
ಬೆಂಗಳೂರು,ಜು.೬:ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಸಂಬಂಧ ಗುರುವಾರ ರಾಜ್ಯ ಚುನಾವಣಾ ಆಯೋಗಕ್ಕೆ ಭೇಟಿ ನೀಡಲು ರಾಜ್ಯ ಕಾಂಗ್ರೆಸ್ ನಿರ್ಧರಿಸಿದೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ ಚರ್ಚಿಸಿ ರಾಜ್ಯ ಚುನಾವಣಾ ಆಯೋಗಕ್ಕೆ ಭೇಟಿ ನೀಡಲಾಗುವುದು ಎಂದರು.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂಬ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ನಾಯಕರ ಆರೋಪ ಶುದ್ಧ ಸುಳ್ಳು ಎಂದು ಹೇಳಿದ ಹರಿಪ್ರಸಾದ್, ಮೈತ್ರಿ ನಾಯಕರೇ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ಕೈಗೊಂಬೆಯಾಗಿದ್ದಾರೆ.ಹೀಗಾಗಿ ಇಲ್ಲದ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ.ಪ್ರಹ್ಲಾದ್ ಜೋಶಿ ಕಾಂಗ್ರೆಸ್ ವಿರುದ್ದ ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ಸರಿಯಲ್ಲ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಎಸ್ ಐಆರ್ ಮೂಲಕ ಸಂವಿಧಾನ ಬುಡಮೇಲು ಮಾಡಲು ಹೊರಟಿದೆ.ಇದಕ್ಕಾಗಿ ಚುನಾವಣಾ ಆಯೋಗವನ್ನು ಬಳಸಿಕೊಳ್ಳುತ್ತಿದೆ. ಸತ್ತವರ ಹೆಸರಲ್ಲೂ ವೋಟ್ ಹಾಕುವಂತಹ ಕೆಲಸವನ್ನು ಬಿಜೆಪಿ ಮಾಡಿದೆ ಎಂದು ಗಂಭೀರ ಆರೋಪ ಮಾಡಿದರು.
ಕಾಂಗ್ರೆಸ್ಸಿನ ಕುಮ್ಮಕ್ಕಿನಿಂದ ಎಸ್ಐಆರ್ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂಬ ಬಿಜೆಪಿ-ಜೆಡಿಎಸ್ ಆರೋಪಗಳಿಗೆ ತಿರುಗೇಟು ನೀಡಿದ ಹರಿಪ್ರಸಾದ್, ಕಾಂಗ್ರೆಸ್ ನಿಂದ ಎಸ್ ಐ ಆರ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಹೊರತು ಯಾವುದೇ ಅಕ್ರಮಗಳನ್ನು ನಡೆಸುತ್ತಿಲ್ಲ ಎಂದು ಹೇಳಿದರು.
ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಇಂತಹ ಪರಿಸ್ಥಿತಿ ಏಕೆ ಬಂತೋ ಅರ್ಥವಾಗುತ್ತಿಲ್ಲ ಎಂದು ವ್ಯಂಗ್ಯವಾಡಿದ ಹರಿಪ್ರಸಾದ್, ಪ್ರಹ್ಲಾದ್ ಜೋಶಿ ಅವರು ಕುಮಾರಸ್ವಾಮಿ ಅವರನ್ನು ಕೇವಲ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ ಮತ್ತು ಅವರನ್ನು ಹರಿಕೆ ಕುರಿಯನ್ನಾಗಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ಪ್ರಾದೇಶಿಕ ಪಕ್ಷಗಳನ್ನು ಒಡೆದು ತನ್ನ ಬೇಳೆ ಬೇಯಿಸಿಕೊಳ್ಳುವುದು ಬಿಜೆಪಿಯ ಹಳೇ ಚಾಳಿ.ಇಡೀ ದೇಶದಲ್ಲಿ ಶಿವಸೇನೆ, ಅಕಾಲಿ ದಳ, ಟಿಎಂಸಿ ಮುಂತಾದ ಪಕ್ಷಗಳನ್ನು ಸೀಳಿದ ಬಿಜೆಪಿ, ಈಗ ಕರ್ನಾಟಕದಲ್ಲಿ ನೇರವಾಗಿ ಕಾಂಗ್ರೆಸ್ ಎದುರಿಸಲು ಸಾಧ್ಯವಾಗದೇ ಜೆಡಿಎಸ್ ಬೆಂಬಲ ಪಡೆದು ಕುತಂತ್ರ ನಡೆಸುತ್ತಿದೆ ಎಂದರು
ರಾಮನಗರದ ಮಸೀದಿ ಹಾಗೂ ಕಾಂಗ್ರೆಸ್ ನಾಯಕರ ಮನೆಗಳಲ್ಲಿ ಮತದಾರರ ನೊಂದಣಿ ಫಾರ್ಮ್ಗಳನ್ನು ತುಂಬಲಾಗುತ್ತಿದೆ ಎಂಬ ಕುಮಾರಸ್ವಾಮಿ ಅವರ ಆರೋಪಕ್ಕೆ ತಿರುಗೇಟು ನೀಡಿದ ಹರಿಪ್ರಸಾದ್,ಕರ್ನಾಟಕದಲ್ಲಿ ಈಗಾಗಲೇ ೫.೬೫ ಕೋಟಿ ಮತದಾರರ ಮ್ಯಾಪಿಂಗ್ ಆಗಿದ್ದು, ಅದರಲ್ಲಿ ಸುಮಾರು ೫೦ ಲಕ್ಷ ಜನರನ್ನು ಕೈಬಿಡುವ ಕೆಲಸ ನಡೆದಿದೆ” ಎಂದು ದೂರಿದರು.
