Home ಜಿಲ್ಲೆ ಶಿವಮೊಗ್ಗ ಶಿವಮೊಗ್ಗ : ನಾಡಹಬ್ಬ ದಸರಾ ಆಚರಣೆಗೆ ಸಕಲಬಸಿದ್ಧತೆ

ಶಿವಮೊಗ್ಗ : ನಾಡಹಬ್ಬ ದಸರಾ ಆಚರಣೆಗೆ ಸಕಲಬಸಿದ್ಧತೆ

ಶಿವಮೊಗ್ಗ, ಅ. ೭-ದಸರಾ ನಾಡಹಬ್ಬವನ್ನು ಈ ಬಾರಿ ಮತ್ತಷ್ಟ್ಟು ವೈಭವ ಹಾಗೂ ವಿಭಿನ್ನ ಕಾರ್‍ಯಕ್ರಮ ಗಳೊಂದಿಗೆ ಆಚರಿಸಲು ಶಿವಮೊಗ್ಗ ಮಹಾನಗರ ಪಾಲಿಕೆ ಸಜ್ಜಾಗಿದೆ.

ಈ ಬಾರಿ ಮತ್ತಷ್ಟು ವಿಜೃಂಭಣೆ ಯಿಂದ ದಸರಾ ಆಚರಿಸುತ್ತಿದ್ದು, ಇದಕ್ಕಾಗಿ ೧೪ ಸಮಿತಿಗನ್ನು ರಚಿಸ ಲಾಗಿದೆ. ಬೆಳ್ಳಿಯ ಚಾಮುಂಡೇಶ್ವರಿ ವಿಗ್ರಹಕ್ಕೆ ಚಿನ್ನದ ಮುಖವಾಡ ಹಾಕಲು, ಪಾಲಿಕೆ ಕಟ್ಟಡಕ್ಕೆ ಲೇಸರ್ ಬೆಳಕು, ಹೊಸದಾಗಿ ನಾಣ್ಯ ದಸರಾ ಸೇರ್ಪಡೆ ಮಾಡಲಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹಾಗೂ ಆಯುಕ್ತ ಮಾಯಣ್ಣಗೌಡ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಅ. ೧೧ರಂದು ಮಹಾನಗರ ಪಾಲಿಕೆ ಆವರಣದಿಂದ ಶ್ರೀ ಚಾಮುಂಡೇ ಶ್ವರಿಯ ಭವ್ಯ ಮೆರವಣಿಗೆ ನಡೆಯಲಿದೆ. ಮೆರವಣಿಗೆಯು ನಗರದ ಪ್ರಮುಖ ಮಾರ್ಗಗಳ ಮೂಲಕ ಕೋಟೆಶ್ರೀ ಚಂಡಿಕಾ ಪರಮೇಶ್ವರಿ ದೇವಸ್ಥಾನ ತಲುಪಲಿದೆ. ಇದೇ ಸಂದರ್ಭದಲ್ಲಿ ದೇವಿಯ ಉತ್ಸವಮೂರ್ತಿಯನ್ನು ಪ್ರತಿಷ್ಠ್ಠಾಪಿಸಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಗುವುದು ಎಂದರು.

ದಸರಾ ಮೆರವಣಿಗೆಯಲ್ಲಿ ಬೆಳ್ಳಿ ಮಂಟಪದಲ್ಲಿ ಚಾಮುಂಡೇಶ್ವರಿ ಯನ್ನು ಪ್ರತಿಷ್ಠಾಪಿಸಿ ಭವ್ಯ ಮೆರವಣಿಗೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೆರವಣಿಗೆಯು ದಸರಾ ಸಂಭ್ರಮದ ಪ್ರಮುಖ ಆಕರ್ಷಣೆಯಾಗಲಿದೆ ಎಂದು ಶಾಸಕರು ಹಾಗೂ ದಸರಾ ಸಮಿತಿ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ ಮಾಹಿತಿ ನೀಡಿದರು.

ದಸರಾ ಉದ್ಘಾಟನಾ ಕಾರ್‍ಯಕ್ರಮಕ್ಕೆ ಖ್ಯಾತ ಚಲನಚಿತ್ರ ನಟ ಶ್ರೀನಾಥ್ ಅವರು ಆಗಮಿಸಲಿದ್ದಾರೆ. ಅವರ ಉಪಸ್ಥಿತಿಯು ದಸರಾ ಉದ್ಘಾಟನಾ ಸಮಾರಂಭಕ್ಕೆ ಮತ್ತಷ್ಟು ಮೆರುಗು ತರಲಿದ್ದು, ಅಭಿಮಾನಿಗಳು ಹಾಗೂ ಸಾರ್ವಜನಿಕರಲ್ಲಿ ನಿರೀಕ್ಷೆ ಮೂಡಿಸಿದೆ. ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದಸರಾ ಸಂಭ್ರಮಕ್ಕೆ ಅದ್ದೂರಿ ಚಾಲನೆ ನೀಡಲು ಸಿದ್ಧತೆ ನಡೆದಿದೆ ಎಂದರು.

