Home ಜಿಲ್ಲೆ ಬೆಂಗಳೂರು ಸೆ. ೫ ರಂದು ಕೂಡ್ಲಿಗಿಯಿಂದ ಪ್ರಜಾಸೇವಾ ಅಭಿಯಾನ ಆರಂಭ

ಸೆ. ೫ ರಂದು ಕೂಡ್ಲಿಗಿಯಿಂದ ಪ್ರಜಾಸೇವಾ ಅಭಿಯಾನ ಆರಂಭ

ಬೆಂಗಳೂರು,ಆ.೩೧ -ಜನರ ಮನೆ ಬಾಗಿಲಿಗೆ ಆಡಳಿತ ವ್ಯವಸ್ಥೆ ಯನ್ನು ಕಲ್ಪಿಸುವುದು ಹೊಸದಾಗಿ ರಚಿಸಿದ ಪ್ರಜಾಸೇವಾ ಇಲಾಖೆಯ ಉದ್ದೇಶವಾಗಿದ್ದು,ಸೆಪ್ಟೆಂಬರ್ ೫ ರಂದು ಪ್ರಜಾಸೇವಾ ಅಭಿಯಾನವನ್ನು ವಿಜಯನಗರ ಜಿಲ್ಲೆಯ ಕೂಡ್ಲಿಗಿ ಹೋಬಳಿಯಿಂದ ಪ್ರಾರಂಭವಾಗಲಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ತಿಳಿಸಿದ್ದಾರೆ.


ಈ ಸಂಬಂಧ ಪ್ರತಿಕಾ ಹೇಳಿಕೆ ನೀಡಿರುವ ಅವರು ಪ್ರಜಾಸೇವಾ ಅಭಿಯಾನದ ಪ್ರಮುಖ ಅಂಶಗಳು ಹಾಗೂ ಪರಿಶೀಲನಾ ಕಾರ್ಯವಿಧಾನದ ಬಗ್ಗೆ ಮಾಹಿತಿ ನೀಡಿದ್ದು, ಪ್ರತಿ ಶನಿವಾರ ತಾಲ್ಲೂಕು, ಹೋಬಳಿ ಮಟ್ಟದ ಪ್ರಜಾಸೇವಾ ಅಭಿಯಾನ ಸಭೆಗಳನ್ನು ಪರ್ಯಾಯವಾಗಿ ರಾಜ್ಯಾದ್ಯಂತ ನಡೆಸಲು ಕ್ರಮವಹಿಸಲಾದೆ. ಜೊತೆಗೆ ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಕೇಂದ್ರದಲ್ಲಿ ಸಭೆ ನಡೆಯುತ್ತದೆ. ಎರಡನೇ ಮತ್ತು ನಾಲ್ಕನೇ ಶನಿವಾರದಂದು ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಹೋಬಳಿ ಮಟ್ಟದಲ್ಲಿ ಸಭೆಯನ್ನು ಆಯೋಜಿಸಲಾಗುವುದು ಎಂದರು.


ಸಾರ್ವಜನಿಕರು ತಮ್ಮ ಸಣ್ಣಪುಟ್ಟ ಸಮಸ್ಯೆಗಳಿಗಾಗಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದು,ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಿ ಕಾಲಮಿತಿಯಲ್ಲಿ ವಿಲೇವಾರಿ ಮಾಡುವುದು ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಹೆಚ್ಚಿಸುವುದು ಪ್ರಜಾಸೇವಾ ಅಭಿಯಾನದ ಪ್ರಮುಖ ಉದ್ದೇಶಗಳಾಗಿವೆ.


ಯಾವುದೇ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಸಭೆ ನಡೆಯುವ ಸಂದರ್ಭದಲ್ಲಿ ಅದೇ ದಿನ ಆ ಕ್ಷೇತ್ರದಲ್ಲಿ ಪ್ರತ್ಯೇಕ ಹೋಬಳಿ ಮಟ್ಟದ ಶಾಸಕರ ಸಭೆಯನ್ನು ನಡೆಸಲಾಗುವುದಿಲ್ಲ. ಬದಲಾಗಿ, ಸಂಬಂಧಿಸಿದ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಭಾಗವಹಿಸುತ್ತಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಸಭೆಗಳಿಗೆ ಸಂಬಂಧಿಸಿದ ತಾಲ್ಲೂಕು ಅಧಿಕಾರಿಗಳೊಂದಿಗೆ ಹಾಜರಾಗುತ್ತಾರೆ. ಅದೇ ರೀತಿ ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ತಾಲ್ಲೂಕು ಒಳಪಡುವ ಕ್ಷೇತ್ರದಲ್ಲಿ ನಡೆಯುವ ಶಾಸಕರ ಸಭೆಗಳಲ್ಲಿ ಭಾಗವಹಿಸುತ್ತಾರೆ.

ಎಲ್ಲಾ ಸಭೆಗಳಲ್ಲಿ ಸ್ಥಳೀಯ ಮಾಜಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಅಥವಾ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು ಹಾಗೂ ಮುಖಂಡರಿಗೂ ಆಹ್ವಾನಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.


ಸಾರ್ವಜನಿಕರಿಗೆ ಮುಂಗಡ ಮಾಹಿತಿ ಹಾಗೂ ಅರ್ಜಿ ಸಲ್ಲಿಕೆ ವ್ಯವಸ್ಥೆ , ಸ್ಥಳದಲ್ಲಿಯೇ ಸೇವೆ ಹಾಗೂ ಅಹವಾಲುಗಳ ಪರಿಹಾರ,ಜನ ಜಾಗೃತಿಯಿಂದ ಜನರ ಸಹಭಾಗಿತ್ವ ಹಾಗೂ ಪಾರದರ್ಶಕತೆ,ಏಕೀಕೃತ ವ್ಯವಸ್ಥೆ , ಪ್ರತಿ ಬುಧವಾರದ ಮೂರು ಹಂತದ ಪರಿಶೀಲನಾ ವ್ಯವಸ್ಥೆ,ಪ್ರತಿ ಬುಧವಾರದ ಮೂರು ಹಂತದ ಪರಿಶೀಲನಾ ವ್ಯವಸ್ಥೆ, ಮೇಲ್ಮನವಿ, ಹೊಣೆಗಾರಿಕೆ ಹಾಗೂ ವರದಿ ಸಲ್ಲಿಕೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ವಿವರ ನೀಡಿದ್ದಾರೆ.