Home ಮುಖಪುಟ ಸುದ್ದಿ ನಾಳೆಯಿಂದ ಹಾಸನಾಂಬ ದರ್ಶನೋತ್ಸವಕ್ಕೆ ಸಕಲ ಸಿದ್ಧತೆ

ನಾಳೆಯಿಂದ ಹಾಸನಾಂಬ ದರ್ಶನೋತ್ಸವಕ್ಕೆ ಸಕಲ ಸಿದ್ಧತೆ

ಹಾಸನ, ಅ. ೨೮-ಪ್ರಸಿದ್ಧ ಹಾಸನಾಂಬೆ ದೇವಿ ದರ್ಶನೋತ್ಸವ ನಾಳೆಯಿಂದ ೧೪ ದಿನಗಳ ಕಾಲ ನಡೆಯಲಿದೆ. ಹಾಸನಾಂಬೆ ದರ್ಶನ ಸುಸೂತ್ರವಾಗಿ ನಡೆಯಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.


ಹಾಸನಾಂಬ ಜಾತ್ರಾ ಮಹೋತ್ಸವದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಂ. ಶಿವಲಿಂಗೇಗೌಡ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಧರ್ಮ ದರ್ಶನದ ಜೊತೆಗೆ ಭಕ್ತರ ಅನುಕೂಲಕ್ಕಾಗಿ ೧ ಸಾವಿರ ಮತ್ತು ೩೦೦ ರೂಪಾಯಿ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ ಎಂದರು.


ಗಣ್ಯರನ್ನು ಕರೆತಂದು ಜಿಲ್ಲಾಡಳಿತದ ವತಿಯಿಂದಲೇ ದೇವಿಯ ದರ್ಶನ ಮಾಡಿಸಲು ತೀರ್ಮಾನಿಸಲಾಗಿದ್ದು, ಬೆಳಿಗ್ಗೆ ೧೦.೩೦ ರಿಂದ ೧೨.೩೦ ರ ನಡುವೆ ಎರಡು ಗಂಟೆಗಳ ಕಾಲ ಗಣ್ಯರಿಗೆ ದರ್ಶನಕ್ಕೆ ಅವಕಾಶ ಇರಲಿದೆ.


ಗೋಲ್ಡನ್ ಪಾಸ್ ಪಡೆದವರಿಗೆ ಬೆಳಿಗ್ಗೆ ೮ರಿಂದ ೧೦ ಗಂಟೆವರೆಗೆ ದರ್ಶನಕ್ಕೆ ಅವಕಾಶ ಇರಲಿದ್ದು, ಒಬ್ಬರು ಮಾತ್ರ ಇದರ ಪ್ರಯೋಜನ ಪಡೆಯಬಹುದು. ಮೊದಲ ಹಾಗೂ ಕೊನೆಯ ದಿನ ಯಾವುದೇ ಶಿಷ್ಟಾಚಾರ, ಪಾಸ್ ವ್ಯವಸ್ಥೆ ಇರುವುದಿಲ್ಲ ಎಂದವರು ತಿಳಿಸಿದ್ದಾರೆ.


ಪ್ರಸಾದವಾಗಿ ಎರಡು ಲಡ್ಡುಗಳಿಗೆ ೫೬ ರೂ. ದರ ನಿಗದಿ ಮಾಡಲಾಗಿದೆ. ದೊನ್ನೆ ಪ್ರಸಾದಕ್ಕೆ ಒಂದು ದೊನ್ನೆಗೆ ೧೭ ರೂ. ಇರಲಿದೆ ಎಂದು ಸಚಿವರು ವಿವರಿಸಿದರು.
ದೇವಿಯ ದರ್ಶನಕ್ಕೆ ಸ್ಥಳೀಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕೆಂಬ ಬೇಡಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಹಿಂದೆ ಹಾಸನಾಂಬೆ ದರ್ಶನಕ್ಕೆ ಕಡಿಮೆ ಭಕ್ತರು ಬರುತ್ತಿದ್ದರು. ಆದರೆ ಈಗ ಹಾಸನಾಂಬೆ ಉತ್ಸವ ನಾಡ ಹಬ್ಬವಾಗಿ ಬೆಳೆದಿದೆ. ಯಾರೂ ಸಂಕುಚಿತವಾಗಿ ಯೋಚನೆ ಮಾಡುವುದು ಬೇಡ. ಲಕ್ಷಾಂತರ ಭಕ್ತರು ಬರುವ ವೇಳ ಸ್ಥಳೀಯರು ಎಂದು ಬೇರೆ ಅರ್ಥೈಸೋದು ಬೇಡ ಎಂದು ಅಭಿಪ್ರಾಯಪಟ್ಟಿದ್ದಾರೆ.


