
ಕಲಬುರಗಿ,ಜೂ 25: ಹರಿದಾಸ ಸಾಹಿತ್ಯದ ಆದ್ಯ ಪ್ರವರ್ತಕರಾದ ಶ್ರೀಪಾದರಾಜರ ಆರಾಧನೆಯ ನಿಮಿತ್ಯ ದಾಸ ಸಾಹಿತ್ಯ ಸಾಂಸ್ಕøತಿಕ ಪ್ರತಿಷ್ಠಾನ ಟ್ರಸ್ಟ್, ಜೂನ್ 28 ರಂದು ದಾಸ ಸಾಹಿತ್ಯ ದಿನ ವನ್ನು ಆಚರಿಸಲು ನಿರ್ಧರಿಸಿದೆ.
ಇಲ್ಲಿಯ ಕರುಣೇಶ್ವರ ನಗರದ ಶ್ರೀ ಜೈವೀರ ಹನುಮಾನ್ ದೇವಸ್ಥಾನದ ಸಭಾಗೃಹದಲ್ಲಿ ಸಂಜೆ 6 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಹರಿದಾಸ ಸಾಹಿತ್ಯ ಸಂಪದ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಖ್ಯಾತ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾರರೂ, ನಿವೃತ್ತ ಐ.ಎ.ಎಸ್. ಅಧಿಕಾರಿಗಳೂ ಆದ ಡಾ.ಮುದ್ದುಮೋಹನ ಅವರು ಚೊಚ್ಚಿಲ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಮಾರಂಭದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಡಾ.ಮುದ್ದುಮೋಹನ ಅವರು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸುವರು. ಸೌಖ್ಯಾ ಪ್ರವೀಣ ಕುಲಕರ್ಣಿ ಅವರ ನಿರ್ದೇಶನದಲ್ಲಿ ನೂಪುರ ನೃತ್ಯ ಸಂಗೀತ ಸಂಸ್ಥೆಯ ಕಲಾವಿದರು ದಾಸರ ಕೀರ್ತನೆಗಳ ಆಧಾರಿತ ನೃತ್ಯವನ್ನು ಪದರ್ಶಿಸುವರು. ವ್ಯಾಸರಾಜ ಸಂತೆಕೆಲ್ಲೂರ ಅವರು ದಾಸ ಸಾಹಿತ್ಯಕ್ಕೆ ಶ್ರೀಪಾದರಾಜರ ಕೊಡುಗೆಕುರಿತು ವಿಚಾರ ಮಂಡಿಸುವರು. ವಿಶ್ವ ಹಿಂದೂ ಪರಿಷತ್, ಕರ್ನಾಟಕ ಉತ್ತರ ಪ್ರಾಂತದ ಅಧ್ಯಕ್ಷ ಲಿಂಗರಾಜ ಬಸವರಾಜಪ್ಪ ಅಪ್ಪಾ ಅವರು ಮುಖ್ಯ ಅತಿಥಿಗಳಾಗಿದ್ದು ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀನಿವಾಸ ಸಿರನೂರಕರ್ ಅವರು ಅಧ್ಯಕ್ಷತೆ ವಹಿಸುವರು. ಪ್ರತಿಷ್ಠಾನದ ಗೌರವಾಧ್ಯಕ್ಷರೂ, ಹಿರಿಯ ಲೇಖಕರೂ ಆದ ಡಾ.ಸ್ವಾಮಿರಾವ ಕುಲಕರ್ಣಿ ಮತ್ತು ಖಜಾಂಚಿಗಳಾದ ಕೆ.ಪಿ. ಗಿರಿಧರ ಉಪಸ್ಥಿತರಿರುವರು. ಸಂಗೀತ ಕಲಾಸಕ್ತರು ಈ ಸಮಾರಂಭದಲ್ಲಿ ಪಾಲ್ಗೊಳ್ಳಬೇಕೆಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿಗಳಾದ ನಾರಾಯಣ ಕುಲಕರ್ಣಿ ಅವರು ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.
























