
ನವದೆಹಲಿ.ಜು೪: ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಭಾರತ ವಿರೋಧಿ ಕೃತ್ಯಗಳ ವಿರುದ್ಧ ’ಶೂನ್ಯ ಸಹನೆ’ ಧೋರಣೆಯನ್ನು ಮುಂದುವರಿಸಿರುವ ಕೇಂದ್ರ ಗೃಹ ಸಚಿವಾಲಯವು, ಇಂದು ಮಹತ್ವದ ಆದೇಶವೊಂದನ್ನು ಹೊರಡಿಸಿದೆ.
ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ ನಿಷೇಧಿತ ಸಂಘಟನೆಗಳಿಗೆ ಸೇರಿದ, ಪಾಕಿಸ್ತಾನ ಮೂಲದ ೨೩ ಪ್ರಮುಖ ವ್ಯಕ್ತಿಗಳನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿಯಲ್ಲಿ ’ಭಯೋತ್ಪಾದಕರು’ ಎಂದು ಘೋಷಿಸಿ ಗಜೆಟ್ ಅಧಿಸೂಚನೆ ಹೊರಡಿಸಿದೆ.
ಇದರೊಂದಿಗೆ ಯುಎಪಿಎ ಕಾಯ್ದೆಯಡಿ ವೈಯಕ್ತಿಕವಾಗಿ ಉಗ್ರರೆಂದು ಘೋಷಿಸಲ್ಪಟ್ಟವರ ಒಟ್ಟು ಸಂಖ್ಯೆ ೮೦ಕ್ಕೆ ಏರಿಕೆಯಾಗಿದೆ.ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ೨೦೧೬ರ ನಗ್ರೋಟಾ ಸೇನಾ ಶಿಬಿರದ ಮೇಲಿನ ದಾಳಿ ಹಾಗೂ ೨೦೧೮ರ ಸುಂಜ್ವಾನ್ ಸೇನಾ ನೆಲೆಯ ಮೇಲಿನ ಭೀಕರ ದಾಳಿಯ ಹಿಂದಿನ ಸಂಚುಗಾರರು ಸೇರಿದ್ದಾರೆ
ಲಷ್ಕರ್ ಸಂಸ್ಥಾಪಕ ಹಾಫಿಜ್ ಮಹಮ್ಮದ್ ಸಯೀದ್ನ ಆಪ್ತರಾದ ರಾಣಾ ಇಫ್ತಿಕಾರ್, ಅಬ್ದುಲ್ ರೌಫ್ ಮತ್ತು ಹಾಫಿಜ್ ಖಾಲಿದ್ ವಾಲೀದ್ನನ್ನು ಉಗ್ರರೆಂದು ಗುರುತಿಸಲಾಗಿದೆ. ಯುವಕರನ್ನು ಉಗ್ರವಾದಕ್ಕೆ ಪ್ರಚೋದಿಸುವುದು ಹಾಗೂ ಉಗ್ರರಿಗೆ ಧನಸಹಾಯ ಸಂಗ್ರಹಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.
ಸುಂಜ್ವಾನ್ ದಾಳಿಯ ಮಾಸ್ಟರ್ಮೈಂಡ್ ಮಸೂದ್ ಇಲ್ಯಾಸ್ ಕಾಶ್ಮೀರಿ, ಮೊಹಮ್ಮದ್ ಮುಸಾದಿಕ್ ಸೇರಿದಂತೆ ಮುಫ್ತಿ ಮೊಹಮ್ಮದ್ ಅಸ್ಗರ್ ಖಾನ್, ಹಾಫಿಜ್ ಅಬ್ದುಲ್ ಶಕೂರ್ ಮತ್ತು ಅಬ್ದುಲ್ಲಾ ಜೆಹಾದಿ ಮುಂತಾದ ೮ ಜನರನ್ನು ಪಟ್ಟಿಗೆ ಸೇರಿಸಲಾಗಿದೆ.
