
ಕಲಬುರಗಿ : ಹಿಂದಿ ಕೇವಲ ಒಂದು ಭಾಷೆಯಲ್ಲ, ಅದು ಭಾರತದ ವಿವಿಧ ಪ್ರದೇಶಗಳು, ಸಂಸ್ಕೃತಿಗಳು ಮತ್ತು ಜನರನ್ನು ಪರಸ್ಪರ ಸಂಪರ್ಕಿಸುವ ಪ್ರಮುಖ ಸೇತುವೆಯಾಗಿದೆ. ಭಾರತದ ವೈವಿಧ್ಯತೆಯಲ್ಲಿ ಏಕತೆಯ ಭಾವನೆಯನ್ನು ಬೆಳೆಸುವಲ್ಲಿ ಹಿಂದಿ ಭಾಷೆಯ ಪಾತ್ರ ಮಹತ್ವದ್ದಾಗಿದೆ ಎಂದು ಜೇವರ್ಗಿಯ ಪ್ರಥಮ ದರ್ಜೆ ಕಾಲೇಜಿನ ಹಿಂದಿ ಪ್ರಾಧ್ಯಾಪಕ ಪ್ರೊ.ಕುಪೇಂದ್ರ ರಾಠೋಡ್ ಹೇಳಿದರು.
ನಗರದ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ವಿದ್ಯಾರ್ಥಿಗಳು ಹಿಂದಿ ಭಾಷೆಯನ್ನು ಕೇವಲ ಪರೀಕ್ಷೆಯ ವಿಷಯವಾಗಿ ನೋಡದೆ, ಜ್ಞಾನ, ಸಂವಹನ ಮತ್ತು ವೃತ್ತಿ ಅಭಿವೃದ್ಧಿಯ ಸಾಧನವಾಗಿ ಬಳಸಬೇಕು. ಹಿಂದಿ ಸಾಹಿತ್ಯವನ್ನು ಓದುವುದರಿಂದ ನಮ್ಮ ಕಲ್ಪನಾಶಕ್ತಿ, ಚಿಂತನಾ ಸಾಮರ್ಥ್ಯ ಮತ್ತು ಸಾಮಾಜಿಕ ಅರಿವು ಹೆಚ್ಚುತ್ತದೆ. ನಾವು ನಮ್ಮ ಮಾತೃಭಾಷೆಯನ್ನು ಗೌರವಿಸುವುದರ ಜೊತೆಗೆ ಇತರ ಭಾರತೀಯ ಭಾಷೆಗಳನ್ನೂ ಗೌರವಿಸಬೇಕು ಎಂದು ಹೇಳಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶಿವರಾಜ ಶಾಸ್ತಿç ಮಾತನಾಡಿ, ಭಾರತವು ಅನೇಕ ಭಾಷೆ, ಧರ್ಮ, ಸಂಸ್ಕೃತಿ ಮತ್ತು ಪರಂಪರೆಗಳ ದೇಶ. ಹಿಂದಿಯೂ ದೇಶದ ಪ್ರಮುಖ ಸಂಪರ್ಕ ಭಾಷೆಗಳಲ್ಲಿ ಒಂದಾಗಿದೆ. ವಿದ್ಯಾರ್ಥಿಗಳು ಬಹುಭಾಷಾ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಕನ್ನಡ ನಮ್ಮ ಹೆಮ್ಮೆ ಮತ್ತು ನಮ್ಮ ನಾಡಿನ ಭಾಷೆ. ಅದರ ಜೊತೆಗೆ ಹಿಂದಿ ಮತ್ತು ಇಂಗ್ಲಿಷ್ ಸೇರಿದಂತೆ ಇತರ ಭಾಷೆಗಳನ್ನು ಕಲಿಯುವುದು ನಮ್ಮ ಶೈಕ್ಷಣಿಕ ಹಾಗೂ ವೃತ್ತಿಪರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ.ಸುರೇಶಕುಮಾರ ನಂದಗಾAವ ಮಾತನಾಡಿ, ಇಂದಿನ ಜಾಗತೀಕರಣ ಮತ್ತು ತಂತ್ರಜ್ಞಾನದ ಯುಗದಲ್ಲಿ ಭಾಷಾ ಜ್ಞಾನಕ್ಕೆ ವಿಶೇಷ ಮಹತ್ವವಿದೆ. ವಿದ್ಯಾರ್ಥಿಗಳು ಹಿಂದಿ ಸಾಹಿತ್ಯದ ಕವಿತೆ, ಕಥೆ, ಕಾದಂಬರಿ, ನಾಟಕ ಮತ್ತು ಪ್ರಬಂಧಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಓದುವ ಮೂಲಕ ಭಾಷಾ ಜ್ಞಾನ ಮಾತ್ರವಲ್ಲದೆ ಜೀವನ ಮೌಲ್ಯಗಳು ಮತ್ತು ಮಾನವೀಯತೆಯ ಅರಿವೂ ಹೆಚ್ಚುತ್ತದೆ ಎಂದು ತಿಳಿಸಿದರು.
ಹಿಂದಿ ವಿಭಾಗದ ಮುಖ್ಯಸ್ಥೆ ರೇಷ್ಮಾ ಮಾತನಾಡಿದರು. ಸಂಗೀತ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕು. ಜೈನಾಬ ಸ್ವಾಗತಿಸಿದರೆ, ಕು. ಸ್ಪಂದನ ಅತಿಥಿಗಳ ಪರಿಚಯ ಮಾಡಿದರು. ವಿದ್ಯಾರ್ಥಿಗಳಾದ ಪವನ್, ನಿಶಾ ಮತ್ತು ರಿಯಾ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕು.ಫೈಝಾ ಖಾನ್ ನಿರೂಪಿಸಿದರು. ಕು.ರಿಹಾನ್ ವಂದಿಸಿದರು. ಮಹಾವಿದ್ಯಾಲಯ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





























