Home ಜಿಲ್ಲೆ ಬೆಂಗಳೂರು ಕೆ.ಆರ್. ಮಾರುಕಟ್ಟೆ ಪ್ರವೇಶ: ಸರಕು ವಾಹನಗಳಿಗೆ ಶುಲ್ಕ

ಕೆ.ಆರ್. ಮಾರುಕಟ್ಟೆ ಪ್ರವೇಶ: ಸರಕು ವಾಹನಗಳಿಗೆ ಶುಲ್ಕ

ಬೆಂಗಳೂರು,ಸೆ. ೩ – ರಾಜಧಾನಿಯ ಐತಿಹಾಸಿಕ ಕೆ.ಆರ್. ಮಾರುಕಟ್ಟೆಯ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಬೆಂಗಳೂರು ಕೇಂದ್ರ ನಗರ ಪಾಲಿಕೆ ಹೊಸ ಪ್ರವೇಶ ಶುಲ್ಕ ವ್ಯವಸ್ಥೆ ಜಾರಿಗೆ ತಂದಿದೆ. ಮಾರುಕಟ್ಟೆ ಆವರಣಕ್ಕೆ ಸರಕು ಸಾಗಣೆ ವಾಹನಗಳಲ್ಲಿ ಪ್ರವೇಶಿಸುವ ವ್ಯಾಪಾರಿಗಳು ಹಾಗೂ ವಿವಿಧ ಸರಕುಗಳ ಮೇಲೆ ಶುಲ್ಕ ವಿಧಿಸಲಾಗುತ್ತಿದ್ದು, ಪಾಲಿಕೆ ದರಪಟ್ಟಿಯನ್ನೂ ಪ್ರಕಟಿಸಿದೆ.
ಮಾರುಕಟ್ಟೆಯ ಸಿವಿಲ್ ಕಾಮಗಾರಿ, ನಿರ್ವಹಣೆ, ಸ್ಮಾರ್ಟ್ ತಂತ್ರಜ್ಞಾನ ಅಳವಡಿಕೆ ಹಾಗೂ ಗೇಟ್ ಪ್ರವೇಶ ಶುಲ್ಕ ಸಂಗ್ರಹಕ್ಕಾಗಿ ೧೦ ವರ್ಷಗಳ ಅವಧಿಗೆ ಟೆಂಡರ್ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗಿದ್ದು, ಇದರ ಭಾಗವಾಗಿ ವಾಹನ ಮತ್ತು ಸರಕುಗಳಿಗೆ ಅಧಿಕೃತ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ.
ವಾಹನಗಳಿಗೆ ಎಷ್ಟು ಶುಲ್ಕ
ಕೆ.ಆರ್. ಮಾರುಕಟ್ಟೆಗೆ ಸರಕು ಹೊತ್ತು ತರುವ ವಾಹನಗಳ ವರ್ಗದ ಆಧಾರದ ಮೇಲೆ ಶುಲ್ಕ ನಿಗದಿಯಾಗಿದೆ. ೬ ಚಕ್ರ ಹಾಗೂ ಅದಕ್ಕಿಂತ ಹೆಚ್ಚಿನ ಚಕ್ರಗಳ ಟ್ರಕ್‌ಗಳಿಗೆ ೩೫೦, ೪ ಚಕ್ರದ ಲಘು ಸರಕು ವಾಹನಗಳಿಗೆ ೧೦೦ ಹಾಗೂ ೩ ಚಕ್ರದ ಸರಕು ಸಾಗಣೆ ಆಟೋಗಳಿಗೆ ೭೫ ಶುಲ್ಕ ವಿಧಿಸಲಾಗುತ್ತದೆ.
ವಾಹನಗಳ ಜತೆಗೆ ಮಾರುಕಟ್ಟೆಗೆ ತರಲಾಗುವ ಸರಕುಗಳ ಮೇಲೂ ಪ್ರತ್ಯೇಕ ಶುಲ್ಕ ವಿಧಿಸಲಾಗುತ್ತಿದೆ. ಹಣ್ಣು, ಹೂವು, ತರಕಾರಿ, ಸೊಪ್ಪು ಸೇರಿದಂತೆ ಬಹುತೇಕ ಕೃಷಿ ಉತ್ಪನ್ನಗಳ ಒಂದು ಚೀಲ ಅಥವಾ ಮೂಟೆಗೆ ೫ ನಿಗದಿಯಾಗಿದೆ.

ಮಾಂಸ-ಮೀನುಗೂ ಶುಲ್ಕ :
ಮೊಟ್ಟೆಯ ಒಂದು ಬಾಕ್ಸ್‌ಗೆ (೧೦ ಟ್ರೇಗಳವರೆಗೆ), ಮೀನು ಮತ್ತು ಇತರ ಸಮುದ್ರಾಹಾರದ ಒಂದು ಬಾಕ್ಸ್‌ಗೆ ಹಾಗೂ ಕೋಳಿ ಮತ್ತು ಇತರ ಮಾಂಸದ ಪದಾರ್ಥಗಳ ಒಂದು ಟ್ರೇಗೆ ೧೦ ಶುಲ್ಕ ನಿಗದಿಪಡಿಸಲಾಗಿದೆ. ಕಡಲೆಕಾಯಿ, ಹತ್ತಿ, ಸ್ವೀಟ್ ಕಾರ್ನ್, ಶುಂಠಿ, ಅರಿಶಿಣ, ಈರುಳ್ಳಿ, ಆಲೂಗಡ್ಡೆ, ತೆಂಗಿನಕಾಯಿ ಮತ್ತು ಬೆಳ್ಳುಳ್ಳಿ ಸೇರಿದಂತೆ ವಿವಿಧ ಸರಕುಗಳ ಒಂದು ಚೀಲ/ಮೂಟೆಗೆ ೫ ಶುಲ್ಕ ಅನ್ವಯವಾಗಲಿದೆ. ಬಾಳೆದಿಂಡಿಗೆ ಎರಡು ಸಂಖ್ಯೆಗೆ ೫ ಹಾಗೂ ಬಿದಿರು/ಬೆತ್ತದ ಒಂದು ಬಂಡಲ್‌ಗೆ ೫ ಶುಲ್ಕ ನಿಗದಿಯಾಗಿದೆ.

