
ಬೆಂಗಳೂರು, ಅ. ೧೮- ಸ್ಟಿಂಗ್ ಕಾರ್ಯಾಚರಣೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡದಿರುವುದು ನನಗೆ ಆಶ್ಚರ್ಯ ತಂದಿದೆ ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ಸ್ಟಿಂಗ್ ಆಪರೇಷನ್ ನಾನೇ ಮಾಡಿದ್ದು ಎಂದು ವ್ಯಕ್ತಿಯೊಬ್ಬರು ಹೇಳಿದ್ದರೂ ಆ ಬಗ್ಗೆ ತನಿಖೆ ನಡೆಸದಿರುವ ಔಚಿತ್ಯವನ್ನು ಪ್ರಶ್ನಿಸಿದ್ದಾರೆ.
ಹಾಸನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷ ಯಾವತ್ತೋ ಮುಗಿದು ಹೋಗುತ್ತಿತ್ತು. ನಾನು ಸಿದ್ದರಾಮಯ್ಯನವರ ಜತೆ ರಾಜಕೀಯ ಹೋರಾಟ ಮಾಡಿದ್ದೇನೆ. ಆದರೆ ಈಗ ಸಿದ್ದರಾಮಯ್ಯನವರನ್ನು ಮುಗಿಸಲು ಏನೆಲ್ಲಾ ನಡೆದಿದೆ ಎಂಬುದು ಬೆಳಕಿಗೆ ಬಂದಿದೆ ಎಂದರು.
ಸ್ಟಿಂಗ್ ಆಪರೇಷನ್ ಬಗ್ಗೆ ಸಿದ್ದರಾಮಯ್ಯನವರು ಮಾತನಾಡದಿರುವುದು ಆಶ್ಚರ್ಯ ತಂದಿದೆ. ಸಿದ್ದರಾಮಯ್ಯನವರ ಹೆಸರನ್ನು ಹಾಳು ಮಾಡಲು ಕೆಲವರು ಹುನ್ನಾರ ನಡೆಸಿದ್ದಾರೆ ಎಂದು ದೂರಿದರು.
ಸ್ಟಿಂಗ್ ಆಪರೇಷನ್ ನಾನೇ ಮಾಡಿದ್ದು ಎಂದು ಸ್ಟಿಂಗ್ ಆಪರೇಷನ್ ನಡೆಸಿರುವ ವ್ಯಕ್ತಿ ಬಹಿರಂಗವಾಗಿ ಹೇಳಿದ್ದಾರೆ. ಹೀಗೆ ಹೇಳಿದ್ದರೂ ತನಿಖೆ ನಡೆಸಲು ಏನೇನು ದಾಖಲೆ ಬೇಕು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆಯನ್ನು ಕೂರಿಸಿಕೊಂಡು ಈ ಸ್ಟಿಂಗ್ ವ್ಯಕ್ತಿ ಸಿದ್ದರಾಮಯ್ಯ ಹೆಸರು ಹೇಳು ಎನ್ನುತ್ತಾರೆ. ಸಿದ್ದರಾಮಯ್ಯ ಎಷ್ಟೊತ್ತು ಇದ್ದರು, ಅವರ ದೇಹದ ಯಾವುದಾದರೂ ಗುರುತು ಇದೆಯೇ ಎಂದೆಲ್ಲಾ ಪ್ರಶ್ನೆ ಮಾಡುತ್ತಾರೆ. ಇಂತಹ ವ್ಯಕ್ತಿಯನ್ನು ಏಕೆ ಟಚ್ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಈ ವ್ಯಕ್ತಿ ಪೊಲೀಸ್ ಅಧಿಕಾರಿಗಳ ಸ್ಟಿಂಗ್ ಕೂಡ ಮಾಡಿದ್ದಾರೆ ಎಂದು ದೂರಿದ ಕುಮಾರಸ್ವಾಮಿ ಅವರು, ಹಲವು ನಾಯಕರ ಸ್ಟಿಂಗ್ ಆಗಿದೆ ಎಂದು ಮಾಜಿ ಸಚಿವ ರಾಜಣ್ಣನವರು ಹೇಳಿದ್ದಾರೆ. ಇಷ್ಟಾದರೂ ತನಿಖೆ ಮಾಡದೆ ಆ ವ್ಯಕ್ತಿಯನ್ನು ಬಿಟ್ಟಿರುವುದು ಏಕೆ ಪ್ರಶ್ನಿಸಿದರು.
