Home ಕ್ರೈಂ ಸುದ್ದಿಗಳು ಕೃಷ್ಣಮೃಗ ಬೇಟೆ ಪ್ರಕರಣ: ಆರು ಆರೋಪಿಗಳ ಬಂಧನ, ರೈಫಲ್ ಸೇರಿ ವಾಹನ ಜಪ್ತಿ

ಕೃಷ್ಣಮೃಗ ಬೇಟೆ ಪ್ರಕರಣ: ಆರು ಆರೋಪಿಗಳ ಬಂಧನ, ರೈಫಲ್ ಸೇರಿ ವಾಹನ ಜಪ್ತಿ

ಬೀದರ್: ಜಿಲ್ಲೆಯ ಹೊನ್ನಿಕೇರಿ ಕಾಯ್ದಿಟ್ಟ ಅರಣ್ಯ ಪ್ರದೇಶದ ಸಮೀಪದ ಚೊಂಡಿ-ಮಮದಾಪುರ ಹುಲ್ಲುಗಾವಲು ಪ್ರದೇಶದಲ್ಲಿ ಕೃಷ್ಣಮೃಗವನ್ನು ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಆರೋಪಿಗಳನ್ನು ಅರಣ್ಯ ಇಲಾಖೆ ಬಂಧಿಸಿದೆ. ಕೃತ್ಯಕ್ಕೆ ಬಳಸಿದ್ದ ಒಂದು ರೈಫಲ್ ಹಾಗೂ ಎರಡು ನಾಲ್ಕು ಚಕ್ರದ ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಆಗಸ್ಟ್ 17ರಂದು ಕೃಷ್ಣಮೃಗ (ಆಂಟಿಲೋಪ್ ಸರ್ವಿಕಾಪ್ರಾ) ಬೇಟೆಯಾಡಿದ ಪ್ರಕರಣ ಬೆಳಕಿಗೆ ಬಂದಿತ್ತು.
ಘಟನೆ ಬಳಿಕ ಬೀದರ್ ತಾಲೂಕಿನ ಚೊಂಡಿ ತಾಂಡಾ ಹಾಗೂ ಮಮದಾಪುರ ತಾಂಡಾದ ಗ್ರಾಮಸ್ಥರು ಸಾಹಸ ಪ್ರದರ್ಶಿಸಿ ಮೂವರು ಆರೋಪಿಗಳನ್ನು ಹಿಡಿದು ಪೆÇಲೀಸರಿಗೆ ಒಪ್ಪಿಸಿದ್ದರು. ನಂತರ ಅವರನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿ ಪ್ರಕರಣ ದಾಖಲಿಸಲಾಗಿತ್ತು.
ಉಳಿದ ಮೂವರು ಆರೋಪಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕಾಗಿ ಅರಣ್ಯ ಇಲಾಖೆ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿತು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರ ಮಾರ್ಗದರ್ಶನದಲ್ಲಿ ಕಲಬುರಗಿ ಜಿಲ್ಲೆ ಹಾಗೂ ತೆಲಂಗಾಣ ಅರಣ್ಯ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮುನೀರ್ ಅಹ್ಮದ್ ನೇತೃತ್ವದ ತಂಡ ಆಗಸ್ಟ್ 18ರಂದು ಪರಾರಿಯಾಗಿದ್ದ ಮೂವರು ಆರೋಪಿಗಳನ್ನೂ ಬಂಧಿಸುವಲ್ಲಿ ಯಶಸ್ವಿಯಾಯಿತು.
ಪ್ರಕರಣದಲ್ಲಿ ಒಟ್ಟು ಆರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ವಿರುದ್ಧ Wಐಔಖ-02/2026-27 ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳಲ್ಲಿ ಮೂವರು ಕಲಬುರಗಿ ಜಿಲ್ಲೆಯ ಜೇವರ್ಗಿ (ಜಿಂಚೋಳಿ) ತಾಲ್ಲೂಕಿನವರಾಗಿದ್ದು, ಇನ್ನೂ ಮೂವರು ತೆಲಂಗಾಣದ ಹೈದರಾಬಾದ್ ಮೂಲದವರಾಗಿದ್ದಾರೆ ಎಂದು ತಿಳಿದುಬಂದಿದೆ.
ಆರೋಪಿಗಳು ವನ್ಯಜೀವಿ ಬೇಟೆಗೆ ಬಳಸಿದ್ದ ಅತ್ಯಾಧುನಿಕ ಲಾಂಗ್ ರೇಂಜ್ ರೈಫಲ್ ಸೇರಿದಂತೆ ಎರಡು ನಾಲ್ಕು ಚಕ್ರದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಕುರಿತು ಬೀದರ್ ವಲಯ ಅರಣ್ಯಾಧಿಕಾರಿ ಪ್ರವೀಣಕುಮಾರ ಮೊರೆ ಅವರು ತನಿಖೆ ಮುಂದುವರಿಸಿದ್ದಾರೆ.
ಕೃಷ್ಣಮೃಗವು ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಶೆಡ್ಯೂಲ್-1ರ ಅಡಿಯಲ್ಲಿ ಅತ್ಯುನ್ನತ ರಕ್ಷಣೆ ಪಡೆದಿರುವ ವನ್ಯಜೀವಿಯಾಗಿದ್ದು, ಅದರ ಬೇಟೆ ಅಥವಾ ಹತ್ಯೆ ಗಂಭೀರ ಅಪರಾಧವಾಗಿದೆ. ಇಂತಹ ಪ್ರಕರಣಗಳಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಚೊಂಡಿ ಹಾಗೂ ಮಮದಾಪುರ ತಾಂಡಾದ ಗ್ರಾಮಸ್ಥರು ಸಮಯಪ್ರಜ್ಞೆ ಮೆರೆದು ಮೂವರು ಆರೋಪಿಗಳನ್ನು ಹಿಡಿದು ಪೆÇಲೀಸರಿಗೆ ಒಪ್ಪಿಸಿರುವ ಕಾರ್ಯವನ್ನು ಅರಣ್ಯ ಇಲಾಖೆ ಶ್ಲಾಘಿಸಿದೆ. ವನ್ಯಜೀವಿ ಬೇಟೆ ಅಥವಾ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.