Home ಜಿಲ್ಲೆ ಬೆಂಗಳೂರು ಪಾರದರ್ಶಕ ಆಡಳಿತವೇ ಯಶಸ್ಸಿನ ಮೂಲಮಂತ್ರ: ರವಿಕುಮಾರ್

ಪಾರದರ್ಶಕ ಆಡಳಿತವೇ ಯಶಸ್ಸಿನ ಮೂಲಮಂತ್ರ: ರವಿಕುಮಾರ್

ಬೆಂಗಳೂರು: ಸದಸ್ಯರ ವಿಶ್ವಾಸ ಹಾಗೂ ಪಾರದರ್ಶಕ ಆಡಳಿತವೇ ಸಹಕಾರಿ ಸಂಸ್ಥೆಗಳ ಯಶಸ್ಸಿಗೆ ಪ್ರಮುಖ ಕಾರಣ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ರವಿಕುಮಾರ್ ಹೇಳಿದರು.


ಬ್ಯಾಟರಾಯನಪುರ ಕ್ಷೇತ್ರದ ಜಕ್ಕೂರಿನಲ್ಲಿ ನಡೆದ ಸೊಸೈಟಿಯ ೮ನೇ ವಾರ್ಷಿಕ ಸರ್ವಸದಸ್ಯರ ಮಹಾಸಭೆಯಲ್ಲಿ ಮಾತನಾಡಿದ ಅವರು, ಕಳೆದ ಎಂಟು ವರ್ಷಗಳಲ್ಲಿ ಸಂಸ್ಥೆ ಹಣಕಾಸು ಸೇವೆಯ ಜತೆಗೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.


ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದ್ದು, ಈ ಬಾರಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೂ ಪ್ರೋತ್ಸಾಹಧನ ವಿಸ್ತರಿಸಲಾಗಿದೆ. ಮಹಿಳೆಯರು ಸ್ವಾವಲಂಬಿಗಳಾಗಲು ಗುಡಿ ಹಾಗೂ ಸಣ್ಣ ಕೈಗಾರಿಕೆ ಆರಂಭಿಸಲು ಸಾಲಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.


ಮಹಿಳಾ ದಿನಾಚರಣೆಯ ಅಂಗವಾಗಿ ‘ತವರು ಮನೆ ಉಡುಗೊರೆ’ ಕಾರ್ಯಕ್ರಮದಡಿ ಸಾವಿರಾರು ಮಹಿಳೆಯರಿಗೆ ಸೀರೆ ವಿತರಿಸಲಾಗಿದ್ದು, ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ, ನೋಟ್‌ಬುಕ್ ಹಾಗೂ ಲೇಖನ ಸಾಮಗ್ರಿಗಳನ್ನು ನೀಡಲಾಗಿದೆ.


ಮಹಾಸಭೆಯಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಮತ್ತು ಪ್ರಮಾಣಪತ್ರ ವಿತರಿಸಲಾಯಿತು. ನಿಧನರಾದ ಷೇರುದಾರರ ನಾಮಿನಿದಾರರಿಗೆ ತಲಾ ?೫ ಸಾವಿರ ಸಹಾಯಧನ ನೀಡಲಾಯಿತು. ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಿದ ನಿರ್ದೇಶಕರು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.


ಉಪಾಧ್ಯಕ್ಷೆ ರತ್ನಮ್ಮ ದೇವರಾಜು, ನಿರ್ದೇಶಕರಾದ ವಿ.ನಾಗರಾಜಪ್ಪ, ಬಿ.ಜಿ.ರಮೇಶ್, ವಿನೋದ್ ಕುಮಾರ್ ವ್ಯಾಸ್, ಸುಮಿತ್ರ ನಾಗೇಶ್, ಬಿ.ಕೆ.ರವೀಂದ್ರನಾಥಗೌಡ ಸೇರಿದಂತೆ ನಿರ್ದೇಶಕರು, ಸಿಇಒ ರಾಕೇಶ್ ಎಸ್.ಟಿ., ವ್ಯವಸ್ಥಾಪಕಿ ಯಶೋಧ ಹಾಗೂ ಮತ್ತಿತರರು ಉಪಸ್ಥಿತರಿದ್ದರು.