ಸ್ಟಿಂಗ್ ಮಾಡಿರುವ ವ್ಯಕ್ತಿ ಒಬ್ಬ ಮಾಜಿ ಪ್ರಧಾನಿಗಳ ಬಗ್ಗೆ ಏಕವಚನದಲ್ಲೇ ಮಾತನಾಡುತ್ತಾನೆ. ಇಷ್ಟಾದರೂ ಕಾಂಗ್ರೆಸ್ ಸರ್ಕಾರ ಸುಮ್ಮನಿದೆ ಎಂದು ಅಸಮಾಧಾನ ಹೊರ ಹಾಕಿದರು.
ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರನ್ನು ನನ್ನನ್ನು ಪ್ರಚೋದಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿರ್ದೇಶನ ನೀಡಿದಂತಿದೆ. ಗೃಹ ಸಚಿವರ ನಡೆ-ನುಡಿ ನೋಡಿದರೆ ನನ್ನನ್ನು ಪ್ರಚೋದಿಸಲು ಅವರು ಮಾತನಾಡುತ್ತಿರುವುದು ಸ್ಪಷ್ಟ ಎಂದರು.
ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನನ್ನನ್ನು ಉತ್ತರ ಕುಮಾರ ಎನ್ನುತ್ತಾರೆ. ಕೆಪಿಎಸ್ಸಿ ಹಗರಣದಲ್ಲಿ ಅವರು ಭಾಗಿಯಾಗಿರುವ ಬಗ್ಗೆ ನಾನು ಆರೋಪ ಮಾಡಿದ್ದೇನೆ. ಆ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಬಳಿ ಉತ್ತರವೇ ಇಲ್ಲ. ಎಲ್ಲಾ ದಾಖಲೆ ಕೊಟ್ಟರೂ ಎಲ್ಲಿದೆ ದಾಖಲೆ ಎಂದು ಪ್ರಶ್ನಿಸುತ್ತಾರೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಮುಂದೆ ಸಮ್ಮಿಶ್ರ ಸರ್ಕಾರ
ರಾಜ್ಯದಲ್ಲಿ ೨೦೨೮ಕ್ಕೆ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಹಾಸನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೨೮ಕ್ಕೆ ಸಮ್ಮಿಶ್ರ ಸರ್ಕಾರ ರಾಜ್ಯಕ್ಕೆ ಅಧಿಕಾರಕ್ಕೆ ಬರಲಿ. ಆಗ ನನ್ನ ಇನ್ನೊಂದು ಮುಖವನ್ನು ತೋರಿಸುತ್ತೇನೆ ಎಂದು ತಮ್ಮ ವಿರೋಧಿಗಳಿಗೆ ಸವಾಲಿನ ಎಚ್ಚರಿಕೆ ನೀಡಿದರು.
ಅಧಿಕಾರದಲ್ಲಿ ಕಾಂಗ್ರೆಸ್ನವರೇ ಇರಲಿ, ಒಂದು ವರ್ಷವಾದ ಮೇಲೆ ಏನಾಗುತ್ತದೆ ಎಂಬುದು ಗೊತ್ತಾಗುತ್ತದೆ. ಹಾಸನಾಂಬೆ ದೇವಾಲಯದ ಬಾಗಿಲು ಸದ್ಯದಲ್ಲೇ ತೆರೆಯಲಿದ್ದು, ದೇವಾಲಯದಲ್ಲೇ ಕುಳಿತು ಎಲ್ಲವನ್ನು ಮಾತನಾಡುತ್ತೇನೆ ಎಂದು ಅವರು ಹೇಳಿದರು.
ಯಾರು ಏನೇ ಹೇಳಲಿ, ೨೦೨೮ಕ್ಕೆ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಅವರು ಪುನರುಚ್ಚರಿಸಿದರು.

























