Home ಜಿಲ್ಲೆ ಮೈಸೂರು ದೇಶದ ಉಳಿವಿಗೆ ಕಾಂಗ್ರೆಸ್ ಅಗತ್ಯ: ರಿಜ್ವಾನ್ ಅರ್ಷದ್

ದೇಶದ ಉಳಿವಿಗೆ ಕಾಂಗ್ರೆಸ್ ಅಗತ್ಯ: ರಿಜ್ವಾನ್ ಅರ್ಷದ್

ಸಂಜೆವಾಣಿ ನ್ಯೂಸ್
ಮೈಸೂರು, ಸೆ.2:-
ದೇಶ ಹಾಗೂ ಸಂವಿಧಾನದ ಉಳಿವಿಗಾಗಿ ಕಾಂಗ್ರೆಸ್ ಪಕ್ಷ ಅತ್ಯಗತ್ಯ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಪ್ರತಿಪಾದಿಸಿದರು.


ಸಚಿವರಾದ ಬಳಿಕ ಪ್ರಥಮ ಬಾರಿಗೆ ನಗರದ ಕಾಂಗ್ರೆಸ್ ಭವನಕ್ಕೆ ಆಗಮಿಸಿದ ಅವರಿಗೆ ಪಕ್ಷದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬಿಜೆಪಿ ಮತ್ತು ಆರ್‍ಎಸ್‍ಎಸ್ ಸುಳ್ಳಿನ ಆಧಾರದ ಮೇಲೆ ಸಮಾಜ ಒಡೆದು, ಪ್ರೀತಿ-ವಿಶ್ವಾಸ ನಾಶಮಾಡಿ ದ್ವೇಷದ ವಾತಾವರಣ ನಿರ್ಮಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಖರ್ಗೆ-ರಾಹುಲ್ ಜೋಡಿ ಹೋರಾಟ: ಕೋಮುವಾದಿ ಶಕ್ತಿಗಳ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಜೋಡಿಯಾಗಿ ಹೋರಾಡುತ್ತಿದ್ದಾರೆ. ಸಂಘ ಪರಿವಾರದಿಂದ ದೇಶವನ್ನು ಕಾಪಾಡಲು ಬೇರೆ ಯಾವುದೇ ಪಕ್ಷ, ಸಂಘಟನೆ ಅಥವಾ ನಾಯಕರಿಂದ ಸಾಧ್ಯವಿಲ್ಲ. ಕೇವಲ ಕಾಂಗ್ರೆಸ್ ಮಾತ್ರ ಇದಕ್ಕೆ ಸಮರ್ಥವಾಗಿದೆ ಎಂದರು.


ಇಂದು ನಮ್ಮ ಹೋರಾಟ ಅಧಿಕಾರಕ್ಕಾಗಿಯಲ್ಲ, ಬದಲಿಗೆ ಸಂವಿಧಾನ ಮತ್ತು ದೇಶದ ಉಳಿವಿಗಾಗಿ. ಸುದೀರ್ಘ ಸೇವೆ ಸಲ್ಲಿಸಿರುವ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ವೇದಿಕೆ ಶುದ್ಧೀಕರಣ ಮಾಡಲಾಗಿದೆ. ಪ್ರಭಾವಿ ನಾಯಕರಿಗೇ ಈ ಸ್ಥಿತಿಯಾದರೆ ಇನ್ನು ಸಾಮಾನ್ಯ ದಲಿತರು ಮತ್ತು ಅಲ್ಪಸಂಖ್ಯಾತರ ಗತಿಯೇನು ಎಂದು ಪ್ರಶ್ನಿಸಿದರು.
ಹೆದರುವ ಪ್ರಶ್ನೆಯೇ ಇಲ್ಲ: ಬಿಜೆಪಿ ಆಡಳಿತದಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ಮಹಿಳೆಯರು, ರೈತರು ಹಾಗೂ ವಿದ್ಯಾರ್ಥಿಗಳ ಮೇಲೆಯೂ ನಿರಂತರ ಪ್ರಹಾರ ನಡೆಯುತ್ತಿದೆ. ಶುದ್ಧೀಕರಣ ಮಾಡಿದವರ ಮೇಲೆ ಎಫ್‍ಐಆರ್ ಹಾಕದೆ, ಘಟನೆ ಖಂಡಿಸಿ ಸುದ್ದಿಗೋಷ್ಠಿ ನಡೆಸಿದ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿದ್ದಾರೆ. ಆದರೆ, ರಾಹುಲ್ ಗಾಂಧಿ ಅವರೇ ಹೆದರದಿದ್ದಾಗ ನಾವು ಹೆದರುವುದಿಲ್ಲ. ನಮ್ಮನ್ನು ಜೈಲಿಗೆ ತಳ್ಳಿದರೂ ಸಂವಿಧಾನ ಉಳಿಸಲು ಹೋರಾಟ ಮುಂದುವರಿಸುತ್ತೇವೆ ಎಂದು ಎಚ್ಚರಿಸಿದರು.


ಮೈಸೂರಿನ ಸೇವೆಗೆ ಬದ್ಧ: ನಾನು ಬೆಳೆದು, ವಿದ್ಯಾಭ್ಯಾಸ ಮಾಡಿದ್ದು ಮೈಸೂರಿನಲ್ಲೇ. ಇಲ್ಲಿನ ಜನರ ಬಗ್ಗೆ ನನಗೆ ವಿಶೇಷ ಕಾಳಜಿ ಇದೆ. ನನಗೆ ಸಚಿವ ಸ್ಥಾನ ನೀಡಲು ಕಾರಣರಾದ ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಅನ್ನರಾಮಯ್ಯ ಎಂದು ಹೆಸರಾಗಿರುವ ಸಿದ್ದರಾಮಯ್ಯ ಅವರು ಜಾರಿಗೆ ತಂದ ಅತ್ಯುತ್ತಮ ಯೋಜನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತಲುಪಿಸಲು ಶ್ರಮಿಸುತ್ತೇನೆ ಎಂದು ರಿಜ್ವಾನ್ ಹರ್ಷದ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಕೆ. ಹರೀಶ್ ಗೌಡ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಬಿ.ಜೆ. ವಿಜಯ್ ಕುಮಾರ್, ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪ ಅಮರನಾಥ್ ಹಾಗೂ ಮಾಜಿ ಶಾಸಕ ಭಾರತಿ ಶಂಕರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.