Home ಜಿಲ್ಲೆ ಬೆಂಗಳೂರು ನಟ ದುನಿಯಾ ವಿಜಯ್- ನಾಗರತ್ನ ದಾಂಪತ್ಯ ಅಂತ್ಯ

ನಟ ದುನಿಯಾ ವಿಜಯ್- ನಾಗರತ್ನ ದಾಂಪತ್ಯ ಅಂತ್ಯ

ಬೆಂಗಳೂರು,ಸೆ.೩ -ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಮತ್ತು ಅವರ ಮೊದಲ ಪತ್ನಿ ನಾಗರತ್ನ ಅವರ ದಾಂಪತ್ಯ ಜೀವನಕ್ಕೆ ಕಾನೂನಾತ್ಮಕವಾಗಿ ತೆರೆಬಿದ್ದಿದೆ.
ಹಲವು ವರ್ಷಗಳಿಂದ ಕೋರ್ಟ್ ಅಂಗಳದಲ್ಲಿದ್ದ ವಿಚ್ಛೇದನ ಪ್ರಕರಣವನ್ನ ಇತ್ಯರ್ಥಪಡಿಸಿರುವ ಕರ್ನಾಟಕ ಹೈಕೋರ್ಟ್, ದಂಪತಿಗೆ ಅಧಿಕೃತವಾಗಿ ವಿಚ್ಛೇದನ ಮಂಜೂರು ಮಾಡಿದ್ದು, ಪತ್ನಿಗೆ ೨ ಕೋಟಿ ರೂ. ಜೀವನಾಂಶ ನೀಡಲು ಆದೇಶಿಸಿದೆ.

ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಹೆಚ್. ಶಾಂತಿಭೂಷಣ್ ಅವರನ್ನೊಳಗೊಂಡ ಉನ್ನತ ನ್ಯಾಯಪೀಠವು ಈ ಪ್ರಕರಣದ ವಿಚಾರಣೆ ನಡೆಸಿ ಅಂತಿಮ ತೀರ್ಪು ನೀಡಿದೆ. ವಿಚ್ಛೇದನ ಮಂಜೂರು ಮಾಡುವ ಜೊತೆಗೆ, ಪತ್ನಿ ನಾಗರತ್ನಗೆ ೨ ಕೋಟಿ ರೂಪಾಯಿಗಳ ಜೀವನಾಂಶ ಪಾವತಿಸುವಂತೆ ನಟ ದುನಿಯಾ ವಿಜಯ್‌ಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ ಪತ್ನಿ ಹಾಗೂ ಮೂವರು ಮಕ್ಕಳ ಭವಿಷ್ಯ ಮತ್ತು ಅವರ ಜೀವನ ನಿರ್ವಹಣೆಯ ಪ್ರಮುಖ ಅಂಶವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಇದರೊಂದಿಗೆ ನಟ ದುನಿಯಾ ವಿಜಯ್ ಅವರ ಪ್ರಸ್ತುತ ಸಾಮಾಜಿಕ ಸ್ಥಾನಮಾನ, ವೃತ್ತಿಪರ ಗಳಿಕೆ ಹಾಗೂ ಹಣಕಾಸಿನ ಸ್ಥಿತಿಗತಿಗಳನ್ನು ಕೂಲಂಕುಷವಾಗಿ ಪರಾಮರ್ಶಿಸಿ ೨ ಕೋಟಿ ಜೀವನಾಂಶದ ಮೊತ್ತವನ್ನು ನಿಗದಿಪಡಿಸಲಾಗಿದೆ ಎಂದು ಪೀಠ ತಿಳಿಸಿದೆ.

ಕನ್ನಡ ಚಿತ್ರರಂಗದಲ್ಲಿ ದುನಿಯಾ ಸಿನಿಮಾದ ಮೂಲಕ ಮನೆಮಾತಾಗಿದ್ದ ವಿಜಯ್ ಅವರ ವೈಯಕ್ತಿಕ ಜೀವನದ ಈ ವಿವಾದ ಹಲವು ವರ್ಷಗಳಿಂದ ಸುದ್ದಿಯಲ್ಲಿದ್ದರು.ಇದೀಗ ಉನ್ನತ ನ್ಯಾಯಾಲಯದ ಈ ತೀರ್ಪಿನಿಂದಾಗಿ ದಾಂಪತ್ಯ ಜೀವನಕ್ಕೆ ಅಧಿಕೃತ ಕೊನೆ ಸಿಕ್ಕಂತಾಗಿದೆ. ವಿಜಯ್ ಅವರು ಸದ್ಯ ಕೀರ್ತಿ ಎಂಬುವವರ ಜೊತೆ ವಾಸವಿದ್ದಾರೆ.