ಗಡಿ ನುಸುಳುವಿಕೆ ಉಸ್ತುವಾರಿ ಫಿರ್ದೌಸ್ ಅಹ್ಮದ್ ಭಟ್, ಶಸ್ತ್ರಾಸ್ತ್ರ ಸರಬರಾಜುದಾರ ಬಿಲಾಲ್ ಅಹ್ಮದ್ ಮೀರ್ ಸೇರಿದಂತೆ ಒಟ್ಟು ೧೫ ಜನ ಲಷ್ಕರ್ ಕಡೆಯವರನ್ನು ನಿಷೇಧಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸಲು ಈ ಉಗ್ರರು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಗಡಿಭಾಗದಲ್ಲಿ ಡ್ರೋನ್ಗಳ ಮೂಲಕ ಶಸ್ತ್ರಾಸ್ತ್ರಗಳನ್ನು ರವಾನಿಸುವುದು, ಎನ್ಕ್ರಿಪ್ಟ್ ಮಾಡಿದ ಸಾಮಾಜಿಕ ಜಾಲತಾಣಗಳ ಮೂಲಕ ಕಾಶ್ಮೀರಿ ಯುವಕರನ್ನು ಉಗ್ರ ಸಂಘಟನೆಗಳಿಗೆ ನೇಮಕ ಮಾಡಿಕೊಳ್ಳುವುದು ಮತ್ತು ಅವರಿಗೆ ತರಬೇತಿ ನೀಡುವುದರಲ್ಲಿ ಈ ೨೩ ಜನ ಸಕ್ರಿಯರಾಗಿದ್ದರು ಎಂದು ಗೃಹ ಸಚಿವಾಲಯ ತಿಳಿಸಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆಗೆ ಮುಕ್ತ ಅಧಿಕಾರ
೨೦೧೯ರಲ್ಲಿ ಯುಎಪಿಎ ಕಾಯ್ದೆಗೆ ತಂದ ತಿದ್ದುಪಡಿಯ ಪ್ರಕಾರ, ಕೇವಲ ಸಂಘಟನೆಗಳನ್ನಷ್ಟೇ ಅಲ್ಲದೆ ವೈಯಕ್ತಿಕವಾಗಿಯೂ ಉಗ್ರರೆಂದು ಘೋಷಿಸಲು ಸರ್ಕಾರಕ್ಕೆ ಅಧಿಕಾರವಿದೆ. ಇದರಿಂದಾಗಿ ಎನ್ಐಎ ಸಂಸ್ಥೆಯು ಈ ಉಗ್ರರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು, ಅವರ ಆಸ್ತಿಪಾಸ್ತಿಗಳನ್ನು ಜಪ್ತಿ ಮಾಡಬಹುದು ಮತ್ತು ಜಾಗತಿಕ ಮಟ್ಟದಲ್ಲಿ ಅವರ ಮೇಲಿನ ಶಸ್ತ್ರಾಸ್ತ್ರ ಹಾಗೂ ಪ್ರಯಾಣದ ನಿರ್ಬಂಧಗಳಿಗೆ ಕಠಿಣ ಕ್ರಮ ಕೈಗೊಳ್ಳಬಹುದು.
ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತೊಗೆಯಲು ಕೇಂದ್ರ ಸರ್ಕಾರವು ಈ ವರ್ಷವಷ್ಟೇ ದೇಶದ ಮೊದಲ ಸಮಗ್ರ ರಾಷ್ಟ್ರೀಯ ಭಯೋತ್ಪಾದನಾ ನಿರೋಧಕ ನೀತಿ ಮತ್ತು ಕಾರ್ಯತಂತ್ರವನ್ನು ’ಪ್ರಹಾರ್’ ಹೆಸರಿನಲ್ಲಿ ಜಾರಿಗೆ ತಂದಿದೆ. ಇದರ ಬೆನ್ನಲ್ಲೇ ಪಾಕ್ ಮೂಲದ ೨೩ ಉಗ್ರರ ವಿರುದ್ಧ ಕೈಗೊಂಡಿರುವ ಈ ಆಕ್ರಮಣಕಾರಿ ರಾಜತಾಂತ್ರಿಕ ಮತ್ತು ಕಾನೂನು ಕ್ರಮವು ನೆರೆರಾಷ್ಟ್ರಕ್ಕೆ ಭಾರತ ನೀಡಿದ ಬಲವಾದ ಎಚ್ಚರಿಕೆಯಾಗಿದೆ.




























