Home ಮುಖಪುಟ ಸುದ್ದಿ ‘ನಾನು ಕಾಂಗ್ರೆಸ್‌ನ ಸಾಮಾನ್ಯ ಸಿಪಾಯಿ, ಸಚಿವ ಸ್ಥಾನ ಬೇಕಿಲ್ಲ

‘ನಾನು ಕಾಂಗ್ರೆಸ್‌ನ ಸಾಮಾನ್ಯ ಸಿಪಾಯಿ, ಸಚಿವ ಸ್ಥಾನ ಬೇಕಿಲ್ಲ

ಬೆಂಗಳೂರು,ಜೂ.೪: “ನಾನು ಅಧಿಕಾರಕ್ಕೆ ಆಸೆ ಬಿದ್ದವನಲ್ಲ, ಕಾಂಗ್ರೆಸ್ ಪಕ್ಷದ ಸಾಮಾನ್ಯ ಸಿಪಾಯಿ. ನನಗೆ ಸಚಿವ ಸ್ಥಾನವಾಗಲಿ, ಬೇರೆ ಯಾವುದೇ ಪದವಿಯಾಗಲಿ ಮುಖ್ಯವಲ್ಲ,” ಎಂದು ನೂತನ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಿ.ಕೆ. ಹರಿಪ್ರಸಾದ್ ಇಂದು ಮಾಧ್ಯಮಗಳೊಂದಿಗೆ ಮಾತನಾಡಿ ಅವರು, ಪಕ್ಷದ ಆಂತರಿಕ ವಿದ್ಯಮಾನಗಳು, ಮುಂಬರುವ ಸವಾಲುಗಳು ಮತ್ತು ಸಂಘಟನೆಯ ಕುರಿತು ಅತ್ಯಂತ ಖಡಕ್ ಆಗಿ ತಮ್ಮ ನಿಲುವುಗಳನ್ನು ಹಂಚಿಕೊಂಡಿದ್ದಾರೆ.

ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಹಾಗೂ ಅಧಿಕಾರಕ್ಕಾಗಿ ಹಾತೊರೆಯುತ್ತಿರುವ ನಾಯಕರ ಕುರಿತು ಹರಿಪ್ರಸಾದ್ ಕಠಿಣ ಸಂದೇಶ ರವಾನಿಸಿದ್ದಾರೆ.
“ಯಾರಿಗೆ ಅಧಿಕಾರ ಮತ್ತು ಸ್ಥಾನಮಾನಗಳು ಬೇಕೋ, ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜೊತೆಗೆ ಹೋಗಿ. ಆದರೆ, ಯಾರಿಗೆ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸದೃಢವಾಗಿ ಬೆಳೆಸಬೇಕೆಂಬ ಆಸೆ ಇದೆಯೋ, ಅವರೆಲ್ಲರೂ ನನ್ನೊಂದಿಗೆ ಬನ್ನಿ. ಸಂಘಟನೆ ಮತ್ತು ಸರ್ಕಾರವನ್ನು ಸಮನ್ವಯತೆಯಿಂದ ಹಂಚಿಕೊಂಡು ನಾವು ಮುಂದೆ ಸಾಗೋಣ,” ಎಂದು ಕರೆ ನೀಡಿದರು.


೨೦೨೮ರ ವಿಧಾನಸಭಾ ಚುನಾವಣೆಗೆ ತಾವೇ ಮುಖ್ಯಮಂತ್ರಿ ಅಭ್ಯರ್ಥಿ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, “ಇದೆಲ್ಲವೂ ವಾಟ್ಸಾಪ್ ಯೂನಿವರ್ಸಿಟಿಯಿಂದ ಹರಡುತ್ತಿರುವ ಅಪಪ್ರಚಾರ. ನನಗೆ ಪಕ್ಷ ಕಟ್ಟುವ ಮತ್ತು ಸಿದ್ಧಾಂತವನ್ನು ಉಳಿಸುವ ಜವಾಬ್ದಾರಿ ಇದೆಯೇ ಹೊರತು, ಸಿಎಂ ಗದ್ದುಗೆಯ ಆಸೆಯಿಲ್ಲ,” ಎಂದು ಸ್ಪಷ್ಟಪಡಿಸಿದರು.


