
ಹೊಸದೆಹಲಿ,ಜು.೩೦: ವಿಕಲಚೇತನರ ಹಕ್ಕುಗಳ ಕಾಯ್ದೆ-೨೦೧೬ ರ ಅಡಿಯಲ್ಲಿ ರಾಜ್ಯ ವಿಕಲಚೇತನರ ಆಯುಕ್ತರನ್ನು ತಕ್ಷಣವೇ ನೇಮಕ ಮಾಡದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಮುಂದಿನ ೪ ವಾರಗಳ ಒಳಗಾಗಿ ಈ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯಗಳಿಗೆ ಸ್ಪಷ್ಟ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಹಾಗೂ ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ಅರ್ಜಿಯೊಂದರ ವಿಚಾರಣೆ ವೇಳೆ ಈ ಆದೇಶ ನೀಡಿದೆ. “ಆಯುಕ್ತರ ನೇಮಕದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಅಥವಾ ವಿಳಂಬವನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಲಿದೆ” ಎಂದು ಪೀಠವು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.
ದೆಹಲಿ, ಹರಿಯಾಣ, ರಾಜಸ್ಥಾನ, ಹಿಮಾಚಲ ಪ್ರದೇಶ, ಕರ್ನಾಟಕ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ತಕ್ಷಣವೇ ಸ್ವತಂತ್ರ ಹೊಣೆಗಾರಿಕೆಯುಳ್ಳ ಆಯುಕ್ತರನ್ನು ನೇಮಿಸಬೇಕು.
ಕೇಂದ್ರ ವಿಕಲಚೇತನರ ಮುಖ್ಯ ಆಯುಕ್ತರು ಹಾಗೂ ಇಬ್ಬರು ಹೆಚ್ಚುವರಿ ಆಯುಕ್ತರ ಹುದ್ದೆಗಳನ್ನು ಸಹ ೪ ವಾರಗಳ ಒಳಗಾಗಿ ಭರ್ತಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಲಾಯಿತು.
ಕಟ್ಟಡಗಳ ವಿನ್ಯಾಸ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಹಾಗೂ ಸಹಾಯಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರವೇಶಸಾಧ್ಯತೆಯ ನಿಯಮಗಳನ್ನು ೬ ತಿಂಗಳ ಒಳಗಾಗಿ ಅಂತಿಮಗೊಳಿಸಬೇಕು.
ಕಾಯ್ದೆ ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸಲು ಮತ್ತು ಅದನ್ನು ವಸೂಲಿ ಮಾಡಲು ಸೂಕ್ತ ಕಾನೂನು ಚೌಕಟ್ಟನ್ನು ರೂಪಿಸುವಂತೆ ಕೋರ್ಟ್ ಸೂಚಿಸಿದೆ.
ವಿಕಲಚೇತನರಿಗೆ ಸಮಾಜದಲ್ಲಿ ಸಮಾನ ಅವಕಾಶ ಮತ್ತು ಮೂಲಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಈ ಆದೇಶವು ಅತ್ಯಂತ ಮಹತ್ವದ್ದಾಗಿದೆ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ.


