ಯಾರಿಗೆ ಕಡ್ಡಾಯ
ಮಾರುಕಟ್ಟೆ ಆವರಣಕ್ಕೆ ಸರಕು ತರುವ ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳು, ಬೀದಿಬದಿ ವ್ಯಾಪಾರಿಗಳು, ಕಮಿಷನ್ ಏಜೆಂಟ್‌ಗಳು ಹಾಗೂ ಸಾಗಣೆದಾರರು ವ್ಯಾಪಾರ ಆರಂಭಿಸುವ ಮುನ್ನ ನಿಗದಿತ ಪ್ರವೇಶ ಶುಲ್ಕ ಪಾವತಿಸಬೇಕು ಎಂದು ಪಾಲಿಕೆ ನಿಯಮ ರೂಪಿಸಿದೆ.

ಶುಲ್ಕ ಪಾವತಿಗೆ ನಗದು ಜತೆಗೆ ಯುಪಿಐ, ಕ್ಯೂಆರ್ ಕೋಡ್, ಪಿಒಎಸ್ ಮೆಷಿನ್, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕವೂ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಶುಲ್ಕ ಸಂಗ್ರಹದಲ್ಲಿ ಡಿಜಿಟಲ್ ವ್ಯವಸ್ಥೆಗೂ ಆದ್ಯತೆ ನೀಡಲಾಗಿದೆ.

ಒಂದು ಪ್ರವೇಶಕ್ಕೆ ಮಾತ್ರ
ನಿಗದಿಪಡಿಸಿರುವ ಶುಲ್ಕವು ಒಂದು ಬಾರಿ ಮಾರುಕಟ್ಟೆಗೆ ಪ್ರವೇಶಿಸಿ ನಿರ್ಗಮಿಸುವುದಕ್ಕೆ ಮಾತ್ರ ಅನ್ವಯವಾಗಲಿದೆ. ವಾಹನದ ವರ್ಗೀಕರಣದ ಬಗ್ಗೆ ಗೊಂದಲ ಉಂಟಾದಲ್ಲಿ ಸೇವಾ ಪೂರೈಕೆದಾರರ ತೀರ್ಮಾನವೇ ಅಂತಿಮ ಎಂದು ಪಾಲಿಕೆ ತಿಳಿಸಿದೆ.
ಅಲ್ಲದೆ, ಅಗತ್ಯಕ್ಕೆ ಅನುಗುಣವಾಗಿ ಭವಿಷ್ಯದಲ್ಲಿ ಶುಲ್ಕವನ್ನು ಪರಿಷ್ಕರಿಸುವ, ಹೊಸ ಶುಲ್ಕಗಳನ್ನು ಸೇರ್ಪಡೆಗೊಳಿಸುವ ಅಥವಾ ಅಸ್ತಿತ್ವದಲ್ಲಿರುವ ದರಗಳಲ್ಲಿ ಬದಲಾವಣೆ ಮಾಡುವ ಅಧಿಕಾರವನ್ನು ಪಾಲಿಕೆ ಕಾಯ್ದಿರಿಸಿಕೊಂಡಿದೆ.
ಐತಿಹಾಸಿಕ ಮಾರುಕಟ್ಟೆಯ ನಿರ್ವಹಣೆ, ಮೂಲಸೌಕರ್ಯ ಸುಧಾರಣೆ ಹಾಗೂ ಆಧುನಿಕ ತಂತ್ರಜ್ಞಾನ ಅಳವಡಿಕೆಗೆ ಈ ಶುಲ್ಕ ವ್ಯವಸ್ಥೆ ನೆರವಾಗಲಿದೆ ಎಂಬುದು ಪಾಲಿಕೆಯ ಆಶಯವಾಗಿದೆ.

ವಾಹನ ಪ್ರವೇಶ ಶುಲ್ಕ
೬ ಚಕ್ರ ಹಾಗೂ ಹೆಚ್ಚಿನ ಚಕ್ರದ ಟ್ರಕ್-೩೫೦
೪ ಚಕ್ರದ ಗೂಡ್ಸ್ ವಾಹನ-೧೦೦
೩ ಚಕ್ರದ ಗೂಡ್ಸ್ ಆಟೋ-೭೫,
ಸರಕು ಪ್ರವೇಶ ಶುಲ್ಕ:
ಹಣ್ಣು, ಹೂವು, ತರಕಾರಿ, ಸೊಪ್ಪು-ಮೂಟೆಗೆ ೫,ರೂ, ಈರುಳ್ಳಿ, ಆಲೂಗಡ್ಡೆ, ತೆಂಗಿನಕಾಯಿ, ಬೆಳ್ಳುಳ್ಳಿ -ಮೂಟೆಗೆ ೫ ರೂ, ಮೊಟ್ಟೆ, ಮೀನು/ಸಮುದ್ರಾಹಾರ -ಬಾಕ್ಸ್‌ಗೆ ೧೦,ರೂ. ಕೋಳಿ ಮತ್ತು ಮಾಂಸ – ಟ್ರೇಗೆ ೧೦ ರೂ.