
ಕಲಬುರಗಿ,ಆ.29-ಇಲ್ಲಿನ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ವಾರ್ಡ್ ನಂ.21ರ ಸದಸ್ಯ ಅಜ್ಮಲ್ ಗೋಳಾ, ಉಪ ಮೇಯರ್ ಆಗಿ ವಾರ್ಡ್ ನಂಬರ್ 20 ಸದಸ್ಯೆ ಫರಾ ಖುಸ್ರೋ ಜಾಗಿರದಾರ್ ಅವರು ಆಯ್ಕೆಯಾಗಿದ್ದಾರೆ.
ಮಹಾನಗರ ಪಾಲಿಕೆಯ ಇಂದಿರಾ ಸ್ಮಾರಕ ಭವನದಲ್ಲಿ ಇಂದು ಚುನಾವಣಾ ಅಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತರಾದ ಜಹೀರಾ ನಸೀಂ ಅವರ ಅಧ್ಯಕ್ಷತೆಯಲ್ಲಿ ನಡೆದ 24ನೇ ಅವಧಿಯ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಮೇಯರ್ ಆಗಿ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರಾದ ಅಜ್ಮಲ್ ಗೋಳಾ ಮತ್ತು ಉಪ ಮೇಯರ್ ಆಗಿ ಫರಾ ಖುಸ್ರೋ ಜಾಗಿರದಾರ್ ಅವರು ಆಯ್ಕೆಯಾದರು.
ಅಜ್ಮಲ್ ಗೋಳಾ ಅವರ ತಂದೆ ಜಮೀರ್ ಗೋಳಾ ಅವರು ಈ ಹಿಂದೆ ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಆಗಿದ್ದರು. ಇದೀಗ ಅವರ ಪುತ್ರ ಅಜ್ಮಲ್ ಗೋಳಾ ಅವರು ಮೇಯರ್ ಆಗಿ ಆಯ್ಕೆಯಾಗಿದ್ದು, ತಂದೆ-ಮಗ ಮೇಯರ್ ಹುದ್ದೆ ಅಲಂಕರಿಸಿದ್ದು, ವಿಶೇಷವಾಗಿದೆ.
ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಸೇರಿದಂತೆ ಪಾಲಿಕೆಯ ಇತರ ಅಧಿಕಾರಿಗಳು, ಮಹಾನಗರ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.






























