Home ಜಿಲ್ಲೆ ಬೆಂಗಳೂರು ಭಾನುವಾರವೂ ತ್ಯಾಜ್ಯ ಸ್ವಚ್ಛತಾ ಕಾರ್ಯಕ್ಕೆ ರಜೆಯಿಲ್ಲ

ಭಾನುವಾರವೂ ತ್ಯಾಜ್ಯ ಸ್ವಚ್ಛತಾ ಕಾರ್ಯಕ್ಕೆ ರಜೆಯಿಲ್ಲ

ಬೆಂಗಳೂರು:ಆ.೩೧-ಭಾನುವಾರವಾದರೂ ತ್ಯಾಜ್ಯ ಸ್ವಚ್ಛತಾ ಕಾರ್ಯಕ್ಕೆ ರಜೆ ಇಲ್ಲ ಎಂಬ ಸಂದೇಶದೊಂದಿಗೆ ಬೆಂಗಳೂರು ಉತ್ತರ ನಗರ ಪಾಲಿಕೆ ಆರ್‌ಟಿ ನಗರದಲ್ಲಿ ವಿಶೇಷ ಸ್ವಚ್ಛತಾ ಹಾಗೂ ಸೌಂದರ್ಯೀಕರಣ ಅಭಿಯಾನ ನಡೆಸಿದೆ. ಅಭಿಯಾನದ ವೇಳೆ ಸುಮಾರು ೩೦ ಟನ್ ಕಟ್ಟಡ ತ್ಯಾಜ್ಯವನ್ನು ತೆರವುಗೊಳಿಸುವುದರ ಜೊತೆಗೆ, ೧೫೦ ಮೀಟರ್ ಉದ್ದದ ಗೋಡೆಗೆ ಬಣ್ಣ ಬಳಿದು ಪ್ರದೇಶಕ್ಕೆ ಹೊಸ ರೂಪ ನೀಡಲಾಗಿದೆ.


ಮಾನ್ಯ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರ ಮಾರ್ಗದರ್ಶನದಲ್ಲಿ ಹಾಗೂ ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರ ನಿರ್ದೇಶನದಂತೆ ಹೆಬ್ಬಾಳ ವಿಭಾಗದ ಆರ್‌ಟಿ ನಗರದಲ್ಲಿ ಭಾನುವಾರ ಈ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.


CIL ರಸ್ತೆಯಲ್ಲಿರುವ ರವೀಂದ್ರನಾಥ ಟ್ಯಾಗೋರ್ ಪ್ರತಿಮೆಯ ಸಮೀಪ ನಡೆದ ಸ್ವಚ್ಛತಾ ಕಾರ್ಯದಲ್ಲಿ ಉತ್ತರ ನಗರ ಪಾಲಿಕೆಯ ಅಪರ ಆಯುಕ್ತರು (ಕಂದಾಯ ಪ್ರಭಾರ) ಹಾಗೂ ಜಂಟಿ ಆಯುಕ್ತರಾದ ಪಲ್ಲವಿ, Ugly India ಸಂಸ್ಥೆಯ ಅರುಣ್ ಪೈ, ಪ್ಯಾರಾಚೂಟ್ ರೆಜಿಮೆಂಟ್ ಶಾಲೆಯ ಎನ್‌ಸಿಸಿ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ನಾಗರಿಕರು ಸಕ್ರಿಯವಾಗಿ ಪಾಲ್ಗೊಂಡರು.
ಅಭಿಯಾನದ ಅಂಗವಾಗಿ ಸ್ಥಳದಲ್ಲಿ ಸಂಗ್ರಹವಾಗಿದ್ದ ಸುಮಾರು ೩೦ ಟನ್ ಕಟ್ಟಡ ಸೇರಿದಂತೆ ವಿವಿಧ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಇದೇ ವೇಳೆ ಸ್ಥಳದಲ್ಲಿದ್ದ ಅನಧಿಕೃತ ಪಾರ್ಕಿಂಗ್ ತೆರವುಗೊಳಿಸಿ ಸಾರ್ವಜನಿಕರ ಅನುಕೂಲಕ್ಕಾಗಿ ಪ್ರದೇಶವನ್ನು ಸ್ವಚ್ಛಗೊಳಿಸಲಾಯಿತು.
ಸ್ವಚ್ಛತಾ ಕಾರ್ಯಕ್ಕೆ ಸೌಂದರ್ಯೀಕರಣದ ಸ್ಪರ್ಶ ನೀಡುವ ಉದ್ದೇಶದಿಂದ ಸುಮಾರು ೧೫೦ ಮೀಟರ್ ಉದ್ದದ ಗೋಡೆಗೆ ಪೇಂಟಿಂಗ್ ಮಾಡಲಾಯಿತು. ಇದರಿಂದ ಈವರೆಗೆ ನಿರ್ಲಕ್ಷ್ಯಕ್ಕೊಳಗಾಗಿದ್ದ ಪ್ರದೇಶವು ಹೊಸ ರೂಪ ಪಡೆದುಕೊಂಡಿದೆ.
ಸ್ವಚ್ಛಗೊಳಿಸಿದ ಸ್ಥಳಗಳಲ್ಲಿ ಮತ್ತೆ ತ್ಯಾಜ್ಯ ಸುರಿಯದಂತೆ ನಾಗರಿಕರು ಸಹಕರಿಸಬೇಕು. ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿ ಹಾಗೂ ಸುಂದರವಾಗಿ ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಬೆಂಗಳೂರು ಉತ್ತರ ನಗರ ಪಾಲಿಕೆ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ, ಡಿಜಿಎಂ ರಶ್ಮಿ, ಎಜಿಎಂ ಅಭಿಲಾಷ್ ಸೇರಿದಂತೆ ಪಾಲಿಕೆಯ ಮಾರ್ಷಲ್‌ಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.