
ಶಹಾಪುರ,ಆ.20: ಪತ್ನಿಯೊಂದಿಗೆ ನಡೆದ ಕೌಟುಂಬಿಕ ಕಲಹದ ಕೋಪದಲ್ಲಿ ತಂದೆಯೊಬ್ಬ ತನ್ನ ಇಬ್ಬರು ಕರುಳ ಕುಡಿಗಳನ್ನು ಕಾಲುವೆಗೆ ಎಸೆದು ಹತ್ಯೆ ಮಾಡಿರುವ ಆರೋಪದ ಆಘಾತಕಾರಿ ಘಟನೆ ಶಹಾಪುರ ತಾಲೂಕಿನ ಗಂಗನಾಳ ಗ್ರಾಮದಲ್ಲಿ ನಡೆದಿದೆ.
ಗಂಗನಾಳ ಗ್ರಾಮದ ರೇಣುಕಾ ಹಾಗೂ ಶಾಂತಪ್ಪ ಬಿರೆದಾರ್ ದಂಪತಿಗೆ ಮೂವರು ಮಕ್ಕಳಿದ್ದು, ಸಾನ್ವಿ (9) ಹಾಗೂ ಸೃಜನ್ (2) ದುರಂತಕ್ಕೆ ಬಲಿಯಾಗಿದ್ದಾರೆ. ಮತ್ತೊಬ್ಬ ಮಗುವನ್ನು ತಾಯಿಯ ಆಶ್ರಯಕ್ಕೆ ಒಪ್ಪಿಸಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಮೂಲತಃ ಕಕ್ಕಸಗೇರ ಗ್ರಾಮದವನಾದ ಶಾಂತಪ್ಪ, ಪತ್ನಿಯ ತವರು ಗಂಗನಾಳ ಗ್ರಾಮದಲ್ಲಿ ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಎನ್ನಲಾಗಿದೆ. ಮಂಗಳವಾರ ಸಂಜೆ ದಂಪತಿ ನಡುವೆ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದಿದ್ದು, ಬಳಿಕ ಶಾಂತಪ್ಪ ತನ್ನ ಮೂವರು ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕರೆದೊಯ್ದಿದ್ದಾನೆ ಎನ್ನಲಾಗಿದೆ.
ತಾಲೂಕಿನ ಗೋಗಿ ಗ್ರಾಮದ ಸಮೀಪದ ಬೋರುಕ ಕಂಪನಿ ಬಳಿಯ ಕಾಲುವೆ ಬಳಿ ತೆರಳಿದ ಬಳಿಕ ಸಾನ್ವಿ ಹಾಗೂ ಸೃಜನ್ ಇಬ್ಬರನ್ನೂ ಕಾಲುವೆಗೆ ಎಸೆದಿರುವುದಾಗಿ ಆರೋಪಿ ಪೆÇಲೀಸರ ವಿಚಾರಣೆಯಲ್ಲಿ ತಿಳಿಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಘಟನೆ ಸಂಬಂಧ ಆರಂಭದಲ್ಲಿ ಮಕ್ಕಳ ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಪೆÇಲೀಸರು ತನಿಖೆ ಕೈಗೊಂಡಿದ್ದರು. ಆರೋಪಿ ನೀಡಿದ ಮಾಹಿತಿಯ ಆಧಾರದ ಮೇಲೆ ಕಾಲುವೆಯಲ್ಲಿ ಶೋಧ ಕಾರ್ಯ ಆರಂಭಿಸಲಾಯಿತು. ರಾತ್ರಿ ವೇಳೆ ಶೋಧ ಕಾರ್ಯ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಅಗ್ನಿಶಾಮಕ ದಳ ಹಾಗೂ ಕೆಬಿಜೆಎನ್ಎಲ್ ಅಧಿಕಾರಿಗಳ ಸಹಕಾರದೊಂದಿಗೆ ಶೋಧ ಕಾರ್ಯಾಚರಣೆ ಮುಂದುವರಿಸಲಾಯಿತು.
ನಿರಂತರ ಶೋಧದ ಬಳಿಕ ಮಧ್ಯಾಹ್ನ ಸೃಜನ್ನ ಮೃತದೇಹ ಪತ್ತೆಯಾಗಿದ್ದು, ಸಂಜೆ ಸಾನ್ವಿಯ ಮೃತದೇಹವೂ ಪತ್ತೆಯಾಗಿದೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಪ್ರಕರಣದ ತನಿಖೆ ಮುಂದುವರಿದಿದ್ದು, ಆರಂಭದಲ್ಲಿ ದಾಖಲಿಸಿದ್ದ ಅಪಹರಣ/ನಾಪತ್ತೆ ಪ್ರಕರಣವನ್ನು ಇದೀಗ ಕೊಲೆ ಪ್ರಕರಣವಾಗಿ ಪರಿವರ್ತಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 103ರ ಅಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಶಾಂತಪ್ಪನನ್ನು ಬಂಧಿಸಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಕೌಟುಂಬಿಕ ಕಲಹ ಹಾಗೂ ಪತ್ನಿಯ ಮೇಲಿನ ಕೋಪದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿರುವ ಶಂಕೆಯಿದೆ. ಪ್ರಕರಣದ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ,” ಎಂದು ಗೋಗಿ ಠಾಣೆಯ ಪಿಎಸ್ ಐ ಶಿವರಾಜ್ ಪಾಟೀಲ್ ತಿಳಿಸಿದ್ದಾರೆ.
ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗಂಗನಾಳ ಗ್ರಾಮ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಘಟನೆಯಿಂದ ತೀವ್ರ ಆಘಾತ ಹಾಗೂ ಆಕ್ರೋಶ ವ್ಯಕ್ತವಾಗಿದೆ. ಕ್ಷಣಿಕ ಕೋಪಕ್ಕೆ ಅಮಾಯಕ ಮಕ್ಕಳ ಜೀವವೇ ಬಲಿಯಾಗಿರುವ ಘಟನೆ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ.





