ಮೆರವಣಿಗೆಗೆ ಗಜವೈಭವ :ಸಕ್ರೆಬೈಲ್‌ನ ಆನೆ ಬಿಡಾರದ ಬಹದ್ದೂರ್, ಸೋಮಣ್ಣ ಹಾಗೂ ಸಾಗರ್ ಎಂಬ ಮೂರು ಆನೆಗಳು ಚಾಮುಂಡೇಶ್ವರಿಯನ್ನು ಹೊತ್ತು ಸಾಗಲಿದ್ದು, ಮೆರವಣಿಗೆಯು ಮತ್ತಷ್ಟು ಆಕಷಣೆಯಾಗಲಿದೆ. ಮೂರು ಆನೆಗಳ ಗಜವೈಭವ ದಸರಾ ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಲಿದೆ ಎಂದು ವಿವರಿಸಿದರು.

ಈ ಬಾರಿ ದೇವಿಯ ಮುಖವಾಡ ವನ್ನು ಚಿನ್ನದಿಂದ ಅಲಂಕರಿಸುವ ವಿಶೇಷ ಯೋಜನೆ ರೂಪಿಸಲಾಗಿದ್ದು, ಮುಂದಿನ ವರ್ಷ ಸುಮಾರು ಒಂದೂವರೆ ಕೋಟಿ ರೂ. ವೆಚ್ಚದ ಈ ಯೋಜನೆ ಕಾರ್ಯಗತಗೊಳ್ಳಲಿದೆ. ಈ ಬಾರಿ ಒಟ್ಟು ೬ಚಿನ್ನದ ಬಳೆಗಳನ್ನು ಚಾಮುಂಡೇಶ್ವರಿ ದೇವಿಗೆ ಅರ್ಪಿಸ ಲಾಗುವುದು ಎಂದರು.

೧೧ದಿನಗಳದಸರಾ ಸಂಭ್ರಮ: ದಸರಾ ಈ ಬಾರಿ ೧೧ ದಿನಗಳ ಕಾಲ ನಡೆಯಲಿದೆ. ಸಾಮಾನ್ಯವಾಗಿ ೧೦ ದಿನಗಳ ಕಾಲ ನಡೆಯುತ್ತಿದ್ದ ನವರಾತ್ರಿ ಹಾಗೂ ವಿಜಯದಶಮಿ ಉತ್ಸವವನ್ನು ಹೆಚ್ಚುವರಿ ಒಂದು ದಿನ ವಿಸ್ತರಿಸ ಲಾಗಿದ್ದು, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯ ಕ್ರಮಗಳನ್ನು ಆಯೋಜಿಸಲಾಗಿದೆ. ನಗರದಾದ್ಯಂತ ದಸರಾ ಸಂಭ್ರಮವನ್ನು ಮತ್ತಷ್ಟ್ಟು ವೈಭವಯುತವಾಗಿ ಆಚರಿಸಲು ಸಿದ್ಧತೆ ನಡೆದಿದೆ ಎಂದರು.

ಕೋಟೆ ರಸ್ತೆ ಶಿವಪ್ಪನಾಯಕ ಅರಮನೆಯಿಂದ ದೇವಾನು ದೇವತೆಗಳ ಮೆರವಣಿಗೆ :
ಶಿವಮೊಗ್ಗ ದಸರಾ ಅಂಗವಾಗಿ ಶಿವಪ್ಪನಾಯಕ ಅರಮನೆಯಿಂದ ಸಕಲ ದೇವಾನುದೇವತೆಗಳ ಭವ್ಯ ಮೆರವಣಿಗೆ ನಡೆಯಲಿದೆ. ೨೦೦ಕ್ಕೂ ಹೆಚ್ಚು ವಿವಿಧ ದೇವಾಲಯಗಳ ದೇವರುಗಳ ಉತ್ಸವ ಮೂರ್ತಿಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದು, ಇದು ರಾಜ್ಯದಲ್ಲೇ ವಿಶೇಷವಾಗಿದೆ. ದಸರಾ ಸಂಭ್ರಮಕ್ಕೆ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.

ವಿಜಯದಶಮಿ ಸಂಭ್ರಮಕ್ಕೆ ಜನಸಾಗರದ ನಿರೀಕ್ಷೆ :
ಶಿವಮೊಗ್ಗದಲ್ಲಿ ನಡೆಯಲಿರುವ ವಿಜಯದಶಮಿ ಹಾಗೂ ಬನ್ನಿ ಮುಡಿಯುವ ಸಂಭ್ರಮಕ್ಕೆ ಲಕ್ಷಾಂತರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ದಸರಾ ಮೆರವಣಿಗೆ ಹಾಗೂ ವಿವಿಧ ಕಾರ್ಯಕ್ರಮಗಳೊಂದಿಗೆ ವಿಜಯ ದಶಮಿ ಉತ್ಸವ ನಡೆಯಲಿದ್ದು, ಈ ಬಾರಿ ಬಾಣ ಬಿರುಸುಗಳ ಪ್ರದರ್ಶನ ದೊಂದಿಗೆ ಲೇಸರ್ ಶೋ ಸಹ ಇರುವುದಾಗಿ ತಿಳಿಸಿದರು.