Home ಜಿಲ್ಲೆ ಶಿವಮೊಗ್ಗ ಶಿವಮೊಗ್ಗ ಜಲ ಮಂಡಳಿ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಶಾಸಕ ಚನ್ನಬಸಪ್ಪ ಕೆಂಡಾಮಂಡಲ

ಶಿವಮೊಗ್ಗ ಜಲ ಮಂಡಳಿ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಶಾಸಕ ಚನ್ನಬಸಪ್ಪ ಕೆಂಡಾಮಂಡಲ

ಶಿವಮೊಗ್ಗ, ಅ.೭- ಕುಡಿಯುವ ನೀರಿನ ಸಮಸ್ಯೆ ಹೇಳಿಕೊಳ್ಳಲು ಬರುವ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುವ ಅಧಿಕಾರಿ ಹಾಗೂ ಸಿಬ್ಬಂದಿಗಳು ಯಾರೇ ಆಗಿದ್ದರೂ, ಅವರ ವಿರುದ್ಧ ಮುಲಾಜಿಲ್ಲದೆ ಕಠಿಣ ಶಿಸ್ತುಕ್ರಮ ಜರುಗಿಸಿ ಅಮಾನತು ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಖಡಕ್ ಎಚ್ಚರಿಕೆ ನೀಡಿದ್ದಾರೆ.

ನಗರದ ವಿವಿಧ ಬಡಾವಣೆಗಳಲ್ಲಿ ಕುಡಿಯುವ ನೀರು ಸರಬರಾಜಿನಲ್ಲಿ ನಿರಂತರವಾಗಿ ತೊಂದರೆಯಾಗುತ್ತಿರುವ ಕುರಿತಂತೆ ಅಹವಾಲು ಹೇಳಿಕೊಳ್ಳಲು ತೆರಳಿದ ನಾಗರಿಕರೊಂದಿಗೆ ಕೆಲ ಅಧಿಕಾರಿಗಳು ದುರಹಂಕಾರದ ಉತ್ತರ ನೀಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು.

ಈ ಹಿನ್ನೆಲೆಯಲ್ಲಿ ಅಕ್ಟೋಬರ್ ೦೬ ರಂದು ಶಾಸಕರ ಕಚೇರಿ ಸಭಾಂಗಣದಲ್ಲಿ ಜಲ ಮಂಡಳಿ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ, ಚನ್ನಬಸಪ್ಪ ಅವರು ಅಧಿಕಾರಿ ? ಸಿಬ್ಬಂದಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

‘ಸಾರ್ವಜನಿಕರ ಸಮಸ್ಯೆಗಳನ್ನು ಸೌಜನ್ಯದಿಂದ ಆಲಿಸಿ. ತಕ್ಷಣವೇ ಪರಿಹರಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ. ಜನಸಾಮಾನ್ಯರ ಮೇಲೆ ದರ್ಪ ತೋರುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ’ ಎಂದು ಆಕ್ರೋಶಭರಿತರಾಗಿ ತಿಳಿಸಿದ್ದಾರೆ.

೨೪/೭ ಕುಡಿಯುವ ನೀರಿನ ಕಾಮಗಾರಿ ವಿಳಂಬಕ್ಕೆ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ನಾಗರಿಕರಿಗೆ ಸುಗಮವಾಗಿ ಕುಡಿಯುವ ನೀರು ಒದಗಿಸಬೇಕು.

ತೊಂದರೆಯಾದ ಪ್ರದೇಶಗಳಿಗೆ ತಕ್ಷಣ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಕರ್ತವ್ಯಲೋಪ ಕಂಡುಬಂದಲ್ಲಿ ಕಠಿಣ ಕ್ರಮ ಜರುಗಿಸುವುದು ನಿಶ್ಚಿತ ಎಂದು ಶಾಸಕರು ಎಚ್ಚರಿಸಿದ್ದಾರೆ.