
ಬೆಂಗಳೂರು,ಆ.೨೨-ದ್ವಿಚಕ್ರ ವಾಹನ ಸವಾರರ ಸುರಕ್ಷತೆ ಹಾಗೂ ರಸ್ತೆ ಅಪಘಾತಗಳಲ್ಲಿ ಸಂಭವಿಸುವ ತಲೆಯ ಗಾಯಗಳನ್ನು ತಡೆಗಟ್ಟುವ ಉದ್ದೇಶದಿಂದ ಸ್ಟೀಲ್ಬರ್ಡ್ ಹೆಲ್ಮೆಟ್ ಕಂಪನಿ ಹಾಗೂ ಗಾಂಧಿನಗರ ವಿಧಾನಸಭಾ ಕ್ಷೇತ್ರ ಶೇಷಾದ್ರಿಪುರಂ ಸಂಚಾರ ಪೊಲೀಸ್ ಠಾಣೆ ವತಿಯಿಂದ ಶೇಷಾದ್ರಿಪುರಂ ಸ್ಲಂ ಬೋರ್ಡ್ ಸಿಗ್ನಲ್ನಲ್ಲಿ ಹೆಲ್ಮೆಟ್ ಜಾಗೃತಿ ಅಭಿಯಾನ ಹಾಗೂ ಉಚಿತ ಫುಲ್ಫೇಸ್ ಹೆಲ್ಮೆಟ್ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಆರೋಗ್ಯ ಸಚಿವ ಹಾಗೂ ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್ , ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಐಪಿಎಸ್ ಅಧಿಕಾರಿ ಕಾರ್ತಿಕ್ ರೆಡ್ಡಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಗಣ್ಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ದ್ವಿಚಕ್ರ ವಾಹನ ಸವಾರರಿಗೆ ೫೦೦ ಫುಲ್ಫೇಸ್ ಹೆಲ್ಮೆಟ್ಗಳನ್ನು ಉಚಿತವಾಗಿ ವಿತರಿಸಿ, ಸುರಕ್ಷಿತ ವಾಹನ ಚಾಲನೆ ಮತ್ತು ಗುಣಮಟ್ಟದ ಹೆಲ್ಮೆಟ್ ಬಳಕೆಯ ಕುರಿತು ಜಾಗೃತಿ ಮೂಡಿಸಲಾಯಿತು.
ವಿಶೇಷವಾಗಿ ಕ್ಯಾಪ್ ಮಾದರಿಯ ಹೆಲ್ಮೆಟ್ಗಳ ಬಳಕೆಯಿಂದಾಗುವ ಅಪಾಯಗಳ ಬಗ್ಗೆ ಸವಾರರಿಗೆ ಮಾಹಿತಿ ನೀಡಿ, ನಿಯಮಾನುಸಾರ ಸುರಕ್ಷಿತ ಹೆಲ್ಮೆಟ್ ಧರಿಸುವಂತೆ ಮನವಿ ಮಾಡಲಾಯಿತು.
ಶಾಸಕ ದಿನೇಶ್ ಗುಂಡೂರಾವ್ ಮಾತನಾಡಿ, “ಕರ್ನಾಟಕ ಸರ್ಕಾರ ವಾಹನ ಸವಾರರ ಸುರಕ್ಷತೆಗಾಗಿ ಕ್ಯಾಪ್ ಹೆಲ್ಮೆಟ್ ಬಳಕೆಯನ್ನು ನಿಷೇಧಿಸುವ ಕ್ರಮ ಕೈಗೊಂಡಿದೆ. ದ್ವಿಚಕ್ರ ವಾಹನ ಸವಾರರು ಕೇವಲ ಪೊಲೀಸ್ ದಂಡದ ಭಯದಿಂದಲ್ಲ, ತಮ್ಮ ಕುಟುಂಬದ ಸುರಕ್ಷತೆಯ ದೃಷ್ಟಿಯಿಂದಲೂ ಕಡ್ಡಾಯವಾಗಿ ಗುಣಮಟ್ಟದ ಫುಲ್ಫೇಸ್ ಹೆಲ್ಮೆಟ್ ಧರಿಸಬೇಕು. ರಸ್ತೆ ಸುರಕ್ಷತೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ,” ಎಂದು ಹೇಳಿದರು.
ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಐಪಿಎಸ್ ಅಧಿಕಾರಿ ಕಾರ್ತಿಕ್ ರೆಡ್ಡಿ ಮಾತನಾಡಿ, ಹೆಲ್ಮೆಟ್ ಧರಿಸುವುದು ಕೇವಲ ಸಂಚಾರ ನಿಯಮ ಪಾಲನೆಯಲ್ಲ, ಅದು ಜೀವ ರಕ್ಷಣೆಯ ಪ್ರಮುಖ ಕ್ರಮವಾಗಿದೆ. ವಾಹನ ಸವಾರರು ವೇಗದ ಮಿತಿಯನ್ನು ಪಾಲಿಸುವುದರ ಜೊತೆಗೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದ ಮೂಲಕ ಸಾರ್ವಜನಿಕರಲ್ಲಿ “ಹೆಲ್ಮೆಟ್ ಧರಿಸಿ ? ಜೀವ ಉಳಿಸಿ” ಎಂಬ ಸಂದೇಶವನ್ನು ಪಾಲಿಸಬೇಕು ಎಂದರು.
ಈ ವೇಳೆ ಸ್ಟೀಲ್ಬರ್ಡ್ ಹೆಲ್ಮೆಟ್ ಕಂಪನಿಯ ಅಡಳಿತ ಮಂಡಳಿಯವರು, ಭಾಗವಹಿಸಿದ್ದರು.
































