Home ಮುಖಪುಟ ಸುದ್ದಿ ಬಿಎಂಟಿಸಿ ಬಸ್‌ಗಳ ಡಿಕ್ಕಿ:೧೩ ಮಂದಿಗೆ ಗಾಯ

ಬಿಎಂಟಿಸಿ ಬಸ್‌ಗಳ ಡಿಕ್ಕಿ:೧೩ ಮಂದಿಗೆ ಗಾಯ

ಬೆಂಗಳೂರು,ಜು.೪-ವಿಧಾನಸೌಧಕ್ಕೆ ಕೂಗಳತೆ ದೂರದ ಕೆ ಆರ್ ಸರ್ಕಲ್ (ಕೃಷ್ಣರಾಜೇಂದ್ರ ವೃತ್ತ) ಬಳಿ ಇಂದು ಬೆಳಿಗ್ಗೆ ಎರಡು ಬಿಎಂಟಿಸಿ ಬಸ್‌ಗಳ ನಡುವೆ ಡಿಕ್ಕಿ ಸಂಭವಿಸಿ ೧೩ ಮಂದಿ ಗಾಯಗೊಂಡಿದ್ದಾರೆ, ಅಪಘಾತದಿಂದ ಸುತ್ತಮುತ್ತಲಿನ ರಸ್ತೆಗಳಲ್ಲಿ ೧ ಗಂಟೆಗೂ ಹೆಚ್ಚು ಕಾಲ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರು ಪರದಾಡಿದರು. ಅಪಘಾತದಲ್ಲಿ ಗಾಯಗೊಂಡವರನ್ನು ಬಸ್ ನಿಂದ ಹೊರತೆಗೆಯಲು ಹರಸಾಹಸ ಪಡಬೇಕಾಯಿತು.ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಇಂದು ಬೆಳಗ್ಗೆ ೮.೪೦ ರ ಸುಮಾರಿನಲ್ಲಿ ಅತ್ತಿಬೆಲೆಗೆ ಹೋಗುತ್ತಿದ್ದ ಒಎಚ್‌ಎಂ ಮೊಬಾಲಿಟಿ ಬಿಎಂಟಿಸಿ ಬಸ್ ಕೆಆರ್‌ಸರ್ಕಲ್ ಬಳಿ ಹೋಗುತ್ತಿದ್ದಾಗ ಸಿಗ್ನಲ್ ಬಿದ್ದ ಕಾರಣ ನಿಲ್ಲುತ್ತಿದ್ದಂತೆ ಹಿಂದಿನಿಂದ ವೇಗವಾಗಿ ಬಂದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಕ್ಕಿ ಹೊಡೆದಿದೆ.


ಎಲೆಕ್ಟಿಕ್ ಬಸ್ ಚಾಲಕ ಹಾಗೂ ಬಸ್‌ನಲ್ಲಿದ್ದ ಯುವತಿಯೊಬ್ಬರಿಗೆ ಗಂಭೀರ ಗಾಯವಾಗಿದ್ದು, ಇಬ್ಬರನ್ನು ಮಾರ್ಥಾಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಬಸ್ ನಿರ್ವಾಹಕ ಹಾಗೂ ಉಳಿದ ಸಣ್ಣಪುಟ್ಟ ಗಾಯಗೊಂಡ ೯ ಪ್ರಯಾಣಿಕರು ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ.


ಅಪಘಾತದ ರಭಸಕ್ಕೆ ವಾಯು ವಜ್ರ ಬಸ್ ಹಿಂಭಾಗಕ್ಕೆ ಎಲೆಕ್ಟಿಕ್ ಬಸ್‌ನ ಮುಂಭಾಗ ಸಿಕ್ಕಿಹಾಕಿಕೊಂಡು ಅಲ್ಲಿ ಸಿಲುಕಿಕೊಂಡ ಪ್ರಯಾಣಿಕರನ್ನು ಹರಸಾಹಸ ಪಟ್ಟು ಹೊರತರಲಾಗಿದೆ.


ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ದಾವಿಸಿ ಪ್ರಯಾಣಿಕರನ್ನು ಬಸ್‌ನಿಂದ ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.


ಅಪಘಾತದಿಂದಾಗಿ ಈ ರಸ್ತೆಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸಂಚಾರ ಪೊಲೀಸರು ಸ್ಥಳದಲ್ಲಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸ್ಥಳಕ್ಕೆ ಕ್ರೇನ್ ತರಿಸಿಕೊಂಡು ಎರಡು ಬಸ್‌ಗಳನ್ನು ಬೇರ್ಪಡಿಸಿ ರಸ್ತೆಯಿಂದ ತೆರವುಗೊಳಿಸಲಾಯಿತು.ಸುದ್ದಿ ತಿಳಿದ ತಕ್ಷಣವೇ ಹಲಸೂರು ಗೇಟ್ ಸಂಚಾರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ಕೈಗೊಂಡು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.


ನಗರದ ಕೆ.ಆರ್.ವೃತ್ತದಲ್ಲಿ ಅಪಘಾತಕ್ಕೀಡಾದ ಒಎಚ್‌ಎಂ ಮೊಬಿಲಿಟಿ ಬಸ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು, ಗಂಭೀರ ಗಾಯಗಳಾಗಿಲ್ಲ ಎಂದು ಬಿಎಂಟಿಸಿ ತಿಳಿಸಿದೆ. ಟಾಟಾ ಸಾರ್ಟ್ ಮೊಬಿಲಿಟಿ ಎಲೆಕ್ನಿಕ್ ಬಸ್‌ನಲ್ಲಿದ್ದ ಐವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.


ಗಾಯಗೊಂಡಿರುವ ಬಸ್‌ನ ಚಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಪಘಾತದ ಮಾಹಿತಿ ದೊರೆಯುತ್ತಿದ್ದಂತೆ ಬಿಎಂಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಹಿರಿಯ ಅಧಿಕಾರಿಗಳು, ಟಾಟಾ ಸಾರ್ಟ್ ಮೊಬಿಲಿಟಿ ಸಂಸ್ಥೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿ ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದ್ದಾರೆ.


ಬಿಎಂಟಿಸಿ ಈ ಘಟನೆ ಕುರಿತಂತೆ ನಿಗಾವಹಿಸಿದ್ದು, ಗಾಯಾಳುಗಳಿಗೆ ಅಗತ್ಯವಿರುವ ಎಲ್ಲಾ ನೆರವು ಹಾಗೂ ಸಹಕಾರವನ್ನುಒದಗಿಸುತ್ತಿದ್ದು, ಅಪಘಾತಕ್ಕೆ ನಿಖರ ಕಾರಣ ಏನು ಎಂಬುದರ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.


ಅಪಘಾತಗೊಂಡ ಬಸ್‌ಗಳನ್ನು ರಸ್ತೆಯಿಂದ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಬ್ರೇಕ್ ವೈಫಲ್ಯದಿಂದ ಈ ಅಪಘಾತ ಸಂಭವಿಸಿದೆಯೇ ಅಥವಾ ಚಾಲಕನ ನಿರ್ಲಕ್ಷ್ಯವೇ ಕಾರಣವೇ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.


ಬಸ್ ಕಾರಿಗೆ ಡಿಕ್ಕಿ:


ಇನ್ನೊಂದೆಡೆ ವಿಧಾನಸೌಧ ಸಿಗ್ನಲ್ ಬಳಿ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಕಾರಿನ ಹಿಂಭಾಗ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಮೂವರು ಬಚಾವ್ ಆಗಿದ್ದಾರೆ. ಘಟನಾ ಸ್ಥಳಕ್ಕೆ ಕಬ್ಬನ್ಪಾ ರ್ಕ್ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.