
ಮಡಿಕೇರಿ/ಮೈಸೂರು, ಜು.೪ : ಕಳೆದ ಕೆಲ ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು,ಜಿಲ್ಲೆಯ ಹಲವು ಭಾಗಗಳಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ.
ಸದ್ಯ ಕೊಡಗು ಜಿಲ್ಲೆಯಲ್ಲಿ ಮಳೆ ಚುರುಕುಗೊಂಡಿದ್ದು, ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ ಸೇರಿದಂತೆ ಹಲವು ಭಾಗಗಳಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಮಳೆಯ ಜೊತೆಗೆ ಚಳಿ ವಾತಾವರಣವೂ ಹೆಚ್ಚಾಗಿದ್ದು, ಜನರು ಬೆಚ್ಚನೆಯ ಉಡುಪುಗಳನ್ನು ಧರಿಸಿ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಈ ಬಾರಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಭತ್ತ, ಕಾಫಿ ಹಾಗೂ ಇತರ ಬೆಳೆಗಳ ಕೃಷಿಯಲ್ಲಿ ರೈತರು ಉತ್ಸಾಹದಿಂದ ತೊಡಗಿದ್ದು, ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದಾರೆ.
ಇನ್ನು ಜಿಲ್ಲೆಯ ಪ್ರಮುಖ ಜಲಾಶಯವಾದ ಹಾರಂಗಿ ಜಲಾಶಯಕ್ಕೆ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು,ಹಾರಂಗಿ ಜಲಾಶಯಕ್ಕೆ ಇಂದು ೧,೪೭೦ ಕ್ಯೂಸೆಕ್ ಒಳಹರಿವು ಬರುತ್ತಿದ್ದು,ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.ಅಲ್ಲದೆ,ಜಲಾಶಯದ ಗರಿಷ್ಠ ನೀರಿನ ಮಟ್ಟ ೨,೮೫೯ ಅಡಿ ಆಗಿದ್ದು, ಇಂದು ಜಲಾಶಯದಲ್ಲಿ ೨,೮೩೨.೭೨ ಅಡಿ ನೀರು ಸಂಗ್ರಹವಾಗಿದೆ. ಇಂದು ಜಲಾಶಯಕ್ಕೆ ೧,೪೭೯ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ ೧೮೦ ಕ್ಯೂಸೆಕ್ ನೀರನ್ನು ಹೊರಹರಿಸಲಾಗುತ್ತಿದೆ.
ಇದಲ್ಲದೆ, ಜಲಾಶಯದ ಒಟ್ಟು ನೀರು ಸಂಗ್ರಹ ಸಾಮರ್ಥ್ಯ ೮.೫ ಟಿಎಂಸಿ ಆಗಿದ್ದು, ಪ್ರಸ್ತುತ ೨.೭ ಟಿಎಂಸಿ ನೀರು ಸಂಗ್ರಹವಾಗಿದ್ದು, ಹಾರಂಗಿ ಜಲಾಶಯದ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ರೈತರು ಕೂಡ ಉತ್ತಮ ಮಳೆಯ ನಿರೀಕ್ಷೆಯಲ್ಲಿ ಕೃಷಿ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ.
ಈ ನಡುವೆ ನಿರಂತರ ಮಳೆಯ ಪರಿಣಾಮ ಕಾವೇರಿ ನದಿಯ ನೀರಿನ ಮಟ್ಟವೂ ನಿಧಾನವಾಗಿ ಏರಿಕೆಯಾಗುತ್ತಿದ್ದು, ಹಾರಂಗಿ ಜಲಾಶಯಕ್ಕೂ ಒಳಹರಿವಿನ ಪ್ರಮಾಣದಲ್ಲಿ ಕೊಂಚ ಏರಿಕೆ ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆಯಾದರೆ ಜಲಾಶಯದ ನೀರಿನ ಮಟ್ಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
೭ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ
ರಾಜ್ಯದಲ್ಲಿ ಮುಂಗಾರು ಬಿರುಸು ಪಡೆಯುವ ಸಾಧ್ಯತೆಯಿದ್ದು,ಹಲವು ಜಿಲ್ಲೆಗಳಲ್ಲಿ ಮುಂದಿನ ೨-೩ ದಿನ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಸದ್ಯ ರಾಜ್ಯದ ಹಲವೆಡೆ ಈಗಾಗಲೇ ಉತ್ತಮ ಮಳೆಯಾಗುತ್ತಿದ್ದು, ಇನ್ನು ಸಿಲಿಕಾನ್ ಸಿಟಿ ಬೆಂಗಳೂರು ನಗರದಾದ್ಯಂತ ತುಂತುರು ಮಳೆ ಜೊತೆಗೆ ತಣ್ಣನೆ ಗಾಳಿ ಬೀಸುತ್ತಿರುವ ಪರಿಣಾಮ ತಂಪಾದ ವಾತಾವರಣ ನಿರ್ಮಾಣವಾಗಿದೆ.
ಇನ್ನು ೭ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಹಾಗೂ ೩ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಅದರಲ್ಲೂ ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಮಳೆ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.




