ಹಾಸನಾಂಬಾ ದರ್ಶನೋತ್ಸವದ ವೇಳೆ ಮೈಸೂರು ದಸರಾ ಮಾದರಿಯಲ್ಲಿ ಕ್ರೀಡೆ, ಸಾಂಸ್ಕೃತಿಕ ಹಾಗೂ ಗ್ರಾಮೀಣ ಸೊಗಡು ಪ್ರತಿಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.


೪೫೦ ಮಂದಿಯಿಂದ ಕುಸ್ತಿ ಪಂದ್ಯಾಟ ನಡೆಯಲಿದ್ದು, ಕಬಡ್ಡಿ ಸ್ಪರ್ಧೆ, ರಾಷ್ಟ್ರೀಯ ಮಟ್ಟದ ವಾಲಿಬಾಲ್ ಕ್ರೀಡಾಕೂಟ ಸಹ ನಡೆಯಲಿದೆ. ಹಳ್ಳಿಕಾರ್, ಅಮೃತ ಮಹಲ್ ತಳಿಯ ಜೋಡೆತ್ತುಗಳ ಪ್ರದರ್ಶನ ಇರಲಿದೆ. ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಶ್ವಾನ ಪ್ರದರ್ಶನ, ಟಗರು, ಬೆಕ್ಕು ಮತ್ತು ಶ್ವಾನಗಳ ಪ್ರದರ್ಶನ ಕೂಡ ಆಯೋಜಿಸಲಾಗಿದೆ ಎಂದು ಹೇಳಿದರು


ಹಾಸನಾಂಬೆ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಪ್ರಸಾದ ವಿತರಣೆಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಸರತಿ ಸಾಲುಗಳ ನಿರ್ವಹಣೆ, ಕುಡಿಯುವ ನೀರು, ಶೌಚಾಲಯ, ವಾಹನ ನಿಲುಗಡೆ ಹಾಗೂ ಮಾಹಿತಿ ಕೇಂದ್ರಗಳ ಸೌಲಭ್ಯಗಳಿಗೂ ವ್ಯವಸ್ಥೆ ಮಾಡಲಾಗಿದೆ.

ಭಕ್ತರಿಗೆ ಕೆಲವೊಂದು ಸಲಹೆಗಳು

  • ಸಾಧ್ಯವಾದರೆ ಮುಂಚಿತವಾಗಿ ದರ್ಶನದ ಟಿಕೆಟ್ ಬುಕ್ ಮಾಡಿಕೊಳ್ಳಿ.
  • ನಿಗದಿತ ಸಮಯಕ್ಕಿಂತ ಸ್ವಲ್ಪ ಮುಂಚಿತವಾಗಿ ದರ್ಶನದ ಪ್ರವೇಶ ದ್ವಾರಕ್ಕೆ ತಲುಪಿರಿ.
  • ಹಿರಿಯ ನಾಗರಿಕರು, ಮಕ್ಕಳು ಹಾಗೂ ವಿಶೇಷ ಅಗತ್ಯವಿರುವವರೊಂದಿಗೆ ಪ್ರಯಾಣಿಸುವವರು ಸರತಿ ಸಾಲು ಮತ್ತು ಪ್ರವೇಶ ಸೌಲಭ್ಯಗಳ ಬಗ್ಗೆ ಮುಂಚಿತವಾಗಿ ಮಾಹಿತಿ ಪಡೆಯಿರಿ.
  • ಪೊಲೀಸ್ ಹಾಗೂ ಜಿಲ್ಲಾಡಳಿತದ ಸಂಚಾರ ನಿಯಮಗಳನ್ನು ಪಾಲಿಸಿ.
  • ಅಧಿಕೃತ ವೆಬ್‌ಸೈಟ್ ಅಥವಾ ಜಿಲ್ಲಾಡಳಿತದ ಸೂಚನೆಗಳನ್ನೇ ನಂಬಿ; ಅನಧಿಕೃತ ಟಿಕೆಟ್ ಮಾರಾಟಗಾರರಿಂದ ಎಚ್ಚರಿಕೆಯಿಂದಿರಿ.