Home ಜಿಲ್ಲೆ ‘ನನ್ನ ಕುಟುಂಬ, ನಮ್ಮ ಮನೆಗಿಡ’ ಅಭಿಯಾನಕ್ಕೆ ಚಾಲನೆ

‘ನನ್ನ ಕುಟುಂಬ, ನಮ್ಮ ಮನೆಗಿಡ’ ಅಭಿಯಾನಕ್ಕೆ ಚಾಲನೆ

ಯಾದಗಿರಿ:ಜೂ.೧೭: ನಗರವನ್ನು ಹಸಿರುಮಯವಾಗಿಸುವ ಮಹತ್ವದ ಉದ್ದೇಶದೊಂದಿಗೆ ಯಾದಗಿರಿ ನಗರಸಭೆ ವಿನೂತನ ಪರಿಸರ ಅಭಿಯಾನಕ್ಕೆ ಮುಂದಾಗಿದೆ. ನಗರದ ಉದ್ಯಾನವನಗಳ ಅಭಿವೃದ್ಧಿ ಹಾಗೂ ಹಸಿರೀಕರಣಕ್ಕೆ ಸಾರ್ವಜನಿಕರ ಸಹಭಾಗಿತ್ವ ಪಡೆಯುವ ನಿಟ್ಟಿನಲ್ಲಿ ‘ನನ್ನ ಕುಟುಂಬ, ನಮ್ಮ ಮನೆಗಿಡ’ ಎಂಬ ವಿಶೇಷ ಕಾರ್ಯಕ್ರಮವನ್ನು ಹಂತ ಹಂತವಾಗಿ ಜಾರಿಗೆ ತರಲಾಗುತ್ತಿದೆ.

ನಗರದ ಲಕ್ಷ್ಮೀ ನಗರದಲ್ಲಿರುವ ಸಾರ್ವಜನಿಕ ಉದ್ಯಾನವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು ಸಸಿ ನೆಡುವ ಮೂಲಕ ಅಭಿಯಾನಕ್ಕೆ ಸಾಂಕೇತಿಕ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು, ಪರಿಸರ ಸಂರಕ್ಷಣೆಯೇ ಆರೋಗ್ಯಕರ ಬದುಕಿನ ಮೂಲಾಧಾರವಾಗಿದೆ. ಮರ-ಗಿಡಗಳನ್ನು ಉಳಿಸಿ ಬೆಳೆಸಿದರೆ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ಕಲ್ಪಿಸಲು ಸಾಧ್ಯ ಎಂದು ಹೇಳಿದರು.

ಪ್ರತಿಯೊಬ್ಬರೂ ತಮ್ಮ ತಮ್ಮ ಬಡಾವಣೆಗಳಲ್ಲಿರುವ ಉದ್ಯಾನವನಗಳಲ್ಲಿ ಸಸಿಗಳನ್ನು ನೆಟ್ಟು, ಅವುಗಳ ಪಾಲನೆ ಮತ್ತು ಪೋಷಣೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಸಸಿಗಳನ್ನು ಕೇವಲ ಗಿಡಗಳಾಗಿ ನೋಡದೆ ಕುಟುಂಬದ ಸದಸ್ಯರಂತೆ ಕಾಳಜಿ ವಹಿಸಿ ಬೆಳೆಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ಪರಿಸರದ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಇಂತಹ ಅಭಿಯಾನಗಳ ಮೂಲಕ ಹೊಸ ಪೀಳಿಗೆಯಲ್ಲಿ ಪರಿಸರ ಪ್ರೇಮ ಬೆಳೆಸಿ ಯಾದಗಿರಿ ಜಿಲ್ಲೆಯನ್ನು ಹಸಿರು ಜಿಲ್ಲೆಯನ್ನಾಗಿ ರೂಪಿಸುವ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.

ನಗರಸಭೆ ಪೌರಾಯುಕ್ತ ಉಮೇಶ್ ಚವ್ಹಾಣ ಮಾತನಾಡಿ, ನಗರದ ಒಟ್ಟು ಹತ್ತು ಉದ್ಯಾನವನಗಳಲ್ಲಿ ಈ ವಿಶೇಷ ಅಭಿಯಾನವನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪ್ರತಿ ಉದ್ಯಾನವನದಲ್ಲಿ ಕನಿಷ್ಠ ೫೦ ಸಸಿಗಳನ್ನು ಅಲ್ಲಿನ ನಿವಾಸಿಗಳ ಸಹಕಾರದಿಂದ ನೆಡಲಾಗುವುದು. ನೆಟ್ಟ ಪ್ರತಿಯೊಂದು ಸಸಿಗೂ ಜವಾಬ್ದಾರಿ ವಹಿಸುವ ಕುಟುಂಬದ ಹೆಸರನ್ನು ಗುರುತಿಸಿ, ಅದರ ನಿರ್ವಹಣೆಯ ಹೊಣೆಗಾರಿಕೆಯನ್ನು ಅವರಿಗೆ ನೀಡಲಾಗುವುದು ಎಂದು ಹೇಳಿದರು.

ಸಾರ್ವಜನಿಕರ ಸಹಭಾಗಿತ್ವದಿಂದ ನಗರದಲ್ಲಿ ಹಸಿರು ವಾತಾವರಣ ನಿರ್ಮಾಣ ಮಾಡುವುದರ ಜೊತೆಗೆ ಉದ್ಯಾನವನಗಳ ಸಂರಕ್ಷಣೆಗೆ ಹೊಸ ಮಾದರಿ ರೂಪಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ಸಿಬ್ಬಂದಿ ಶಿವಪುತ್ರ ಸೇರಿದಂತೆ ಲಕ್ಷ್ಮೀ ನಗರದ ನೂರಾರು ನಿವಾಸಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.