
ಸಂಜೆ ವಾಣಿ ವಾರ್ತೆ |
ಜಮಖಂಡಿ:ತಾಲೂಕಿನ ಚಿಕ್ಕಲಗಿ-ತೊದಲಬಾಗಿ ಏತ ನೀರಾವರಿ ಯೋಜನೆಗೆ ಸಂಪೂರ್ಣ ಬೆಂಬಲವಿದೆ. ಆದರೆ, ಯೋಜನೆಯ ಕಾಲುವೆ ದಲಿತ ಬಡಾವಣೆಯೊಳಗೆ ಹಾದುಹೋಗುವುದರಿಂದ ಭವಿಷ್ಯದಲ್ಲಿ ಸ್ವಚ್ಛತೆ, ಆರೋಗ್ಯ ಹಾಗೂ ಪರಿಸರಕ್ಕೆ ಸಂಬAಧಿಸಿದ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ದಲಿತ ಬಡಾವಣೆಗೆ ತೊಂದರೆಯಾಗದAತೆ ಕಾಲುವೆಯ ಮಾರ್ಗವನ್ನು ಬದಲಾಯಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ನ್ಯಾಯವಾದಿ ಶಶಿಕಾಂತ್ ದೊಡಮನಿ ಆಗ್ರಹಿಸಿದರು.
ನಗರದ ತಾಲೂಕು ಆಡಳಿತ ಸೌಧದಲ್ಲಿ ಉಪವಿಭಾಗಾಧಿಕಾರಿ ಶ್ವೇತಾ ಬಿಡೀಕರ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಏತ ನೀರಾವರಿ ಯೋಜನೆಯನ್ನು ವಿರೋಧಿಸುವುದು ನಮ್ಮ ಉದ್ದೇಶವಲ್ಲ. ಯೋಜನೆಯಿಂದ ರೈತರಿಗೆ ಅನುಕೂಲವಾಗಬೇಕು ಎಂಬುದು ನಮ್ಮ ಆಶಯ. ಆದರೆ, ದಲಿತ ಬಡಾವಣೆಯೊಳಗೆ ಕಾಲುವೆ ಹಾದುಹೋಗುವುದರಿಂದ ಮುಂದಿನ ದಿನಗಳಲ್ಲಿ ಜನವಸತಿ ಹೆಚ್ಚಾದಂತೆ ಕೊಳಚೆ ಪ್ರದೇಶ ನಿರ್ಮಾಣವಾಗುವ ಹಾಗೂ ಆರೋಗ್ಯ ಮತ್ತು ಪರಿಸರದ ಸಮಸ್ಯೆಗಳು ಎದುರಾಗುವ ಆತಂಕವಿದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಕಾಲುವೆಯ ಮಾರ್ಗವನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದರು.
ದಲಿತ ಸಮುದಾಯದ ಜನರಿಗೆ ಉತ್ತಮ ಆರೋಗ್ಯ, ಸ್ವಚ್ಛ ಪರಿಸರ ಮತ್ತು ಸುರಕ್ಷಿತ ವಾತಾವರಣ ಕಲ್ಪಿಸುವುದು ನಮ್ಮ ಕಳಕಳಿಯಾಗಿದೆ. ಸರ್ಕಾರ ಈ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸಿ, ದಲಿತ ಬಡಾವಣೆಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸರ್ಕಾರಕ್ಕೆ ವರದಿ ಸಲ್ಲಿಸಲು ಒಗ್ಗಟ್ಟಿನ ನಿರ್ಧಾರ
