Home ಜಿಲ್ಲೆ ಕಲಬುರಗಿ ತೇಲ್ಕೂರ್, ಬಗಲಿ ವಿರುದ್ಧ ದೂರು ದಾಖಲು

ತೇಲ್ಕೂರ್, ಬಗಲಿ ವಿರುದ್ಧ ದೂರು ದಾಖಲು

ಕಲಬುರಗಿ,ಸೆ.3-ಸರ್ಕಾರ ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡದೇ ಇರುವುದನ್ನು ಖಂಡಿಸಿ ಬಿಜೆಪಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಅಶೋಕ ಬಗಲಿ ಅವರ ನೇತೃತ್ವದಲ್ಲಿ ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ವೇಳೆ ವಾಹನ ಸವಾರರಿಗೆ ಅಡ್ಡಿ ಪಡಿಸಿದ ಹಾಗೂ ಬೈಕ್ ಸವಾರರೊಬ್ಬರ ಹೆಲ್ಮೆಟ್ ಒಡೆದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ್ ಮತ್ತು ಬಿಜೆಪಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಅಶೋಕ ಬಗಲಿ ಅವರ ಮೇಲೆ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನುಮತಿ ಪಡೆಯದೇ ಏಕಾಏಕಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಖ್ಯರಸ್ತೆಯಲ್ಲಿ ಪ್ರತಿಭಟನೆ ನಡೆಸಿ ಆಟೋ, ಬೈಕ್, ಕಾರು ಬಸ್ ತಡೆದು ಸವಾರರಿಗೆ ಬೆದರಿಕೆ ಹಾಕಲಾಗಿದೆ. ಬೈಕ್ ಸವಾರರೊಬ್ಬರ ಹೆಲ್ಮೆಟ್ ತೆಗೆದು ನೆಲಕ್ಕೆ ಬಡೆದು ಒಡೆದು ಹಾಕುವುದರ ಮೂಲಕ 500 ರೂ.ಹಾನಿ ಮಾಡಲಾಗಿದೆ ಎಂದು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಎಎಸ್‍ಐ ಮಹಾಂತಪ್ಪ ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ದೂರಿನ ಅನ್ವಯ ರಾಜಕುಮಾರ ಪಾಟೀಲ ತೇಲ್ಕೂರ್ ಮತ್ತು ಅಶೋಕ ಬಗಲಿ ಅವರ ವಿರುದ್ಧ ಕಲಂ 189(2), 191 (2), 223, 126 (2), 324(4), 352, 351 (2) ಜೊತೆಗೆ 190 ಬಿಎನ್‍ಎಸ್ ಆ್ಯಕ್ಟ್ ಪ್ರಕಾರ ಪ್ರಕರಣ ದಾಖಲಾಗಿದೆ.