
ಬಳ್ಳಾರಿ, ಜು. ೩೦- ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಜನರು ಗುಳೇ ಹೋಗುತ್ತಿದ್ದಾರೆ. ಬೆಳೆಗಳು ಒಣಗುತ್ತಿವೆ. ಈವರೆಗೆ ಬರಗಾಲ ಘೋಷಣೆ ಮಾಡಿಲ್ಲ, ರೈತರ ಪಾಲಿಗೆ ಸರ್ಕಾರ ಸತ್ತು ಹೋಗಿದೆ ಎಂದು ರಾಜ್ಯದ ಪ್ರತಿಪಕ್ಷ ನಾಯಕ ಆರ್ ಅಶೋಕ ಕಿಡಿಕಾರಿದ್ದಾರೆ.
ಅವರು ಇಂದು ಬಳ್ಳಾರಿ ತಾಲೂಕಿನ ಸಿಡಗಿನಮೊಳೆ, ಕಾರೆಕಲ್ಲಿನ ಪಂಪನಗೌಡ ಗ್ರಾಮದಲ್ಲಿನ ರೈತರ ಮಳೆಯಾಶ್ರಿತ ಜಮೀನುಗಳಿಗೆ ತೆರಳಿ ಬಿತ್ತಿದ ತೊಗರಿ ಬೆಳೆಯನ್ನು ವೀಕ್ಷಿಸಿದರು. ರೈತರು ಒಣಗುತ್ತಿರುವ ಬೆಳೆಯನ್ನು ಕಿತ್ತು ತೋರಿಸಿ ತಕ್ಷಣ ಬರ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.
ಬಳಿಕ ಮಾತನಾಡಿದ ಅಶೋಕ ಅವರು ಬೆಳೆ ಒಣಗುತ್ತಿದೆ. ಕುಡಿಯುವ ನೀರಿಗೆ ಹಾಹಾಕಾರ ಇದೆ.
ಬಿತ್ತನೆ ಮಾಡಿ ೫೦ ದಿನ ಆಗಿದೆ, ರೈತರು ಜಮೀನಿನಕಡೆ ಬರದೆ ಸಂಕಷ್ಟದಲ್ಲಿದ್ದಾರೆ ರಾಜ್ಯ ಸರ್ಕಾರ ಈ ವೇಳೆಗೆ ಪರಿಹಾರ ಘೋಷಣೆ ಮಾಡಬೇಕಿತ್ತು.
ಆದರೆ ಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಅವರು ದೆಹಲಿಯಲ್ಲಿ ಅಲೆಯುತ್ತಿದ್ದಾರೆ. ಒಂದು ಕಡೆ ಕಾವೇರಿ ನೀರಿನ ಆತಂಕ ಇದೆ. ಸಚಿವರು , ಡಿಸಿಯವರು ಬರ ಪರಿಶೀಲನೆಗೆ ಬಂದಿಲ್ಲ. ಶಾಸಕರಿಗೆ ಸಚಿವಸ್ಥಾನ ಬೇಕಿದೆ ಅವರಿಗೆ ರೈತರ ಸಂಕಷ್ಟ ಬೇಕಿಲ್ಲ. ರೈತರ ಪಾಲಿಗೆ ಸರ್ಕಾರ ಸತ್ತಿದೆಂದರು.
ಪರಿಶೀಲನಾ ತಂಡದ ಸದಸ್ಯರಾದ ಬೈರತಿ ಬಸವರಾಜ್ ಬಿ.ಪಿ.ಹರೀಶ್, ನವೀನ್, ಜನಾರ್ಧನರೆಡ್ಡಿ, ಮತ್ತು ಪಕ್ಷದ ಮುಖಂಡರಾದ ಮಾಜಿ ಸಂಸದ ಸಣ್ಣ ಪಕ್ಕೀರಪ್ಪ, ಎಸ್.ಗುರುಲಿಂಗನಗೌಡ, ಗುತ್ತಿಗನೂರು ವಿರೂಪಾಕ್ಷಗೌಡ, ಅನಿಲ್ ನಾಯ್ಡು, ಜಿ.ಟಿ.ಪಂಪಾಪತಿ ಮೊದಲಾದವರು ಇದ್ದರು.


