ಬೂತ್ ಓಪನ್ ಆದ ತಕ್ಷಣ ಸತ್ತವರನ್ನು ಸ್ವರ್ಗದಿಂದ ಕರೆತಂದು ಕಳ್ಳ ವೋಟ್ ಹಾಕಿಸುವ ಕರಗತ ವಿದ್ಯೆ ಇರುವುದು ಆರ್ಎಸ್ಎಸ್ ಮತ್ತು ಬಿಜೆಪಿಗೆ ಮಾತ್ರ ಕಾಂಗ್ರೆಸ್ ಎಂದಿಗೂ ಅಡ್ಡದಾರಿ ಹಿಡಿದು ಚುನಾವಣೆ ಗೆಲ್ಲುವ ಪಕ್ಷವಲ್ಲ ಎಂದು ಸ್ಪಷ್ಟಪಡಿಸಿದರು
ರಾಮನಗರದಲ್ಲಿ ಬಾಂಗ್ಲಾದೇಶದವರು ಇದ್ದಾರೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು,ಹಾಗಿದ್ದರೆ ಕಳೆದ ಬಾರಿ ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಅವರು ಒಂದು ಲಕ್ಷ ಮತಗಳ ಅಂತರದಿಂದ ಗೆದ್ದಾಗ ಈ ಬಾಂಗ್ಲಾದೇಶದವರು ಇರಲಿಲ್ಲವೇ? ಎಂದು ಪ್ರಶ್ನಿಸಿದರು
ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್ ಪ್ರಕ್ರಿಯೆಯ ಮೂಲಕ ೯೧ ಲಕ್ಷ ಜನರನ್ನು ಮತಪಟ್ಟಿಯಿಂದ ಕೈಬಿಟ್ಟು, ೨೭ ಲಕ್ಷ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗಿದೆ.ಇದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ. ದೇಶದಲ್ಲಿ ಸಂಪೂರ್ಣ ಬಹುಮತ ಪಡೆದು ಸಂವಿಧಾನವನ್ನು ಬದಲಾಯಿಸುವುದೇ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಅಸಲಿ ಷಡ್ಯಂತ್ರವಾಗಿದೆ ವಿಧಾನ ರಕ್ಷಣೆಯೇ ಕಾಂಗ್ರೆಸ್ನ ಮೂಲ ಕರ್ತವ್ಯವಾಗಿದ್ದು, ಯಾವುದೇ ಒಬ್ಬ ನೈಜ ಮತದಾರನ ಹೆಸರನ್ನು ಪಟ್ಟಿಯಿಂದ ಕೈಬಿಡಲು ನಾವು ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದರು
ಬಡವರು, ಕಾರ್ಮಿಕರು ಮತ್ತು ಸ್ಲಂ ನಿವಾಸಿಗಳು ಇರುವ ಜಾಗಗಳಿಗೆ ಬಿಎಲ್ಓಗಳು ಹೋಗುತ್ತಿಲ್ಲ. ಹಾಗಾಗಿ ಸಮುದಾಯ ಭವನ, ದೇವಸ್ಥಾನ, ಮಸೀದಿ ಹಾಗೂ ಚರ್ಚ್ಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಕಾನೂನುಬದ್ಧವಾಗಿಯೇ ಮತದಾರರ ಅರ್ಜಿಗಳನ್ನು ಭರ್ತಿ ಮಾಡಲು ನಮ್ಮ ಪಕ್ಷದ ಬಿಎಲ್ಎ-೨ ಕಾರ್ಯಕರ್ತರು ಸಹಾಯ ಮಾಡುತ್ತಿದ್ದಾರೆ.
ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಹರಿಪ್ರಸಾದ್ ಸ್ಪಷ್ಟಪಡಿಸಿದರು.ಕುಣಿಯಲು ಬಾರದವಳು ನೆಲ ಡೊಂಕು ಅಂದ ಹಾಗೆ ಬಿಜೆಪಿಯವರ ಸ್ಥಿತಿಯಾಗಿದೆ. ಅವರ ಪಕ್ಷದಲ್ಲೇ ತೀವ್ರ ಗೊಂದಲಗಳಿದ್ದು, ಅದನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದರು.
































