಿಗೆ ತಳುಕು ಹಾಕಿ, ಕೆಲವರನ್ನು ಮನೆಗಳಲ್ಲಿ ಬಂಧಿಸಿಡುವುದು, ಸರಪಳಿಗಳಿಂದ ಕಟ್ಟಿಹಾಕುವುದು ಹಾಗೂ ಸೂಕ್ತ ಆರೈಕೆಯಿಂದ ವಂಚಿತರನ್ನಾಗಿಸುವ ಘಟನೆಗಳು ಕಂಡುಬರುತ್ತಿದ್ದವು. ಇಂತಹ ಅಮಾನವೀಯ ವರ್ತನೆಗಳನ್ನು ತೊರೆದು, ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ವೈದ್ಯಕೀಯ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳಬೇಕು ಎಂದರು.
ಮಾನಸಿಕ ಆರೋಗ್ಯ ಸಮಸ್ಯೆ ಇರುವವರಿಗೆ ಸೂಕ್ತ ವೈದ್ಯಕೀಯ ತಪಾಸಣೆ, ತಜ್ಞರಿಂದ ಚಿಕಿತ್ಸೆ, ಸಮಾಲೋಚನೆ ಹಾಗೂ ಅಗತ್ಯ ಆರೈಕೆ ಪಡೆಯುವ ಹಕ್ಕಿದೆ. ಅವರನ್ನು ಪ್ರತ್ಯೇಕಿಸುವ ಬದಲು ಗೌರವದಿಂದ ಕಾಣಬೇಕು. ಸಮಾಜದ ಇತರರಂತೆ ಘನತೆಯಿಂದ ಬದುಕಲು ಮತ್ತು ಮುಖ್ಯವಾಹಿನಿಯಲ್ಲಿ ಬೆರೆಯಲು ಅವಕಾಶ ಕಲ್ಪಿಸಬೇಕು ಎಂದು ನ್ಯಾಯವಾದಿ ಜಗದೀಶ ಕೌಜಲಗಿ ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ಗೈಬುಸಾಬ್ ಗಲಗಲಿ, ತಾಲೂಕು ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಧಿಕಾರಿ ಡಾ. ಸೌಮ್ಯಾ ಪಾಟೀಲ, ತಾಲೂಕು ಮುಖ್ಯ ವೈದ್ಯಾಧಿಕಾರಿ ಡಾ. ದಯಾನಂದ ಕರೆನ್ನವರ ಹಾಗೂ ಉಪ ಕಾರಾಗೃಹದ ಅಧೀಕ್ಷಕ ವೀರಭದ್ರ ಕುಂಬಾರ ಮಾನಸಿಕ ಆರೋಗ್ಯದ ಮಹತ್ವದ ಕುರಿತು ಮಾತನಾಡಿದರು.
ನ್ಯಾಯವಾದಿಗಳ ಸಂಘದ ಪ್ರಧಾನ ಕಾರ್ಯದರ್ಶಿ ವೈ.ಕೆ. ಕಡಪಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಎಸ್.ಆರ್. ಪಾಟೀಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.






















