
ಬೆಂಗಳೂರು, ಜು. ೬- ಎಸ್‌ಐಆರ್ ವಿಚಾರದಲ್ಲಿ ಬಿಜೆಪಿ-ಜೆಡಿಎಸ್ ರಾಜಕಾರಣ ಮಾಡುತ್ತಿದ್ದು, ನಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಮಾಡಲಿ, ಎಲುಬಿಲ್ಲದ ನಾಲಿಗೆ ಎಂದು ಕಿಡಿಕಾರಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದಿದ್ದಾರೆ.
ಎಸ್‌ಐಆರ್ ಅಕ್ರಮದ ಬಗ್ಗೆ ಚುನಾವಣಾ ಆಯೋಗಕ್ಕೆ ವಿಪಕ್ಷಗಳು ದೂರು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಎಸ್‌ಐಆರ್ ವಿಚಾರದಲ್ಲಿ ಕೋರ್ಟ್‌ನಲ್ಲೂ ನಾವು ವಾದ ಸಲ್ಲಿಸಿದ್ದೇವೆ. ಎಲ್ಲರಿಗೂ ಮತದಾನದ ಹಕ್ಕು ಕೊಡಬೇಕಿದೆ. ಚುನಾವಣಾ ಆಯೋಗದ ಮಾರ್ಗದರ್ಶನದಲ್ಲಿ ನಮ್ಮವರು ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಈ ವಿಚಾರದಲ್ಲಿ ಮಧ್ಯೆ ಪ್ರವೇಶ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಪಕ್ಷದ ವತಿಯಿಂದ ನಾವು ಎಸ್‌ಐಆರ್ ಬಗ್ಗೆ ದೊಡ್ಡಮಟ್ಟದ ಜಾಗೃತಿ ಮೂಡಿಸಿರುವುದು ಬಿಜೆಪಿ-ಜೆಡಿಎಸ್‌ನವರಿಗೆ ಆತಂಕ ತಂದಿದೆ ಎಂದು ಹೇಳಿದರು.
ಎಲ್ಲರಿಗೂ ಮತದಾನದ ಹಕ್ಕು ಸಿಗುವಂತೆ ನೋಡಿಕೊಳ್ಳಲು ಎಲ್ಲಾ ರೀತಿಯ ಪ್ರಮಾಣ ಪತ್ರಗಳನ್ನು ಕೊಡುತ್ತಿದ್ದೇವೆ. ಬಡವರಿಗೆ ತೊಂದರೆಯಾಗಬಾರದು ಎಂಬುದು ನಮ್ಮ ಉದ್ದೇಶ. ಬಾಂಗ್ಲಾ ದೇಶೀಯವರ ಬಗ್ಗೆ ಮಾತನಾಡುವ ಬಿಜೆಪಿ-ಜೆಡಿಎಸ್ ಅಧಿಕಾರದಲ್ಲಿದ್ದಾಗ ಅವರನ್ನು ಏಕೆ ಓಡಿಸಲಿಲ್ಲ ಎಂದು ಪ್ರಶ್ನಿಸಿದರು.
ಮೊದಲ ಬಾರಿಗೆ ನಾವು ಸಹಾಯವಾಣಿ ತೆರೆದಿದ್ದೇವೆ. ಚುನಾವಣಾ ಆಯೋಗದವರು ಬಂದು ಪರಿಶೀಲಿಸಲಿ. ರಾಜಕಾರಣ ಮಾಡುವವರಿಗೆ ಬೇಡ ಎನ್ನಲು ಆಗಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ನಾನು ನಮ್ಮ ಪಕ್ಷದವರಿಗೆ ಬಹಳ ಎಚ್ಚರಿಕೆಯಿಂದ ಇರುವಂತೆ ಹೇಳಿದ್ದೇನೆ. ಬಹಳ ಎಚ್ಚರಿಕೆಯಿಂದ ಎಸ್‌ಐಆರ್ ಮಾಡುತ್ತಿದ್ದೇವೆ ಎಂದು ಹೇಳಿದರು.
































