
ಸಂಜೆವಾಣಿ ವಾರ್ತೆ
ಸಿರುಗುಪ್ಪ:ಜೂ,4- ತಾಲೂಕಿನ ತೆಕ್ಕಲಕೋಟೆ ಸುತ್ತಲೂ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ‘ಭಾರತ ಶ್ರೀ’ ಶಾಸನಗಳ ಡಿಜಿಟಲೀಕರಣದ ಸಂದರ್ಭದಲ್ಲಿ ನಿಟ್ಟೂರು ಗ್ರಾಮದಲ್ಲಿ ವಿಜಯನಗರ ಕಾಲದ ನಿಲುವುಗಲ್ಲು ಶಾಸನ ಪತ್ತೆಯಾಗಿದೆ.
ನಿಟ್ಟೂರು ಗ್ರಾಮದ ಆಂಜನೇಯ ದೇವಸ್ಥಾನದ ಮುಂದೆ ಇರುವ ನಿಲುವುಗಲ್ಲು ಶಾಸನದ ಅರ್ಧ ಭಾಗ ಭೂಮಿಯಲ್ಲಿ ಹೂತು ಹೋಗಿದ್ದು ಉಳಿದರ್ಧ ಕಂಡುಬರುತ್ತಿದೆ ಎಂದು ಭಾರತೀಯ ಪುರಾತತ್ವ ಇಲಾಖೆಯ ಸಹಾಯಕ ಅಧೀಕ್ಷಕ, ಶಾಸನತಜ್ಞ ಅನಿಲ್ ಕುಮಾರ್ ಆರ್. ವಿ. ತಿಳಿಸಿದ್ದಾರೆ.
ಈಗಾಗಲೇ ಭಾರತೀಯ ಪುರಾತತ್ವ ಇಲಾಖೆಯಲ್ಲಿ ದಾಖಲಾಗಿರುವ ನಿಟ್ಟೂರು ಹಾಗೂ ಉಡೇಗೋಳ ಗ್ರಾಮಗಳಲ್ಲಿರುವ ಅಶೋಕನ ಕಾಲದ ಶಿಲಾಶಾಸನ, ತೆಕ್ಕಲಕೋಟೆಯ ಬಸವೇಶ್ವರ ದೇವಸ್ಥಾನದ ಮುಂದಿನ ಬಿಜ್ಜಳನ ಕಾಲದ ಶಾಸನ ಹಾಗೂ ಗೌಡ್ರ ಮೂಲೆಯಲ್ಲಿರುವ ಕೆರೆ ದಾನ ಶಾಸನಗಳ ಪಡಿಯಚ್ಚು ತೆಗೆದುಕೊಳ್ಳಲಾಗಿದೆ ಎಂದರು.
‘ಭಾರತಶ್ರೀ’ ಯೋಜನೆಯಡಿ ಇಲ್ಲಿ ದೊರೆತ ಪುರಾತನ ಶಾಸನಗಳನ್ನು ಡಿಜಿಟಲೀಕರಣಗೊಳಿಸಿ, ಅವುಗಳನ್ನು ಸಂರಕ್ಷಿಸಿ ಸಾರ್ವಜನಿಕರಿಗೆ ಹಾಗೂ ಸಂಶೋಧಕರಿಗೆ ಆನ್ಲೈನ್ನಲ್ಲಿ ಲಭ್ಯವಾಗುವಂತೆ ಮಾಡುವುದು ಇದರ ಉದ್ದೇಶ’ ಎಂದು ಹೇಳಿದರು.
ನಿಟ್ಟೂರು ನಿಲುವುಗಲ್ಲು ಶಾಸನ ವಿವರ :
ಲಭ್ಯ ಶಾಸನ 17 ಸಾಲು ಹೊಂದಿದ್ದು, ಉಳಿದ ಭಾಗ ನೆಲದಲ್ಲಿ ಹೂತು ಹೋಗಿದೆ. ಇದರ ಕಾಲಮಾನ ಶಾಲಿವಾಹನ ಶಕ ವರ್ಷ 1465 ಶುಭಕೃತ ಸಂವತ್ಸರ ಭಾದ್ರಪದ ಶುದ್ಧ ಗುರುವಾರ ಎಂದು ನಮೂದಾಗಿದ್ದು ಕ್ರಿ.ಶ. 1543 ಕ್ಕೆ ಹೊಂದುತ್ತದೆ. ಇದು ವಿಜಯನಗರದ ಸದಾಶಿವರಾಯನ ಅಳ್ವಿಕೆಯ ಅವಧಿಯದ್ದಾಗಿದೆ ಎಂದು ತೋರುತ್ತದೆ.
ಈ ಶಾಸನವು ಶ್ರೀವಿಟ್ಟ ಅಡೆಯ ದೇವರ ಅಮೃತ ಪಡಿಗೆ ದಾನ ನೀಡಿದ ಅಂಶ ಒಳಗೊಂಡಿದೆ.
ಅಚ್ಯುತರಾಯ ಕಾಲವಾದ ನಂತರ ಸದಾಶಿವರಾಯನು ಆತನಿಗೆ ಪುಣ್ಯಲೋಕ ಪ್ರಾಪ್ತಿಯಾಗಲೆಂದು ತೆಕ್ಕಲಕೋಟೆಗೆ ಸಲ್ಲುವಂತಹ ತುಂಗಭದ್ರ ತೀರದ ನಿಟ್ಟೂರಿನ ಈ ಶ್ರೀವಿಟ್ಟ ಅಡೆಯ ದೇವರ ಅಮೃತ ಪಡಿಗೆ ದಾನ ನೀಡಲಾಗಿದೆ ಎಂದು ಅಂದಾಜಿಸಲಾಗಿದೆ. ಈ ಕುರಿತು ಹೆಚ್ಚಿನ ಅಧ್ಯಯನ ನಡೆಯಬೇಕಿದೆ ಎಂದು ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಮೈಸೂರು ಶಾಸನ ನಿರ್ದೇಶಕರ ಕಚೇರಿಯ ಸಿಬ್ಬಂದಿ ನಾಗೇಂದ್ರ, ನಿಶಾಂತ್ ಕುಮಾರ್ ಗೌರವ್, ಇತಿಹಾಸ ಸಂಶೋಧನಾರ್ಥಿಗಳಾದ ಮನೋಹರ ಸಿ.ಎಂ, ಎಂ ಹೊನ್ನೂರ, ನಿಟ್ಟೂರು ಮಂಜುನಾಥ ಭಾಗವಹಿಸಿದ್ದರು.