ವರಿಷ್ಠರ ನಂಬಿಕೆ: “ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಸೇರಿದಂತೆ ವರಿಷ್ಠರು ನನ್ನ ಮೇಲಿಟ್ಟಿರುವ ನಂಬಿಕೆಗೆ ನಾನು ಚಿರಋಣಿಯಾಗಿದ್ದೇನೆ. ವಿದ್ಯಾರ್ಥಿ ದೆಸೆಯಿಂದ, ಭಾರತ ಸೇವಾದಳದಿಂದ ಹಿಡಿದು ಎನ್‌ಎಸ್‌ಯುಐವರೆಗೆ ಪಕ್ಷಕ್ಕಾಗಿ ದುಡಿದಿದ್ದೇನೆ. ಬ್ಲಾಕ್ ಮಟ್ಟದಿಂದ ರಾಷ್ಟ್ರ ಮಟ್ಟದವರೆಗಿನ ನನ್ನ ಅನುಭವವನ್ನು ಕರ್ನಾಟಕದಲ್ಲಿ ಪಕ್ಷದ ಬಲವರ್ಧನೆಗೆ ಬಳಸಿಕೊಳ್ಳುತ್ತೇನೆ.”

ನಾನು ಮುಂದುವರಿದವರಿಗಿಂತ ಮುಂದುವರಿದವನು: “ನಾನು ಹಿಂದುಳಿದ ವರ್ಗ ಅಥವಾ ಮುಂದುವರಿದ ವರ್ಗಕ್ಕೆ ಸೇರಿದವನು ಎನ್ನುವುದಕ್ಕಿಂತ, ಮುಂದುವರಿದವರಿಗಿಂತಲೂ ಬಹಳಷ್ಟು ಮುಂದುವರಿದವನು. ಜಾತಿಗಿಂತ ಪಕ್ಷದ ಸಿದ್ಧಾಂತ ಮತ್ತು ಸಂವಿಧಾನವನ್ನು ಕಾಪಾಡುವುದು ಮುಖ್ಯ.”ಕರ್ನಾಟಕ ಮಾಡೆಲ್ ನಮ್ಮ ಹೆಮ್ಮೆ: “ದೇಶ ಇಂದು ಕವಲುದಾರಿಯಲ್ಲಿದೆ. ನಮಗೆ ಗುಜರಾತ್ ಮಾಡೆಲ್ ಅಗತ್ಯವಿಲ್ಲ, ನಮ್ಮ ಹೆಮ್ಮೆಯ ಕರ್ನಾಟಕ ಮಾಡೆಲ್ ನಮಗೆ ಸಾಕು. ಮಹಾತ್ಮ ಗಾಂಧೀಜಿಯವರ ಸರ್ವಧರ್ಮ ಸಮಭಾವದ ತತ್ವದಡಿ ನಾವು ಮುನ್ನಡೆಯುತ್ತೇವೆ.”


ಬೀದಿಗಿಳಿದು ಹೋರಾಟ: “ರಾಜ್ಯದಲ್ಲಿ ಎಸ್‌ಐಆರ್ (SIಖ) ತಂದು ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕತ್ತರಿಸುವ ಹುನ್ನಾರ ನಡೆಯುತ್ತಿದೆ. ಇದರ ವಿರುದ್ಧ ಹಾಗೂ ಸಿಎಎ ವಿರುದ್ಧ ನಾವು ಬೀದಿಗಿಳಿದು ಹೋರಾಟ ಮಾಡಲಿದ್ದೇವೆ.”ರಾಜ್ಯ ಸರ್ಕಾರ ಮತ್ತು ಸಂಘಟನೆ ಒಟ್ಟಾಗಿ ಸಾಗಲಿದೆ ಎಂದ ಅವರು, “ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿದ್ದಾರೆ, ಜಿ. ಪರಮೇಶ್ವರ್ ಅವರು ಉಪಮುಖ್ಯಮಂತ್ರಿಯಾಗಿದ್ದಾರೆ. ನಾವೆಲ್ಲರೂ ಸೇರಿ ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ಯುತ್ತೇವೆ. ಕಾರ್ಯಕರ್ತರಿಗೆ ಯಾವುದೇ ತೊಂದರೆಯಾದರೂ ನಾನು ಅವರ ಬೆನ್ನಿಗೆ ನಿಲ್ಲುತ್ತೇನೆ,” ಎಂದು ಭರವಸೆ ನೀಡಿದರು.


ದೆಹಲಿಗೆ ತೆರಳಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದ ಬಳಿಕ ಅಧಿಕೃತವಾಗಿ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡುವುದಾಗಿ ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ.