
ಕಲಬುರಗಿ : ಶಿಕ್ಷಕರು, ವಿದ್ಯಾರ್ಥಿಗಳಿಗೆ ಶಿಕ್ಷಣ, ಬುದ್ದಿ, ಮೌಲ್ಯಗಳನ್ನು ನೀಡಿ ಅಮೂಲ್ಯ ಮಾನವ ಸಂಪನ್ಮೂಲವನ್ನಾಗಿಸುತ್ತಾರೆ. ತನ್ಮೂಲಕ ಜಾಗತಿಕ ಅಭಿವೃದ್ಧಿಯಲ್ಲಿ ತಮ್ಮದೇ ಆದ ಪಾತ್ರವನ್ನು ವಹಿಸಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು. ನಗರದ ಆಳಂದ ರಸ್ತೆಯ ಸಂತೋಷ ಕಾಲನಿ ಕ್ರಾಸ್ ಸಮೀಪದ ‘ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ “ವಿಶ್ವ ಶಿಕ್ಷಕರ ದಿನಾಚರಣೆ”ಯಲ್ಲಿ ಅವರು ಮಾತನಾಡುತ್ತಿದ್ದರು.
ಪ್ರತಿ ವರ್ಷ ಅಕ್ಟೋಬರ್-5 ರಂದು “ವಿಶ್ವ ಶಿಕ್ಷಕರ ದಿನಾಚರಣೆ”ಯನ್ನು ಜಗತ್ತಿನಾದ್ಯಂತ ಶಿಕ್ಷಕರ ಸೇವೆಯನ್ನು ಗೌರವಿಸಲು ಮತ್ತು ಸ್ಮರಿಸಲು ಆಚರಿಸಲಾಗುತ್ತದೆ. ಯುನೆಸ್ಕೊ ಮತ್ತು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಜಂಟಿಯಾಗಿ 1966ರ ಅಕ್ಟೋಬರ್-5 ರಂದು ಶಿಕ್ಷಕರ ಹಕ್ಕುಗಳು, ಜವಾಬ್ದಾರಿಗಳು ಮತ್ತು ಕೆಲಸದ ಪರಿಸ್ಥಿತಿಯ ಕುರಿತಾದ ಐತಿಹಾಸಿಕ ಶಿಫಾರಸನ್ನು ಅಂಗೀಕರಿಸಿದವು. ಈ ದಿನದ ನೆನಪಿಗಾಗಿ 1994ರಲ್ಲಿ ಯುನೆಸ್ಕೋ ಅಧಿಕೃತವಾಗಿ ‘ಅಕ್ಟೋಬರ್-5’ನ್ನು “ವಿಶ್ವ ಶಿಕ್ಷಕರ ದಿನ”ವೆಂದು ಘೋಷಿಸಿತು. ಅಂದಿನಿಂದ ಪ್ರತಿವರ್ಷ 100ಕ್ಕೂ ಹೆಚ್ಚು ದೇಶಗಳಲ್ಲಿ ಇದನ್ನು ಆಚರಿಸಲಾಗುತ್ತಿದೆ ಎಂದರು. ಸಮಾಜದ ನಿರ್ಮಾಣದಲ್ಲಿ ಮತ್ತು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದರಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಅವರ ಪರಿಶ್ರಮವನ್ನು ಇದು ಗುರುತಿಸುತ್ತದೆ. ಶಿಕ್ಷಕರು ಎದುರಿಸುತ್ತಿರುವ ಕೆಲಸದೊತ್ತಡ, ವೇತನ, ಮತ್ತು ವೃತ್ತಿಪರ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸಿಪರಿಹಾರೋಪಾಯಗಳನ್ನು ಚರ್ಚಿಸಲು ಇದು ವೇದಿಕೆಯಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಶಿವಯೋಗೆಪ್ಪಾ ಎಸ್. ಬಿರಾದಾರ, ದತ್ತು ಹಡಪದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.