ದಲಿತ ಮುಖಂಡ ರಾಜು ಮೇಲಿನಕೇರಿ ಮಾತನಾಡಿ, ಈ ಸಮಸ್ಯೆಯ ಕುರಿತು ಚರ್ಚಿಸಲು ಗ್ರಾಮದ ದಲಿತ ಮುಖಂಡರು ಹಾಗೂ ತಾಲೂಕಿನ ವಿವಿಧ ದಲಿತ ನಾಯಕರು ಸಭೆಯಲ್ಲಿ ಭಾಗವಹಿಸಿ, ಕಾಲುವೆಯ ಮಾರ್ಗ ಬದಲಾವಣೆಯ ಅಗತ್ಯದ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಎಲ್ಲರೂ ಒಗ್ಗಟ್ಟಿನಿಂದ ಸರ್ಕಾರದ ಗಮನ ಸೆಳೆಯಲು ನಿರ್ಧರಿಸಿದ್ದೇವೆ. ಅಧಿಕಾರಿಗಳು ಕೂಡ ನಮ್ಮ ಮನವಿಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ದಲಿತರು ಹಾಗೂ ಇತರ ಹಿಂದುಳಿದ ಸಮುದಾಯಗಳ ಜನವಸತಿಗೆ ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಶಾಂತಿಯುತವಾಗಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಬಡಾವಣೆಯಲ್ಲಿ ಈಗಾಗಲೇ ಕುಡಿಯುವ ನೀರು, ಮೂಲಸೌಕರ್ಯ ಮತ್ತು ರಸ್ತೆ ಸೇರಿದಂತೆ ಹಲವು ಸಮಸ್ಯೆಗಳಿವೆ. ಕಳೆದ ೩೦-೩೫ ವರ್ಷಗಳಿಂದ ಬಡಾವಣೆಯ ಅಭಿವೃದ್ಧಿಗೆ ಸಂಬAಧಿಸಿದ ಸಮಸ್ಯೆಗಳು ಮುಂದುವರಿದಿವೆ. ಇಂತಹ ಪರಿಸ್ಥಿತಿಯಲ್ಲಿ ಕಾಲುವೆ ನಿರ್ಮಾಣದಿಂದ ಮತ್ತಷ್ಟು ತೊಂದರೆಯಾಗಬಾರದು ಎಂದು ಹೇಳಿದರು.
ಕಾಲುವೆಯನ್ನು ಪರ್ಯಾಯ ಮಾರ್ಗದಲ್ಲಿ ನಿರ್ಮಿಸಲು ಹೆಚ್ಚಿನ ಅನುದಾನದ ಅಗತ್ಯವಿದ್ದರೆ, ಶಾಸಕರು ಹಾಗೂ ಸಚಿವರ ಮೂಲಕ ಸಂಬAಧಪಟ್ಟ ಇಲಾಖೆಯ ಮೇಲೆ ಒತ್ತಡ ಹೇರಿ ಹೆಚ್ಚುವರಿ ಹಣ ಬಿಡುಗಡೆಗೆ ಪ್ರಯತ್ನಿಸಲಾಗುವುದು. ದಲಿತ ಬಡಾವಣೆಗೆ ತೊಂದರೆಯಾಗದAತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬೇಡಿಕೆಯನ್ನು ಪರಿಗಣಿಸದೆ ದಲಿತ ಕಾಲೋನಿಯ ಜನರಿಗೆ ತೊಂದರೆಯಾಗುವ ರೀತಿಯಲ್ಲಿ ಕಾಮಗಾರಿ ಮುಂದುವರಿಸಿದರೆ, ತಾಲೂಕಿನ ಹಾಗೂ ಜಿಲ್ಲೆಯ ದಲಿತ ಮುಖಂಡರು ಒಗ್ಗೂಡಿ ಹೋರಾಟ ನಡೆಸಬೇಕಾಗುತ್ತದೆ. ಅಗತ್ಯಬಿದ್ದರೆ ಕಾಲುವೆ ಕಾಮಗಾರಿಯನ್ನು ತಡೆಯುವ ಹೋರಾಟಕ್ಕೂ ಮುಂದಾಗುತ್ತೇವೆ ಎಂದು ರಾಜು ಮೇಲಿನಕೇರಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪುಟ್ಟು ಪಾಣಿ, ಶಶಿಧರ ಮೀಶಿ, ಶಿವಲಿಂಗ ಗೊಂಬಿಗೂಡ, ಚನ್ನಬಸು ಗುಣದಾಳ, ರಾಹುಲ್ ದೊಡಮನಿ, ಕುಶಾಲ ವಾಘಮೋರೆ, ಕಾರಬಾರಿ ಸರ್, ಬಿದರಿ ಸೇರಿದಂತೆ ತಾಲೂಕಿನ ಹಲವು ದಲಿತ ಮುಖಂಡರು ಉಪಸ್ಥಿತರಿದ್ದರು.






















